Home Mangalorean News Kannada News ರಾಜ್ಯದ ಜನತೆ ಮುಂದೆ ಬಹಿರಂಗ ಚರ್ಚೆಗೆ ಬನ್ನಿ: ನಿರ್ಮಲಾಗೆ ಸಿದ್ದರಾಮಯ್ಯ ತಿರುಗೇಟು

ರಾಜ್ಯದ ಜನತೆ ಮುಂದೆ ಬಹಿರಂಗ ಚರ್ಚೆಗೆ ಬನ್ನಿ: ನಿರ್ಮಲಾಗೆ ಸಿದ್ದರಾಮಯ್ಯ ತಿರುಗೇಟು

Spread the love

ರಾಜ್ಯದ ಜನತೆ ಮುಂದೆ ಬಹಿರಂಗ ಚರ್ಚೆಗೆ ಬನ್ನಿ: ನಿರ್ಮಲಾಗೆ ಸಿದ್ದರಾಮಯ್ಯ ತಿರುಗೇಟು
 

ಬೆಂಗಳೂರು: ಕರ್ನಾಟಕಕ್ಕೆ ಬರ ಪರಿಹಾರ ಅನುದಾನ ಬಿಡುಗಡೆ ವಿಳಂಬವಾಗಲು ಕೇಂದ್ರ ಸರ್ಕಾರ ಕಾರಣವಲ್ಲ ಎಂಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳುಗಳ ಮೇಲೆಯೇ ರಾಜಕಾರಣ ನಡೆಸುತ್ತಾ ಬಂದಿರುವ ಬಿಜೆಪಿಗೆ ಸತ್ಯ ಹೇಳಿ ಅಭ್ಯಾಸ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಸರಣಿ ಪೋಸ್ಟ್‌ ಮಾಡಿರುವ ಸಿದ್ದರಾಮಯ್ಯ, ‘ಏಪ್ರಿಲ್‌ 2ರಂದು ಕರ್ನಾಟಕಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಒಂದಷ್ಟು ಸುಳ್ಳುಗಳನ್ನು ಹೇಳಿ ಹೋಗಿದ್ದರು. ಈಗ ನಿರ್ಮಲಾ ಅವರು ಬಂದು ಹಳೆಯ ಸುಳ್ಳುಗಳನ್ನು ಪುನರಾವರ್ತಿಸಿದ್ದಾರೆ. ಆದರೆ, ಕರ್ನಾಟಕ ಜನತೆಗೆ ಸತ್ಯ ತಿಳಿದಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯಗಳು ಮನದಟ್ಟಾಗಿದೆ’ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ₹697 ಕೋಟಿ ನೀಡಿದೆ ಎಂದು ನಿರ್ಮಲಾ ಅವರು ಹೇಳಿದ್ದಾರೆ. ಆದರೆ, ಇದನ್ನು ಹೇಳುವಾಗ ನಿಜವಾದ ಸತ್ಯವನ್ನು ಅವರು ಮುಚ್ಚಿಟ್ಟಿದ್ದಾರೆ. ಪ್ರಕೃತಿ ವಿಕೋಪದ ಪರಿಹಾರ ನೀಡಲು ಕೇಂದ್ರ ಸರ್ಕಾರದ ಅಡಿಯಲ್ಲಿ ಎರಡು ನಿಧಿಗಳಿವೆ. ಮೊದಲನೆಯದು ಎಸ್‌ಡಿಆರ್‌ಎಫ್‌ ಹಾಗೂ ಎರಡನೆಯದು ಎನ್‌ಡಿಆರ್‌ಎಫ್‌. ಸಾಮಾನ್ಯ ಸ್ವರೂಪದ ಪ್ರಕೃತಿ ವಿಕೋಪಕ್ಕೆ ಎಸ್‌ಡಿಆರ್‌ಎಫ್‌ನಿಂದ ಪರಿಹಾರ ನೀಡಲಾಗುವುದು. ಈ ನಿಧಿಯಡಿಯಲ್ಲಿ ನೀಡುವ ಪರಿಹಾರದಲ್ಲಿ ಶೇ.75 ರಷ್ಟು ಪಾಲನ್ನು ಕೇಂದ್ರ ನೀಡಿದರೆ ಉಳಿದ ಶೇ.25 ರಷ್ಟು ಪಾಲನ್ನು ರಾಜ್ಯ ಸರ್ಕಾರ ನೀಡುತ್ತದೆ. ಇದರಡಿಯಲ್ಲಿ ನೀಡುವ ಪರಿಹಾರದ ಮೊತ್ತವನ್ನು ಕೇಂದ್ರ ಹಣಕಾಸು ಆಯೋಗ ನಿರ್ಧಾರ ಮಾಡುತ್ತದೆ ಎಂದು ಸಿಎಂ ತಿಳಿಸಿದ್ದಾರೆ.

ಈ ಬಾರಿ ಬರಗಾಲದಿಂದಾಗಿ ರಾಜ್ಯ ಬಹಳ ನಷ್ಟವನ್ನು ಅನುಭವಿಸುತ್ತಿದೆ. ರಾಜ್ಯದ 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳು ಬರಗಾಲಕ್ಕೀಡಾಗಿವೆ. ರಾಜ್ಯದ 48 ಲಕ್ಷ ಹೆಕ್ಟೇರ್‌ ಪ್ರದೇಶದ 34 ಲಕ್ಷ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ನಮ್ಮ ರೈತರಿಗೆ ₹37 ಸಾವಿರ ಕೋಟಿಗೂ ಹೆಚ್ಚಿನ ನಷ್ಟ ಉಂಟಾಗಿದೆ. ಆದರೆ, ನಾವು ಕೇವಲ ₹18 ಸಾವಿರ ಕೋಟಿ ಪರಿಹಾರವನ್ನು ಮಾತ್ರ ಕೇಂದ್ರ ಸರ್ಕಾರದಿಂದ ಕೇಳುತ್ತಿದ್ದೇವೆ. ಈ ಪರಿಹಾರವನ್ನು ಎನ್‌ಡಿಆರ್‌ಎಫ್‌ನಿಂದಲೇ ಕೊಡಬೇಕಾಗುತ್ತದೆ. ಈ ಸತ್ಯವನ್ನು ನಿರ್ಮಲಾ ಅವರು ಮರೆಮಾಚುತ್ತಿದ್ದಾರೆ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಬರ ಪರಿಹಾರಕ್ಕಾಗಿ ಎನ್‌ಡಿಆರ್‌ಎಫ್‌ನಿಂದ ₹18,171 ಕೋಟಿ ನೀಡಬೇಕೆಂದು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಕೇಂದ್ರ ತಜ್ಞರ ತಂಡ ಭೇಟಿ ನೀಡಿ ಅಧ್ಯಯನ ನಡೆಸಿ ವರದಿಯನ್ನೂ ಕೊಟ್ಟಿದ್ದಾರೆ. ಇದಾದ ಬಳಿಕ ನಾನು (ಸಿದ್ದರಾಮಯ್ಯ) ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದೆವು. ನಮ್ಮ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಕೂಡ ನಿಮ್ಮನ್ನೂ ಭೇಟಿ ಮಾಡಿದ್ದರು. ಹೀಗಿದ್ದರೂ, ಬರ ಪರಿಹಾರದ ಕುರಿತು ತೀರ್ಮಾನ ಕೈಗೊಳ್ಳಬೇಕಾಗಿರುವ ಗೃಹ ಸಚಿವರ ನೇತೃತ್ವದ ಉನ್ನತಾಧಿಕಾರ ಸಮಿತಿ ಸಭೆಯನ್ನು ಇಲ್ಲಿಯವರೆಗೂ ನಡೆಸದೆ ಇರುವುದು ಕೇಂದ್ರ ಸರ್ಕಾರದ ಉದ್ದೇಶಪೂರ್ವಕ ಅನ್ಯಾಯ ಅಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ತೆರಿಗೆ ಹಂಚಿಕೆ ಮತ್ತು ಜಿಎಸ್‌ಟಿ ಪರಿಹಾರದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಪರಿಗಣಿಸಿ ಕೇಂದ್ರ ಹಣಕಾಸು ಆಯೋಗ ₹5,494 ಕೋಟಿ ವಿಶೇಷ ಅನುದಾನ ನೀಡಬೇಕೆಂದು ಶಿಫಾರಸು ಮಾಡಿತ್ತು. ಇದಲ್ಲದೆ, ಬೆಂಗಳೂರಿನ ಫೆರಿಫೆರಲ್‌ ರಿಂಗ್ ರಸ್ತೆಗೆ ₹3 ಸಾವಿರ ಕೋಟಿ ಮತ್ತು ಕೆರೆಗಳು ಸೇರಿದಂತೆ ಬೆಂಗಳೂರು ಜಲಮೂಲ ಅಭಿವೃದ್ಧಿಗೆ ₹3 ಸಾವಿರ ಕೋಟಿ ನೀಡಲು ಶಿಫಾರಸು ಮಾಡಿತ್ತು. ಆದರೆ, ಈ ಶಿಫಾರಸುಗಳನ್ನು ತಿರಸ್ಕರಿಸಿರುವ ಹಣಕಾಸು ಸಚಿವೆ ನಿರ್ಮಲಾ ಅವರು ರಾಜ್ಯಕ್ಕೆ ಸುಮಾರು ₹11,494 ಕೋಟಿ ನೀಡದೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ನಿರ್ಮಲಾ ಸುಳ್ಳು ಹೇಳುತ್ತಿದ್ದಾರೆ. 15ನೇ ಹಣಕಾಸು ಆಯೋಗ ತನ್ನ ಮೊದಲ ವರದಿಯಲ್ಲಿ ಶಿಫಾರಸು ಮಾಡಿದ್ದ ₹5,495 ಕೋಟಿ ಪರಿಹಾರದ ಉಲ್ಲೇಖ ಅಂತಿಮ ವರದಿಯಲ್ಲಿ ಇಲ್ಲ ಎಂದು ಅವರು ಹೇಳಿರುವುದು ಸತ್ಯಕ್ಕೆ ದೂರವಾದ ಮಾತು. 15ನೇ ಹಣಕಾಸು ಆಯೋಗ ಪ್ರಾಥಮಿಕ ಮತ್ತು ಅಂತಿಮ ವರದಿ ನೀಡಿಲ್ಲ. 2020-21ರಲ್ಲಿ ಒಂದು ವರ್ಷಕ್ಕೆ ಸೀಮಿತವಾದ ವರದಿಯನ್ನು ನೀಡಿದ್ದ ಹಣಕಾಸು ಆಯೋಗ, 2021-26ರ ಅವಧಿಗೆ ಎರಡನೇ ವರದಿಯನ್ನು ನೀಡಿತ್ತು. ಮೊದಲ ವರದಿಯ ಯಾವ ಅಂಶಗಳನ್ನೂ ಎರಡನೇ ವರದಿಯಲ್ಲಿ ಸೇರಿಸಿಲ್ಲ. ಈ ಸತ್ಯವನ್ನು ನಿರ್ಮಲಾ ಅವರು ಮುಚ್ಚಿಟ್ಟು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಸಿಎಂ ವಾಗ್ದಾಳಿ ನಡೆಸಿದ್ದಾರೆ.

ನಿರ್ಮಲಾ ಸೀತಾರಾಮನ್‌ ಅವರೇ ರಾಜ್ಯಕ್ಕೆ ಮತ್ತೆ ಮತ್ತೆ ಬಂದು ಸುಳ್ಳು ಹೇಳುವ ಶ್ರಮ ತೆಗೆದುಕೊಳ್ಳಬೇಡಿ. ಒಂದೇ ಒಂದು ಬಾರಿ ಮುಖಾಮುಖಿ ಚರ್ಚೆಗೆ ಬನ್ನಿ. ರಾಜ್ಯದ ಜನತೆಯ ಸಮಕ್ಷಮದಲ್ಲಿ ಬಹಿರಂಗ ಚರ್ಚೆಯಲ್ಲಿ ಪಾಲ್ಗೊಳ್ಳುವ ಕೆಲಸ ಮಾಡಿ. ಯಾರದ್ದು ಸತ್ಯ, ಯಾರದ್ದು ಸುಳ್ಳು ಎನ್ನುವುದನ್ನು ಜನರೇ ತೀರ್ಮಾನಿಸಲಿ ಎಂದು ಸಿಎಂ ಸಿದ್ದರಾಮಯ್ಯ ಚರ್ಚೆಗೆ ಆಹ್ವಾನಿಸಿದ್ದಾರೆ.


Spread the love

Exit mobile version