ರಾಜ್ಯದ ಹಿತ ಕಾಪಾಡುವಲ್ಲಿ ಕರ್ನಾಟಕದಿಂದ ಗೆಲುವು ಸಾಧಿಸಿರುವ ಬಿಜೆಪಿ ಸಂಸದರು ವಿಫಲ : ಕೃಷ್ಣ ಭೈರೇಗೌಡ

Spread the love

ರಾಜ್ಯದ ಹಿತ ಕಾಪಾಡುವಲ್ಲಿ ಕರ್ನಾಟಕದಿಂದ ಗೆಲುವು ಸಾಧಿಸಿರುವ ಬಿಜೆಪಿ ಸಂಸದರು ವಿಫಲ : ಕೃಷ್ಣ ಭೈರೇಗೌಡ

ಬೆಂಗಳೂರು : ‘ಸೆಸ್, ಜಿಎಸ್ಟಿ, ಅನುದಾನ, ಬರ ಪರಿಹಾರ ಹೀಗೆ ಕೇಂದ್ರ ಸರಕಾರದಿಂದ ನಿರಂತರ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ ಎಂಬ ಕೂಗಿಗೆ ಸಂಬಂಧಿಸಿದಂತೆ ಏರ್ಪಡಿಸಲಾಗಿದ್ದ ಮುಕ್ತ ಚರ್ಚೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗೈರು ಹಾಜರಾದರೆ, ಇತ್ತ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ರಾಜ್ಯ ಸರಕಾರದ ಪ್ರಯತ್ನ ಸೇರಿದಂತೆ ಅನುದಾನ ತಡೆ ಹಿಡಿದಿರುವ ಕುರಿತು ದಾಖಲೆ ಸಮೇತ ಲೆಕ್ಕವನ್ನೆ ಬಿಚ್ಚಿಟ್ಟರು.

ಈ ವೇಳೆ, ರಾಜ್ಯದಿಂದ ಗೆದ್ದ 27 ಬಿಜೆಪಿ ಸಂಸದರಿಂದ ಬರೀ ಓಳು, ಇವರಿಂದ ಕರ್ನಾಟಕಕ್ಕೆ ಗೋಳು ಎಂದು ಬಿಜೆಪಿಗೆ ಚಾಟಿ ಬೀಸಿದರು.

ಶನಿವಾರ ಇಲ್ಲಿನ ಗಾಂಧಿ ಭವನದಲ್ಲಿ ‘ಜಾಗೃತ ಕರ್ನಾಟಕ ಸಂಘಟನೆ’ ಏರ್ಪಡಿಸಿದ್ದ ಕರ್ನಾಟಕಕ್ಕೆ ನ್ಯಾಯಯುತವಾದ ಪಾಲು ಸಿಕ್ಕಿದೆಯೇ? ಕರ್ನಾಟಕಕ್ಕೆ ವಂಚನೆಯಾಗಿದೆಯೇ? ‘ಸತ್ಯ ಮುಂದಿಡಿ ಬನ್ನಿ’ ಕುರಿತ ಚರ್ಚೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗೈರು ಹಾಜರಾದರು. ಈ ವೇಳೆ ವೇದಿಕೆಯಲ್ಲಿ ಸಚಿವರಿಗೆ ಮೀಸಲಿಟ್ಟ ಖುರ್ಚಿ ಕೊನೆಯ ವರೆಗೂ ಖಾಲಿಯೇ ಉಳಿಸಲಾಗಿತ್ತು.

ಈ ನಡುವೆ ದಾಖಲೆ ಸಮೇತ ಅನುದಾನ ತಡೆಹಿಡಿದಿರುವ ಕುರಿತು, ಕೇಂದ್ರ ಸರಕಾರ ಸಂಪರ್ಕ ಮಾಡದೆ ಇರುವ ಪ್ರಕ್ರಿಯೆ ಕುರಿತು ದಾಖಲೆ ಸಮೇತ ಕಂದಾಯ ಸಚಿವ ಕೃಷ್ಣಭೈರೇಗೌಡ ಸಂಕ್ಷೀಪ್ತವಾಗಿ ವಿವರಿಸಿದರು. ಜತೆಗೆ, ಕೇಂದ್ರ ಸಚಿವರು, ಬಿಜೆಪಿ ನಾಯಕರು ಹೇಳುತ್ತಿರುವ ಹೇಳಿಕೆಗಳಿಗೂ ದಾಖಲೆಗಳ ಮೂಲಕ ಉತ್ತರಿಸಿ ಗಮನ ಸೆಳೆದರು.

ಅನಂತರ, ಚಿಂತಕರ ಪ್ರಶ್ನೆಗಳಿಗೆ ಉತ್ತರಿಸಿದ ಕೃಷ್ಣ ಭೈರೇಗೌಡ ಅವರು, ರಾಜ್ಯದ ಹಿತ ಕಾಪಾಡುವಲ್ಲಿ ಕರ್ನಾಟಕದಿಂದ ಗೆಲುವು ಸಾಧಿಸಿರುವ ಬಿಜೆಪಿ ಸಂಸದರು ವಿಫಲರಾಗಿದ್ದಾರೆ. ಕೇಂದ್ರ ಸರಕಾರದ ಮುಂದೆ ಹೌದಪ್ಪಗಳಂತೆ ವರ್ತನೆ ಮಾಡುತ್ತಿದ್ದು, ಸಲಾಂ, ಗುಲಾಮಗಿರಿಗೆ ಒಳಗಾಗಿದ್ದಾರೆ. ಇಂತಹ 27 ಸಂಸದರಿಂದ ಬರೀ ಓಳು ಮಾತುಗಳೇ ಕೇಳಿಬರುತ್ತಿದ್ದು, ಇವರಿಂದ ಕರ್ನಾಟಕಕ್ಕೆ ಗೋಳು ಎಂದು ವಾಗ್ದಾಳಿ ನಡೆಸಿದರು.

ನನ್ನ ಹಾಗೂ ಸೀತಾರಾಮನ್ ನಡುವೆ ಯಾವುದೇ ತಕರಾರು ಇಲ್ಲ. ಅವರ ಬಗ್ಗೆ ನನಗೆ ವ್ಯಯಕ್ತಿಕ ಗೌರವ ಇದೆ. ಆದರೆ, ಕೇಂದ್ರ ಸರಕಾರದಿಂದ ಕಳೆದ 10 ವರ್ಷದಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ. ನಮ್ಮ ಅವಶ್ಯಕತೆಗೆ ತಕ್ಕ ತೆರಿಗೆ ಪಾಲು ಸಿಗುತ್ತಿಲ್ಲ. ಆದರೆ, ಅದಕ್ಕೆ ಪರಿಹಾರ ನೀಡುವ ಬದಲು ನಮ್ಮ ಹಕ್ಕು ಕೇಳಿದರೆ ನಮ್ಮನ್ನೆ ಅವಮಾನಿಸಲಾಗುತ್ತಿದೆ. ಅಲ್ಲದೆ, ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರು ರಾಜ್ಯಕ್ಕೆ ಬಂದು ಮತ್ತದೇ ಸುಳ್ಳಿನ ಜುಮ್ಲಾ ಭಾಷಣ ಮಾಡುವುದು ಎಷ್ಟು ಸರಿ?ಎಂದು ಖಾರವಾಗಿ ಪ್ರಶ್ನೆ ಮಾಡಿದರು.

ಅಕ್ಟೋಬರ್ 31ಕ್ಕೆ ಬರಗಾಲ ಘೋಷಣೆ ಮಾಡಬೇಕು. ಬರಗಾಲ ತೀವ್ರವಾಗಿದ್ದರೆ ಅದಕ್ಕೂ ಮುನ್ನವೇ ಬರಗಾಲ ಘೋಷಣೆ ಮಾಡಬಹುದು. ಆದರೆ, ನಾವು ಒಂದುವರೆ ತಿಂಗಳ ಮೊದಲೇ ಸೆ.13ರಂದು ಬರ ಘೋಷಿಸಿದ್ದೇವೆ. ಸೆ.22ರಂದು ಕೇಂದ್ರಕ್ಕೆ ಪರಿಹಾರಕ್ಕೆ ಮನವಿ ಸಲ್ಲಿಸಿದ್ದೇವೆ. ಅ.4 ರಿಂದ 9ರ ಅವಧಿಯಲ್ಲಿ ಕೇಂದ್ರ ತಂಡ ಬಂದು ಪ್ರವಾಸ ಮಾಡಿ ಬರ ಅಧ್ಯಯನ ನಡೆಸಿ ಹೋಗಿದ್ದಾರೆ.

ಅ.20ಕ್ಕೆ ಈ ತಂಡ ವರದಿಯನ್ನೂ ಸಲ್ಲಿಸಿದೆ. ಕೇಂದ್ರ ಸರಕಾರದ ಕೃಷಿ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಈ ವರದಿ ಪರಿಶೀಲಿಸಿ ಶೀಫಾರಸು ಮಾಡಬೇಕು.ಬರ ಪರಿಹಾರ ನೀಡುವ ಸಂಬಂಧ ಒಂದು ತಿಂಗಳಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು. ಕೇಂದ್ರ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಯಬೇಕು. ಆದರೆ, ಈವರೆಗೆ ಸಭೆ ನಡೆದಿಲ್ಲ ಎಂದು ಅವರು ಹೇಳಿದರು.

ಅದರಲ್ಲೂ ಸ್ವತಃ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಆದರೆ, ಇದೇ ಬಿಜೆಪಿ ನಾಯಕರು ಚುನಾವಣಾ ಸಂದರ್ಭದಲ್ಲಿ ಕರ್ನಾಟಕಕ್ಕೆ ಬಂದು ಸುಳ್ಳಿನ ಜುಮ್ಲಾ ಭಾಷಣ ಮಾಡುತ್ತಿದ್ದಾರೆ, ಇದು ಕನ್ನಡಿಗರಿಗೆ ಮಾಡಿರುವ ಅವಮಾನ ಎಂದು ಆಕ್ರೋಶ ಹೊರಹಾಕಿದರು.

ನೀರಿಗೆ ತಡಕಾಟ: ರಾಜ್ಯದ ನಾನಾ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರತಿ ವರ್ಷ ಬೇಸಗೆಯಲ್ಲಿ ತಲೆದೋರುತ್ತದೆ. ಆದರೆ, ಇದರಲ್ಲಿ ಕೇಂದ್ರ ಸರಕಾರದ ಪಾಲೂ ಇದೆ. ಚಿತ್ರದುರ್ಗ, ತುಮಕೂರು ಜಿಲ್ಲೆಗಳಿಗೆ ನೀರುಣಿಸುವ ಭದ್ರಾ ಮೇಲ್ಡಂಡೆ ಯೋಜನೆಗೆ 5,300 ಕೋಟಿ ರೂ. ಕೊಡುವುದಾಗಿ ಬಜೆಟ್ ನಲ್ಲಿ ಘೋಷಿಸಿದ್ದರೂ ಅದನ್ನು ಕೊಟ್ಟಿಲ್ಲ. ಮಹದಾಯಿ ಯೋಜನೆಗೆ ಅನುಮತಿ ಕೊಟ್ಟಿಲ್ಲ. ಇನ್ನು, ಮೇಕೆದಾಟು ಯೋಜನೆ ಬಗ್ಗೆ ಸ್ಪಷ್ಟ ನಿಲುವು ತಳೆಯುತ್ತಿಲ್ಲ. ಇಂಥ ಕಾರಣಗಳಿಂದಲೂ ಇಂದು ಕರ್ನಾಟಕದ ಜನರು ನೀರಿಗಾಗಿ ತಡಕಾಡುವಂತಾಗಿದೆ ಎಂದು ಅವರು ವಿವರಿಸಿದರು.

ನಮಗೆ ಸಂಘರ್ಷದಲ್ಲಿ ಆಸಕ್ತಿ ಇಲ್ಲ. ಈ ಹಿಂದೆ ಬ್ರಿಟೀಷರು ಸ್ವಾತಂತ್ರ ಕೇಳಿದಾಗ ನಮ್ಮವರ ಮೇಲೆ ದೇಶದ್ರೋಹದ ಕೇಸು ಹಾಕಿದಂತೆ ಈಗ ನಮ್ಮ ತೆರಿಗೆ ಹಕ್ಕು ಕೇಳಿದರೆ ಕೇಂದ್ರ ಸರ್ಕಾರ ನಮ್ಮನ್ನೇ ದೇಶದ್ರೋಹಿ ಎಂದು ಅವಮಾನಿಸುತ್ತಿದೆ ಎಂದು ಕೃಷ್ಣಭೈರೇಗೌಡ ಅಸಮಾಧಾನ ಹೊರಹಾಕಿದರು.

