ರಾಜ್ಯ ಪತ್ರಕರ್ತರ ಸಮ್ಮೇಳನ ಲಾಂಛನ ಬಿಡುಗಡೆ
ಮಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆಯ ಜವಾಬ್ದಾರಿ ದೊಡ್ಡದು. ಸ್ಪರ್ಧಾತ್ಮಕ ಯುಗದಲ್ಲಿ ಪತ್ರಿಕೆ ಇರುವುದು ಉತ್ತಮ ವಿಚಾರ. ಸ್ಪರ್ಧೆಯಿಂದ ಪರಿಸ್ಕಾರ ಆಗುತ್ತದೆ. ಇಂದು ಪತ್ರಿಕೆಗಳಲ್ಲಿ ಭಾಷಣದ ವಿಷಯವನ್ನು ಕುತೂಹಲ ಆಸಕ್ತಿಯಿಂದ ಓದುವಂತಹ ವಿಷಯಗಳು ಪ್ರಕಟವಾಗುತ್ತದೆ ಆದರೆ ಪತ್ರಕರ್ತರು ಓದುಗರಿಗೆ ಮನದಟ್ಟು ಮಾಡುವಂತಹ ವರದಿಗಳನ್ನು ನೀಡುತ್ತಿದ್ದಾರೆ. ವಾಸ್ತವಿಕ ವಿಚಾರ ಮತ್ತು ಓದುಗರಲ್ಲಿ ಆಸಕ್ತಿ ಮೂಡಿಸುವ ಬರಹವಿದ್ದಾಗ ಓದುಗರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಅವರು ಶನಿವಾರ ಧರ್ಮಸ್ಥಳದ ವಸಂತ ