ರಾಜ್ಯದಲ್ಲಿ ಗೋಧ್ರಾ ರೀತಿ ಘಟನೆ ಹೇಳಿಕೆ: ಬಿಕೆ ಹರಿಪ್ರಸಾದ್ ವಿಚಾರಣೆ ನಡೆಸಿದ ಸಿಸಿಬಿ
ಬೆಂಗಳೂರು: ಕರ್ನಾಟಕದಲ್ಲಿ ಗೋಧ್ರಾ ರೀತಿಯ ಘಟನೆ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಿರುವ ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ಅವರನ್ನು ಶುಕ್ರವಾರ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದರು. ಕೆಕೆ ಗೆಸ್ಟ್ಹೌಸ್ನಲ್ಲಿ ಹರಿಪ್ರಸಾದ್ ವಿಚಾರಣೆ ನಡೆಸಲಾಯಿತು. ಇದೇ ವೇಳೆ, ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ ಹರಿಪ್ರಸಾದ್, ನನಗೆ ವಿವಿಐಪಿ ಟ್ರೀಟ್ಮೆಂಟ್ ಬೇಡ, ಬೇಕಿದ್ದರೆ ಅರೆಸ್ಟ್ ಮಾಡಿ ಎಂದರು. ಅವರ ವಿಚಾರಣೆಗೆ ಒಳಪಡಿಸುವಂತೆ ನಿರ್ದೇಶನ ನೀಡಿರುವ ಸರ್ಕಾರದ ನಡೆಗೆ ಹರಿಪ್ರಸಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಕಾಂಗ್ರೆಸ್ ಸರ್ಕಾರವಾ, ಆರ್ಎಸ್ಎಸ್ ಸರ್ಕಾರವಾ: ಹರಿಪ್ರಸಾದ್ ಪ್ರಶ್ನೆ
ಸಿಸಿಬಿ ವಿಚಾರಣೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಹರಿಪ್ರಸಾದ್, ಇದು ಕಾಂಗ್ರೆಸ್ ಸರ್ಕಾರವೇ ಅಥವಾ ಆರ್ಎಸ್ಎಸ್ ಸರ್ಕಾರವೇ ಎಂದು ಪ್ರಶ್ನಿಸಿದ್ದಾರೆ. ನಾನು ಯಾವ ಸರ್ಕಾರದಲ್ಲಿ ಇದ್ದೇನೆ ಎಂದು ಅರ್ಥವಾಗುತ್ತಿಲ್ಲ. ಬೇಕಿದ್ದರೆ ಮಂಪರು ಪರೀಕ್ಷೆ ಮಾಡಿ ಎಂದು ಪೊಲೀಸರಿಗೆ ಹೇಳಿದ್ದೇನೆ. ಸ್ಟೇಷನ್ಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಿ. ನನ್ನ ಜತೆಗೆ ವಿಜಯೇಂದ್ರ ಅವರನ್ನು ಕೂಡ ಮಂಪರು ಪರೀಕ್ಷೆಗೆ ಒಳಪಡಿಸಲಿ. ನನ್ನ ಪರಿಸ್ಥಿತಿಯೇ ಹೀಗಾದರೆ ಕಾಂಗ್ರೆಸ್ ಕಾರ್ಯಕರ್ತರ ಕಥೆ ಏನು ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲ. ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ನಾನು ಇವರ ಬೆದರಿಕೆಗಳಿಗೆಲ್ಲ ಜಗ್ಗಲ್ಲ. ಅಂದು ಕೊಟ್ಟ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ರಾಮ ಮಂದಿರಕ್ಕೆ ಹೋಗುವವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಹರಿಪ್ರಸಾದ್ ಹೇಳಿದರು.
ಏನು ಹೇಳಿದ್ದರು ಹರಿಪ್ರಸಾದ್?
ಜನವರಿ 22ರಂದು ಅಯೋಧ್ಯೆಗೆ ತೆರಳುವವರಿಗೆ ಸರ್ಕಾರ ರಕ್ಷಣೆ ನೀಡಬೇಕು. ರಾಜ್ಯದಲ್ಲಿ ಗೋಧ್ರಾ ರೀತಿ ಮತ್ತೆ ದುರಂತ ಸಂಭವಿಸುವ ಮಾಹಿತಿ ಇದೆ. ಹೀಗಾಗಿ ಅಯೋಧ್ಯೆಗೆ ತೆರಳುವವರಿಗೆ ರಕ್ಷಣೆ ಒದಗಿಸುವ ಕೆಲಸ ಆಗಬೇಕು ಎಂದು ಬೆಂಗಳೂರಿನಲ್ಲಿ ಇತ್ತೀಚೆಗೆ ಹರಿಪ್ರಸಾದ್ ಹೇಳಿದ್ದರು. ಈ ಹೇಳಿಕೆಗೆ ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಹರಿಪ್ರಸಾದ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂಬ ಆಗ್ರಹವೂ ವ್ಯಕ್ತವಾಗಿತ್ತು.