ಕರ್ನಾಟಕಕ್ಕೆ ಪ್ರತಿ ವರ್ಷ ಶೇ.15 ರಷ್ಟು ಹೆಚ್ಚುವರಿ ತೆರಿಗೆ ಸಂಗ್ರಹದ ಸಾಮರ್ಥ್ಯ ಇತ್ತು. ಆದರೆ, ಜಿಎಸ್ಟಿ ಜಾರಿಯಾದ ಮೇಲೆ ನಮ್ಮಂತ ರಾಜ್ಯಗಳ ತೆರಿಗೆ ಕಡಿಮೆಯಾಗುತ್ತಿದೆ. ಜಿಎಸ್ಟಿ ಜಾರಿಯಾದ ನಂತರ 2019-20ರಲ್ಲಿ ರಾಜ್ಯದ ತೆರಿಗೆ ಆದಾಯದಲ್ಲಿ 18,897 ಕೋಟಿ ಖೋತಾ ಆಗಿದೆ. 2023-24ರಲ್ಲಿ 34,570 ಕೋಟಿ ನಷ್ಟವಾಗಿದೆ. ರಾಜ್ಯದ ಆದಾಯದಲ್ಲಿ ಪ್ರತಿ ವರ್ಷ 30 ರಿಂದ 32 ಸಾವಿರ ಕೋಟಿ ರಾಜ್ಯಕ್ಕೆ ನಷ್ಟವಾಗುತ್ತಿದೆ. ಇದೇ ಕಾರಣಕ್ಕೆ ಜಿಎಸ್ಟಿ ಪರಿಹಾರವನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ತುಂಬಿ ಕೊಡಬೇಕು ಎಂದು ಹಣಕಾಸು ಆಯೋಗ ಸ್ಪಷ್ಟವಾಗಿ ನಿರ್ದೇಶನ ನೀಡಿದೆ.

ಕೇಂದ್ರ ಸರಕಾರ ಸಂಗ್ರಹಿಸುವ ಸೆಸ್ ಸರ್ಚಾರ್ಜ್ ನಲ್ಲೂ ರಾಜ್ಯಕ್ಕೆ ಪಾಲು ನೀಡಬೇಕು. 2017-18 ರಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಂದ 2,18,553 ಕೋಟಿ ತೆರಿಗೆ ಹಣ ಕೇಂದ್ರದ ಪಾಲಾಗಿದ್ದರೆ, 2022-23 ರಲ್ಲಿ 5,52,789 ಕೋಟಿ ಹಣ ಸಂಗ್ರಹಿಸಲಾಗಿದೆ. ಆದರೆ, ಇದರಲ್ಲಿ ರಾಜ್ಯಗಳಿಗೆ ನಯಾಪೈಸೆಯೂ ಪಾಲಿಲ್ಲ.

ಕೇಂದ್ರ ಪುರಸ್ಕೃತ ಯೋಜನೆಯಲ್ಲೂ ಹೆಚ್ಚು ಹಣ ಹೂಡುವುದು ರಾಜ್ಯ ಸರ್ಕಾರವೇ. ಆದರೆ, ಈ ಯೋಜನೆಗಳ ಹೆಸರು ಮಾತ್ರ ಕೇಂದ್ರ ಸರಕಾರದ್ದು, ಕೇಂದ್ರ ಸರಕಾರದ ಗರೀಬ್ ಕಲ್ಯಾಣ್ ಅನ್ನ ಯೋಜನೆಯಲ್ಲಿ ಶೇ.52.33, ಜಲಜೀವನ್ ಮಿಷನ್ ಯೋಜನೆಯಲ್ಲಿ ಶೇ.58.03, ಪಿಎಂ ಆವಾಸ್ ಯೋಜನೆಯಲ್ಲಿ ಶೇ.63.41, ಪಿಎಂ ಜನ ಆರೋಗ್ಯ ಯೋಜನೆಯಲ್ಲಿ ಶೇ.77.96, ಪಿಎಂ ಫಸಲ್ ಭೀಮಾ ಯೋಜನೆಯಲ್ಲಿ ಶೇ.50.72 ರಷ್ಟು ಹಣ ರಾಜ್ಯ ಸರಕಾರದ್ದು, ಹಾಗೆ ನೋಡಿದರೆ ನಮ್ಮ ತೆರಿಗೆ ಪಡೆಯುವ ಕೇಂದ್ರ ಸರಕಾರ ಅದಕ್ಕೆ ಪ್ರತಿಯಾಗಿ ನಮಗೆ ನೀಡಿದ ಕೊಡುಗೆ ಏನು? ಎಂದು ಸಚಿವರು ಅವರು ಪ್ರಶ್ನಿಸಿದರು.


Spread the love