ರಾಜ್ಯ ಒಲಿಂಪಿಕ್: ಕಾಮಗಾರಿ ಶೀಘ್ರ ಮುಗಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ
ಮಂಗಳೂರು: ಇದೇ 17 ರಿಂದ ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಮೂಲಸೌಲಭ್ಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಸೂಚಿಸಿದ್ದಾರೆ.
ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕ್ರೀಡಾಕೂಟದ ಸಿದ್ಧತೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನವರಿ 17 ರಿಂದ 23 ರವರೆಗೆ ಮಂಗಳೂರಿನಲ್ಲಿ ಆಯೋಜಿಸಿದ ಕ್ರೀಡಾಕೂಟದ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಿಗೆ ಸಂಬಂಧಪಟ್ಟ ಕ್ರೀಡಾಂಗಣದ ಕೆಲಸಗಳು ತ್ವರಿತವಾಗಿ ನಡೆಯಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ವಿವಿಧ ಕ್ರೀಡೆಗಳಾದ ಬ್ಯಾಡ್ಮಿಂಟನ್, ಫೆನ್ಸಿಂಗ್, ಈಜು, ಫುಟ್ಬಾಲ್, ಹ್ಯಾಂಡ್ ಬಾಲ್, ನೆಟ್ ಬಾಲ್, ಖೋ-ಖೋ, ಟೆಕ್ವೊಂಡೋ, ವಾಲಿಬಾಲ್, ವೇಯ್ಟ್ ಲಿಫ್ಟಿಂಗ್ ಕ್ರೀಡಾಪಟುಗಳಿಗೆ ಕ್ರೀಡಾ ಸಲಕರಣೆಗಳನ್ನು ನೀಡುವುದರ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಕ್ರೀಡಾಪಟುಗಳಿಗೆ ವಸತಿ ಮತ್ತು ಆಹಾರ ಸೌಲಭ್ಯಗಳನ್ನು ಉತ್ತಮ ರೀತಿಯಲ್ಲಿ ಒದಗಿಸಲು ಅವರು ತಿಳಿಸಿದರು.
ಸಭೆಯಲ್ಲಿ ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಪ್ರದೀಪ್ ಡಿಸೋಜ, ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್, ಫೆನ್ಸಿಂಗ್ ಅಸೋಸಿಯೇಷನ್, ಈಜು ಅಸೋಸಿಯೇಷನ್, ದ.ಕ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್, ದ.ಕ ಬಾಸ್ಕೆಟ್ ಬಾಲ್ ಅಸೋಸಿಯೇಷನ್ , ದ.ಕ ಫುಟ್ಬಾಲ್ ಅಸೋಸಿಯೇಷನ್, ದ.ಕ ಹ್ಯಾಂಡ್ಬಾಲ್ ಅಸೋಸಿಯೇಷನ್, ದ.ಕ ನೆಟ್ಬಾಲ್ ಅಸೋಸಿಯೇಷನ್, ದ.ಕ ಟೆಕ್ವೊಂಡೋ ಅಸೋಸಿಯೇಷನ್, ದ.ಕ ವಾಲಿಬಾಲ್ ಅಸೋಸಿಯೇಷನ್, ದ.ಕ ವೇಯ್ಟ್ ಲಿಫ್ಟಿಂಗ್ ಅಸೋಸಿಯೇಷನ್, ದ.ಕ ಅಸೋಸಿಯೇಷನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.