ರಾಜ್ಯದ ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆ: ಧರ್ಮಸ್ಥಳದಿಂದ ನೂತನ ಯೋಜನೆ ಪ್ರಕಟ
ಉಜಿರೆ: ಸ್ವಚ್ಛತೆ ಎಂಬುದು ಸಂಸ್ಕøತಿಯ ಪ್ರತೀಕವಾಗಿದೆ. ರಾಜ್ಯದ ಎಲ್ಲಾ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಅಂತರಂಗ (ಕೇಂದ್ರ ಒಳಗೆ) ಮತ್ತು ಬಹಿರಂಗ (ಕೇಂದ್ರ ಪರಿಸರ) ಸ್ವಚ್ಛತೆಯನ್ನು ಮಾಡಿ ಪಾವಿತ್ರ್ಯತೆಯನ್ನು ಕಾಪಾಡಲು ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ನೇತೃತ್ವದಲ್ಲಿ ನೂತನ ಯೋಜನೆಯೊಂದನ್ನು ರೂಪಿಸಲಾಗಿದೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.
ಅವರು ಧರ್ಮಸ್ಥಳದಲ್ಲಿ ಶ್ರೀ ಸನ್ನಿಧಿ ಅತಿಥಿ ಗೃಹದಲ್ಲಿ ಗುರುವಾರ ಸಮಾಲೋಚನಾ ಸಭೆಯ ಬಳಿಕ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸ್ವಚ್ಛತೆ ಇದ್ದಲ್ಲಿ ಸಾನ್ನಿಧ್ಯ ವೃದ್ಧಿಯಾಗುತ್ತದೆ, ಬೆಳಗುತ್ತದೆ. ಧನಾತ್ಮಕ ಚಿಂತನೆಯೊಂದಿಗೆ ಶ್ರದ್ಧಾ ಕೇಂದ್ರಗಳ ಆಡಳಿತ ನಡೆಸುವವರಲ್ಲಿ ಮತ್ತು ಭಕ್ತಾದಿಗಳಲ್ಲಿ ಸ್ವಚ್ಛತೆ ಬಗ್ಯೆ ಅರಿವು ಮತ್ತು ಜಾಗೃತಿ ಮೂಡಿಸಲಾಗುವುದು. ಮೊದಲ ಹಂತವಾಗಿ 2017ರ ಜನವರಿ 14 ಮಕರ ಸಂಕ್ರಾಂತಿಗೆ ಮೊದಲು ಅಂದರೆ ಜನವರಿ 13ರೊಳಗೆ ರಾಜ್ಯದ ಎಲ್ಲಾ ಶ್ರದ್ಧಾ ಕೇಂದ್ರಗಳ (ದೇವಾಲಯ, ದೈವಸ್ಥಾನ, ಚರ್ಚ್, ಮಸೀದಿ) ಸ್ವಚ್ಛತೆಯೊಂದಿಗೆ ಪಾವಿತ್ರ್ಯತೆ ಕಾಪಾಡಲು ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗುವುದು. ಈ ಬಗ್ಯೆ ಸಾರ್ವಜನಿಕ ಪ್ರಜ್ಞೆಯೊಂದಿಗೆ ಜಾಗೃತಿ ಮೂಡಿಸಲಾಗುವುದು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಯೋಗ ಸಂಘ, ಭಜನಾ ಪರಿಷತ್ ಮೊದಲಾದ ಸಂಘಟನೆಗಳ ಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನ ಅನುಷ್ಠಾನಗೊಳಿಸಲಾಗುವುದು ಎಂದು ಹೆಗ್ಗಡೆಯವರು ಹೇಳಿದರು.
ತಾನು ಕೂಡಾ ಕೆಲವು ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡಿ ಯೋಜನೆಯ ಅನುಷ್ಠಾನಕ್ಕೆ ಮಾರ್ಗದರ್ಶನ ನೀಡುವುದಾಗಿ ಅವರು ತಿಳಿಸಿದರು.
ಎಲ್ಲರೂ ದೃಢ ಸಂಕಲ್ಪದೊಂದಿಗೆ ಸಹಕರಿಸಬೇಕೆಂದು ಕೋರಿದ ಅವರು ಮುಂದೆ ಒಂದು ತಿಂಗಳ ಬಳಿಕ ಸ್ವಚ್ಛತಾ ಅಭಿಯಾನದ ಸಮಸ್ಯೆಗಳ ಬಗ್ಯೆ ಚರ್ಚಿಸಲು ಇನ್ನೊಂದು ಸಮಾಲೋಚನಾ ಸಭೆ ಕರೆಯಲಾಗುವುದು. ಅದಕ್ಕೆ ಮುಜರಾಯಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳನ್ನು ಆಮಂತ್ರಿಸಲಾಗುವುದು ಎಂದು ಅವರು ಹೇಳಿದರು.
ಮಾಧ್ಯಮಗಳ ಸಹಕಾರ: ಧರ್ಮ ಮತ್ತು ನೈತಿಕತೆ ಪ್ರತ್ಯೇಕಿಸಲು ಸಾಧ್ಯವಿಲ್ಲ. ಮಾಧ್ಯಮಗಳು ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆಯ ಮಹತ್ವದ ಬಗ್ಯೆ ಅರಿವು, ಜಾಗೃತಿ ಮೂಡಿಸಬೇಕು. ಸಾಮಾನ್ಯವಾಗಿ ಕುಟುಂಬ ಸಮೇತ ಪ್ರವಾಸಕ್ಕೆ ಹೋಗುವಾಗ ಶ್ರದ್ಧಾ ಕೇಂದ್ರಗಳಿಗೆ ಹೋಗುತ್ತಾರೆ. ಆದುದರಿಂದ ಮಾಧ್ಯಮಗಳಲ್ಲಿ ಸ್ವಚ್ಛತೆ ಬಗ್ಯೆ ಜಾಗೃತಿ ಮೂಡಿಸಿದಲ್ಲಿ ಪವಾಡ ಸದೃಶ ಬದಲಾವಣೆ ಸಾಧ್ಯ ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.
ಸಮಾಲೋಚನಾ ಸಭೆಯಲ್ಲಿ ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ , ಧರ್ಮೋತ್ಥಾನ ಟ್ರಸ್ಟ್ನ ನಿರ್ದೇಶಕ ಹರಿರಾಮ್ ಶೆಟ್ಟಿ, ಮೂಡಬಿದ್ರೆಯ ಡಾ. ಎಂ. ಮೋಹನ ಆಳ್ವ, ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಂಗಳೂರಿನ ಕೆ. ಪ್ರದೀಪ್ ಕುಮಾರ್ ಕಲ್ಕೂರ, ಡಾ. ಬಿ. ಯಶೋವರ್ಮ ಮೊದಲಾದವರು ಭಾಗವಹಿಸಿ ಸಲಹೆ-ಸೂಚನೆ ನೀಡಿದರು.