ರಾಜ್ಯದಲ್ಲಿ ಲಾಕ್ ಡೌನ್ ಮೇ 3ರವರೆಗೆ ವಿಸ್ತರಣೆ, ನಾಳೆಯಿಂದ ಇನ್ನಷ್ಟು ಕಠಿಣ ಕಾನೂನು ಜಾರಿಗೆ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ -19 ಲಾಕ್ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಲು ಕರ್ನಾಟಕ ಕ್ಯಾಬಿನೆಟ್ ನಿರ್ಧರಿಸಿದೆ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ.
ಇಂದಿನಿಂದೆ ಐಟಿ-ಬಿಟಿ ಕಂಪನಿ ತೆರೆಯಲಿದೆ ಎಂದು ಹೇಳಲಾಗಿತ್ತು. ಆದರೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಐಟಿ-ಬಿಟಿ ಕಂಪನಿ ಪುನಾರಂಭಕ್ಕೆ ಅನುಮತಿ ನೀಡಬಾರದೆಂದು ತೀರ್ಮಾನಿಸಲಾಗಿದೆ ಎಂದು ಮಾಧುಸ್ವಾಮಿ ಹೇಳಿದ್ದಾರೆ. ಅಲ್ಲದೆ ಮೇ 3ರ ತನಕ ಲಾಕ್ಡೌನ್ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಹಾಗಾಗಿ ಯಾವುದೇ ರಿಯಾಯಿತಿ ಇರುವುದಿಲ್ಲ ಎಂದು ಅವರು ವಿವರಿಸಿದರು.
ಕೇರಳ, ಉತ್ತರ ಪ್ರದೇಶ ಮಾದರಿಯಲ್ಲಿ ಲಾಕ್ ಡೌನ್ ಜಾರಿಗೆ ತರಲು ಸಂಪುಟ ಸಭೆ ತೀರ್ಮಾನಿಸಿದ್ದು ನಾಳೆಯಿಂದ ಇನ್ನಷ್ಟು ಕಠಿಣ ಕಾನೂನು ಜಾರಿಗೆ ತರಲಾಗುತ್ತದೆ. ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಂದ ನಂತರವಷ್ಟೇ ಲಾಕ್ ಡೌನ್ ಸಡಿಲಿಕೆ ಸಂಬಂಧ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಪಾದರಾಯನಪುರ ಪ್ರಕರಣದ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಲಲಿದೆ ಎಂದು ಸಚಿವರು ಹೇಳಿದ್ದಾರೆ.
ರಾಜ್ಯದಲ್ಲಿ ಇಂದು ಮತ್ತೆ ಐದು ಕೊರೋನಾ ಪ್ರಕರಣ ದಾಖಲಾಗಿದ್ದು ಒಟ್ಟಾರೆ 395 ಕೊರೋನಾ ಪ್ರಕರಣ ವರದಿಯಾಗಿದೆ. ರಾಜ್ಯದಲ್ಲಿ 16 ಮಂದಿ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ.