ರಾಜ್ಯದಲ್ಲಿ ಆರ್ಥಿಕ ಸಮಾನತೆಗಾಗಿ ಪಂಚ ಗ್ಯಾರಂಟಿ ಯೋಜನೆ – ಸಚಿವ ಕೃಷ್ಣ ಭೈರೇಗೌಡ

Spread the love

ರಾಜ್ಯದಲ್ಲಿ ಆರ್ಥಿಕ ಸಮಾನತೆಗಾಗಿ ಪಂಚ ಗ್ಯಾರಂಟಿ ಯೋಜನೆ – ಸಚಿವ ಕೃಷ್ಣ ಭೈರೇಗೌಡ

ಉಡುಪಿ: ಸಂವಿಧಾನದ ಆಶಯದಂತೆ ಸಮಾನತೆ, ಪ್ರಜಾಪ್ರಭುತ್ವ ಇವರೆಡು ಆಶಯಗಳನ್ನು ಈಡೇರಿಸುವ ದಿಕ್ಕಿನಲ್ಲಿ ಹೆಚ್ಚಿನ ಪ್ರಯತ್ನ ಮಾಡಲು ನಮ್ಮನ್ನು ನಾವು ಸಮರ್ಪಣೆ ಮಾಡುವ ಪ್ರೇರಣೆಯ ದಿವಸ ಗಣರಾಜ್ಯೋತ್ಸವ ದಿನಾಚರಣೆ ಆಗಲಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಅವರು ಇಂದು ಉಡುಪಿ ನಗರದ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವದ ಸಂದೇಶ ನೀಡುತ್ತಾ ಮಾತನಾಡಿದರು.

ಪ್ರಜಾಫ್ರಭುತ್ವ ಸಾಕಷ್ಟು ಆಳವಾಗಿ ಬೇರೂರಿದ್ದರೂ ಆರ್ಥಿಕ ಪ್ರಗತಿಯನ್ನು ಸಾಧಿಸಿದ್ದು, ಇನ್ನೂ ಸಂಪೂರ್ಣ ಸಮಾನತೆ ನನಸಾಗಿಲ್ಲ. ದೇಶದಲ್ಲಿ ಇಂದು ಪ್ರಜಾಪ್ರಭುತ್ವ ಇದ್ದದೂ ಕೂಡ ಆರ್ಥಿಕ ಅಸಮಾನತೆ ಬೆಳೆಯುತ್ತಿದೆ. ದೇಶದಲ್ಲಿ ಕೆಲವು ಶ್ರೀಮಂತರಾಗುತ್ತಿದ್ದಾರೆ. ದೇಶದ ಬಡಜನರ ದುಡಿಮೆ ಕೆಲವೇ ಕೆಲವು ಶ್ರೀಮಂತರ ಕೈಗೆ ಸೇರುತ್ತಿದೆ. ದೇಶದ ಆಸ್ತಿಯ ಆದಾಯ ಶ್ರೀಮಂತರ ಪಾಲಾದರೆ ದುಡಿಯುವ ವರ್ಗಕ್ಕೆ ಬರೀ ದುಡಿಮೆಯಾದರೆ ನಮ್ಮ ಸಂವಿಧಾನದ ಆಶಯವೂ ಈಡೇರುವುದಿಲ್ಲ. ಅದು ಸಮಾನ ದೇಶವೂ ಆಗುವುದಿಲ್ಲ. ನಾಳೆಯ ದಿನಗಳಲ್ಲಿ ಇದು ಪ್ರಜಾಪ್ರಭುತ್ವಕ್ಕೂ ತೊಂದರೆಯಾಗುತ್ತದೆ. ಯಾಕೆಂದರೆ ಇದು ಶೋಷಣೆಯಾಗುತ್ತದೆ. ಶೋಷಣೆಯ ವಿರುದ್ಧ ಒಂದುಲ್ಲಾ ಒಂದು ದಿನ ಧ್ವನಿ ಕೈ ಎತ್ತಿದಾಗ ದೇಶದಲ್ಲಿ ತೊಂದರೆಗಳೂ ಸಹ ಉದ್ಭವವಾಗುತ್ತದೆ. ಇಂದು ದೇಶದಲ್ಲಿ ಬೆಳೆಯುತ್ತಿರುವ ಆರ್ಥಿಕ ಅಸಮಾನತೆ ಅದರ ವಿರುದ್ಧ ನಾವೆಲ್ಲರೂ ಪ್ರಯತ್ನ ಮಾಡಬೇಕಿದೆ. ದೇಶದ ಆಸ್ತಿ ಆದಾಯ ಎಲ್ಲರಿಗೂ ಪಾಲು ಸಿಗಬೇಕು. ದಿಕ್ಕಿನಲ್ಲಿ ಹೆಚ್ಚಿನ ಪ್ರಯತ್ನ ಮಾಡೋಣ ಎಂದರು.

ರಾಜ್ಯದಲ್ಲಿ ಆರ್ಥಿಕ ಸಮಾನತೆ ಎಲ್ಲರಿಗೂ ಸಿಗಬೇಕು ಎಂಬ ಉದ್ದೇಶದಿಂದ ಪಂಚ ಗ್ಯಾರಂಟಿಗಳನ್ನು ಜಾರಿಗೆ ತರಲಾಯಿತು. ಗೃಹಲಕ್ಷ್ಮೀ ಯೋಜನೆಯಡಿ ರಾಜ್ಯದ ಬಡ ಹೆಣ್ಣುಮಕ್ಕಳಿಗೆ ಆರ್ಥಿಕವಾಗಿ ಪ್ರತೀ ತಿಂಗಳು 2000 ರೂ. ಗಳ ನೆರವನ್ನು 1.22 ಕೋಟಿ ಗೂ ಹೆಚ್ಚು ಜನರಿಗೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಹೆಣ್ಣೂ ಮಕ್ಕಳು ಉಚಿತವಾಗಿ ಸಂಚರಿಸಲು ಅನುಕೂಲವಾಗುವಂತೆ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಿಂದವೂ ಸಹ ಆರ್ಥಿಕ ಹೊರೆ ಕಡಿಮೆಯಾಗಿದೆ. ರಾಜ್ಯದಲ್ಲಿ ಈವರೆಗೂ 365.42 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಸಾರಿಗೆಯ ಸೌಲಭ್ಯವನ್ನು ಪಡೆದಿದ್ದಾರೆ ಎಂದರು.

ಮನೆಯ ಖರ್ಚನ್ನು ಕಡಿಮೆ ಮಾಡಲು ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಿಂದ ರಾಜ್ಯದಲ್ಲಿ ಸುಮಾರು 1.63 ಕೋಟಿಗೂ ಅಧಿಕ ಕುಟುಂಬಗಳಿಗೆ ಉಚಿತ ವಿದ್ಯುತ್ ಸೌಲಭ್ಯವನ್ನು ನೀಡಲಾಗಿದೆ. ಬಡವರಿಗೆ 5 ಕೆ.ಜಿ ಅಕ್ಕಿಯ ಜೊತೆಗೆ ಮನೆಗೆ ಅಗತ್ಯವಿರುವ ಇತರೆ ಧವಸಧಾನ್ಯಗಳನ್ನು ಕೊಳ್ಳಲು ಅನುಕೂಲವಾಗುವಂತೆ ಅನ್ನಭಾಗ್ಯ ಯೋಜನೆಯಡಿ ಸುಮಾರು 1.19 ಕೋಟಿ ಪಡಿತರ ಚೀಟಿದಾರರ 4.30 ಕೋಟಿ ಜನರಿಗೆ ಪ್ರತೀ ತಿಂಗಳು ಕೂಡ ಖಾತೆಗೆ ತಲಾ 170 ರೂ. ನಂತೆ ಜಮಾ ಮಾಡಲಾಗುತ್ತಿದೆ.
ನಿರುದ್ಯೋಗಿ ಪದವಿ ಪಡೆದ ಯುವಜನರಿಗೂ ಸಹ ಆರ್ಥಿಕ ನೆರವನ್ನು ನೀಡಲಾಗುತ್ತಿದ್ದು, ರಾಜ್ಯದಲ್ಲಿ 1.65 ಲಕ್ಷ ಅಭ್ಯರ್ಥಿಗಳಿಗೆ ಈವರೆಗೆ 252 ಕೋಟಿ ರೂ. ಹಣವನ್ನು ಡಿ.ಬಿ.ಟಿ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದರು.

ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಶೇ.30 ರಷ್ಟು ಅನೇಕ ದಾಖಲೆಗಳು ಇಲ್ಲದೇ ಇರುವುದಾಗಿ ಕೇಳಿ ಬಂದಿದೆ. ಇರುವ ದಾಖಲೆಗಳನ್ನು ಎಲ್ಲಾ ತಹಶೀಲ್ದಾರ್ಗಳ ಕಚೇರಿಯಲ್ಲಿ ಡಿಜಿಟಲೀಕರಣ ಅಂದರೆ ಸ್ಕ್ಯಾನಿಂಗ್ ಮಾಡುವಂತಹ ಭೂ ಸುರಕ್ಷಾ ಯೋಜನೆಗೆ ರಾಜ್ಯಾದ್ಯಂತ ಚಾಲನೆ ನೀಡಲಾಗಿದೆ ಎಂದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಕ್ತಿಯನ್ನು ತುಂಬಿದಾಗ ಮಾತ್ರ ಸಂವಿಧಾನದ ಆಶಯ ಈಡೇರುತ್ತದೆ. ನಮ್ಮ ಸರ್ಕಾರ ಇದನ್ನು ಈಡೇರಿಸುವ ಕೆಲಸ ಮಾಡುತ್ತಿದೆ. ಇವತ್ತಿಗೂ ಅನೇಕ ಸಮಸ್ಯೆಗಳು ನಮ್ಮ ಸಮಾಜವನ್ನು ಕಾಡುತ್ತಿವೆ. ಆರ್ಥಿಕ ಅಸಮಾನತೆ, ಪ್ರಾದೇಶಿಕ ಅಸಮಾನತೆ, ಸಮಾಜದಲ್ಲಿ ಸಂಘರ್ಷಗಳು, ಬಡತನ ಜನರನ್ನು ಇಂದಿಗೂ ಸಹ ಕಾಡುತ್ತಿದೆ. ಇಂತಹ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಉಡುಪಿ ಜಿಲ್ಲೆಯು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಹೆಸರುವಾಸಿಯಾಗಿದೆ. ಕಲೆ, ಸಂಸ್ಕೃತಿ ವಿಷಯಕ್ಕೆ ಬಂದಲ್ಲಿ ರಾಜ್ಯಕ್ಕೆ ಹಾಗೂ ದೇಶಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿ ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟಿದೆ ಎಂದರು.

ಈ ಹಿಂದೆ ಪ್ರಜೇಗಳೇ ಪ್ರಭುಗಳಾಗದೇ ರಾಜಮನೆತನಗಳ ಆಳ್ವಿಕೆಯಲ್ಲಿ ಆಳುಗಳಾಗಿ ಬೆಳೆಯುತ್ತಿದ್ದರು. ದೇಶದಲ್ಲಿ ಪ್ರಜೆಗಳಿಗೆ ಹಕ್ಕುಗಳೇ ಇರಲಿಲ್ಲ. ಸಮಾನತೆ ಇಲ್ಲದೇ, ಮೇಲು ಜಾತಿ, ಕೆಳ ಜಾತಿ ಕೀಳು ಮನೋಭಾವದಿಂದ ಕೂಡಿದ ಇತಿಹಾಸ ಇತ್ತು. ನಮ್ಮನ್ನು ಆಳಿದ ಹೊರರಾಜ್ಯದ ರಾಜರು ಹಾಗೂ ಬ್ರಿಟಿಷರು ಎಲ್ಲೂ ಸಹ ಸಮಾನತೆಯನ್ನು ಕೊಡಲಿಲ್ಲ. ಆದರೆ ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಸಮಾನರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಷ್ಟçಪತಿಯಿಂದ ಹಿಡಿದು ಸಫಾಯಿ ಕರ್ಮಚಾರಿಯವರೆಗೂ ಎಲ್ಲರೂ ಲಿಂಗ, ಜಾತಿ, ಧರ್ಮ, ಜನಾಂಗ, ಭಾಷೆ ಬೇಧಭಾವವಿಲ್ಲದೇ ಸಮಾನರಾಗಿದ್ದೇವೆ. ಅದು ನಮ್ಮ ಸಂವಿಧಾನದಿAದ ಎಂದರು.

ನಾವು ಸ್ವಾತಂತ್ರ್ಯವನ್ನು ಪಡೆದು ಸಂವಿಧಾನ ರಚಿಸಿಕೊಂಡಾಗ ದೇಶದ ಒಳಗೆ ಹಾಗೂ ಹೊರಗೆ ಕೆಲವರು ಸೇರಿದಂತೆ ಬ್ರಿಟೀಷರು ನಮ್ಮನ್ನು ನಾವು ಆಳುವ ಶಕ್ತಿ ಇಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಅಸಕ್ತರು ಎಂದು ಭವಿಷ್ಯ ನುಡಿದಿದ್ದರು. ಆದರೆ ಅದನ್ನು ಎಲ್ಲರ ಭವಿಷ್ಯ ನುಡಿಗಳನ್ನು ಹುಸಿಯಾಗಿಸಿ, ಭಾರತ 76 ವರ್ಷಗಳ ಕಾಲ ಪ್ರಜಾಪ್ರಭುತ್ವವಾಗಿ ಸಮಾನತೆಯ ಸಂದೇಶವನ್ನು ಗುರಿಯಾಗಿರಿಸಿಕೊಂಡು ಪ್ರಪಂಚದ ದೇಶಗಳೆದುರು ದಾಪುಗಾಲು ಹಾಕುತ್ತಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಯಶ್ಪಾಲ್ ಎ ಸುವರ್ಣ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ವಿಧಾನಪರಿಷತ್ ಶಾಸಕ ಮಂಜುನಾಥ್ ಭಂಡಾರಿ, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್.ಕೆ, ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಮಿಥುನ್ ಹೆಚ್.ಎನ್, ಕಾರ್ಕಳ ವೈಲ್ಡ್ಲೈಫ್ ಡಿ.ಎಫ್.ಓ ಶಿವರಾಮ ಎಂ ಬಾಬು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ:
ಕೃಷಿ ಇಲಾಖೆಯ ವತಿಯಿಂದ 2024-25 ನೇ ಸಾಲಿನ ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ ಹಾಗೂ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ರೈತರುಗಳಾದ ವಿಭಾಗ-1 ರಲ್ಲಿ ಪ್ರಕಾಶ್ ಚಂದ್ರ, ಸೋಮ ಕುಲಾಲ್, ಆದಿತ್ಯ ಶೆಟ್ಟಿ, ಶರತ್ ಕುಮಾರ್, ಸ್ಟೀಫನ್ ಬಾಸಿಲ್, ನೇಮಿರಾಜ್, ಭಾಸ್ಕರ್ ಪೂಜಾರಿ ಹಾಗೂ ವಿಭಾಗ-2 ರಲ್ಲಿ ತಿಮ್ಮಪ್ಪ, ವೆಲೇರಿಯನ್, ವನಜ ಪೂಜಾರಿ, ಬೇಬಿ ಶೆಡ್ತಿ, ಸ್ಮಿತಾ ನಾಯಕ್ ಹಾಗೂ ಗುಂಡು ಗಾಣಿಗ ಅವರುಗಳನ್ನು ಸನ್ಮಾನಿಸಲಾಯಿತು.

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಕರ್ಷಕವಾಗಿ ಪಥ ಸಂಚಲನ ನಡೆಸಿದ ಕಾಲೇಜು ವಿಭಾಗದಲ್ಲಿ ಕುಂಜಿಬೆಟ್ಟು ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜು ಪ್ರಥಮ, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಎನ್.ಸಿ.ಸಿ ನೇವಿ ಪ್ರಥಮ, ಉಡುಪಿಯ ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜು ನೇವಿ ವಿಭಾಗ ದ್ವಿತೀಯ ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಎನ್.ಸಿ.ಸಿ ಆರ್ಮಿ ವಿಭಾಗ ತೃತೀಯ ಸ್ಥಾನ ಪಡೆಯಿತು.

ಪ್ರೌಢ ಶಾಲಾ ವಿಭಾಗದಲ್ಲಿ ಆವರ್ಸೆ ಸರಕಾರಿ ಪ್ರೌಢಶಾಲೆ ಎನ್.ಸಿ.ಸಿ ವಿಭಾಗ ಪ್ರಥಮ, ಉಡುಪಿ ಸೈಂಟ್ ಸಿಸಿಲಿ ಪ್ರೌಢಶಾಲೆ (ಹುಡುಗಿಯರು) ದ್ವಿತೀಯ ಹಾಗೂ ಕಡಿಯಾಳಿಯ ಯು. ಕಮಲಾಭಾಯಿ ಪ್ರೌಢಶಾಲೆ ತೃತೀಯ ಸ್ಥಾನ ಪಡೆಯಿತು.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಂತೆಕಟ್ಟೆ ಕಳತ್ತೂರು ಸರ್ಕಾರಿ ಪ್ರಾಥಮಿಕ ಶಾಲೆ ಪ್ರಥಮ ಹಾಗೂ ಒಳಕಾಡು ಸರಕಾರಿ ಪ್ರಾಥಮಿಕ ಶಾಲೆ ದ್ವಿತೀಯ ಸ್ಥಾನ ಪಡೆಯಿತು.

ದೇಶಭಕ್ತಿ ಕುರಿತಾದ ನೃತ್ಯ ಕಾರ್ಯಕ್ರಮದಲ್ಲಿ ಒಳಕಾಡು ಸ.ಹಿ.ಪ್ರಾ.ಶಾಲೆ ಪ್ರಥಮ, ಉಡುಪಿಯ ಸೈಂಟ್ ಮೇರೀಸ್ ದ್ವಿತೀಯ ಮತ್ತು ಉಡುಪಿಯ ಮುಕುಂದ ಕೃಪ ಹೈಸ್ಕೂಲ್ ಮತ್ತು ಉಡುಪಿಯ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಇಂಗ್ಲೀಷ್ ಮೀಡಿಯಂ ಶಾಲೆ ತೃತೀಯ ಸ್ಥಾನ ಪಡೆಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಅಸಾಧಾರಣ ಸಾಧನೆ ಮಾಡಿದ ಕಲೆ, ಸಾಂಸ್ಕೃತಿಕ ಮತ್ತು ಸಂಗೀತ ಕ್ಷೇತ್ರದಲ್ಲಿ ಕಾರ್ಕಳ ತಾಲೂಕು ಪ್ರಥಮ ಬಿ.ಇ ವಿದ್ಯಾರ್ಥಿನಿ ಶರಣ್ಯ ತಂತ್ರಿ ನಂದಳಿಕೆ ಹಾಗೂ ಉಡುಪಿ ಉದ್ಯೋದಯ ಪಬ್ಲಿಕ್ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ವಿಶ್ರುತ ಸಾಮಗ.

ಕ್ರೀಡಾ ಕ್ಷೇತ್ರದಲ್ಲಿ ಉಡುಪಿ ತಾಲೂಕಿನ ದಿಶಾ ಯು.ಎ ಹಾಗೂ ಉಡುಪಿ ತಾಲೂಕು ಟಿ.ಎ.ಪೈ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿ ವೈಷ್ಣವ್ ಎಲ್ ಉಪಾಧ್ಯ.

ನಾವೀನ್ಯತೆ ಕ್ಷೇತ್ರದಲ್ಲಿ ಉಡುಪಿ ತಾಲೂಕು ಪ್ರಥಮ ಪಿ.ಯು.ಸಿ ವಿದ್ಯಾರ್ಥಿನಿ ಅಮೂಲ್ಯ ಹೆಗ್ಡೆ ಹಾಗೂ ಬ್ರಹ್ಮಾವರದ ಸರಕಾರಿ ಹಿರಿಯ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಪ್ರತೀಕ್ಷಾ ಮತ್ತು ತಾರ್ಕಿಕ ಸಾಧನೆಗಳು ಕ್ಷೇತ್ರದಲ್ಲಿ ಉಡುಪಿ ತಾಲೂಕಿನ 9 ನೇ ತರಗತಿಯ ವಿದ್ಯಾರ್ಥಿ ಜಿಶ ಜಿತೇಶ್ ಹಾಗೂ ಉಡುಪಿಯ 9 ನೇ ತರಗತಿ ವಿದ್ಯಾರ್ಥಿ ಎಸ್.ವಿ ಹರಿಹರಸೂಧನ್.


Spread the love