ರಾಜ್ಯಪಾಲರು ರಾಜಕಾರಣಿಯಾಗಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ: ಕೆ. ವಿಕಾಸ್ ಹೆಗ್ಡೆ ಕಿಡಿ
ರಾಜ್ಯಪಾಲರಿಗೆ ರಾಜಕೀಯ ರಹಿತವಾಗಿ ಕರ್ತವ್ಯ ನಿರ್ವಹಿಸಲು ಕಷ್ಟವಾದರೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಮರಳಿ ಸಕ್ರಿಯ ರಾಜಕಾರಣಕ್ಕೆ ಮರಳುವುದು ಉತ್ತಮ.
ಕುಂದಾಪುರ: ರಾಜಕೀಯ ರಹಿತವಾಗಿ ರಾಜಧರ್ಮ ಪಾಲನೆ ಮಾಡಬೇಕಾದ ರಾಜ್ಯಪಾಲರು ರಾಜಕೀಯ ದುರುದ್ದೇಶಪೂರಿತ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಮಾಡಿದ ಅಪಚಾರ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಕಿಡಿಕಾರಿದ್ದಾರೆ.
ಮೂಡ ನಿವೇಶನ ವಿಚಾರದಲ್ಲಿ ಸಿದ್ದರಾಮಯ್ಯ ಯಾವುದೇ ಹಗರಣ ಮಾಡದೆ ಇದ್ದರೂ ಕೂಡ ಸುದೀರ್ಘ ಅವಧಿಯ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದ ರಾಜಕಾರಣಿ ಸಿದ್ದರಾಮಯ್ಯರವರ ಭ್ರಷ್ಟಾಚಾರದ ಕಳಂಕ ಹಚ್ಚುವ ಕೆಲಸವನ್ನು ಭ್ರಷ್ಟಾಚಾರದಲ್ಲಿ ಮುಳುಗಿ ಎದ್ದಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರುಗಳು ಮಾಡುತ್ತಿದ್ದಾರೆ. ಇವರ ದುರುದ್ದೇಶಪೂರಿತ ರಾಜಕಾರಣಕ್ಕೆ ಬೆನ್ನೆಲುಬಾಗಿ ರಾಜ್ಯಪಾಲರು ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂವಿಧಾನದ ಅಡಿಯಲ್ಲಿ ಹಿರಿಯಣ್ಣನಾಗಿ ರಾಜ್ಯವನ್ನು ಪಾಲನೆ ಮಾಡಬೇಕಾದ ರಾಜ್ಯಪಾಲರು ತನ್ನ ರಾಜಕೀಯ ಪ್ರೇರಿತ ನಿರ್ಧಾರಗಳ ಮೂಲಕ ರಾಜ್ಯವನ್ನು ಹಾಳು ಮಾಡಲು ಹೊರಟ ಹಾಗಿದೆ. ಸಂವಿಧಾನದ ಅಡಿಯಲ್ಲಿ ವಿಶೇಷ ಗೌರವ ಹೊಂದಿರುವ ರಾಜ್ಯಪಾಲರಿಗೆ ರಾಜಕೀಯ ರಹಿತವಾಗಿ ಕರ್ತವ್ಯ ನಿರ್ವಹಿಸಲು ಕಷ್ಟವಾದರೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಮರಳಿ ಸಕ್ರಿಯ ರಾಜಕಾರಣಕ್ಕೆ ಮರಳುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
ವಿರೋಧ ಪಕ್ಷದವರು, ರಾಜ್ಯಪಾಲರು ಯಾರು ಏನೇ ಪ್ರಯತ್ನಪಟ್ಟರೂ ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯನವರನ್ನು ಏನೂ ಮಾಡಲು ಸಾಧ್ಯವಿಲ್ಲ. ನೂರು ಅಪರಾಧಿಗಳಿಗೆ ಶಿಕ್ಷೆ ಆಗದೆ ಇದ್ದರೂ ಪರವಾಗಿಲ್ಲ ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎನ್ನುವ ಹೆಮ್ಮೆಯ ನ್ಯಾಯಾಂಗ ವ್ಯವಸ್ಥೆ ನಮ್ಮದು ಆದುದರಿಂದ ಯಾವುದೇ ಹಗರಣ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾನೂನು ಹೋರಾಟದಲ್ಲಿ ಜಯಶಾಲಿಯಾಗಿ ಹೊರಗೆ ಬರಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.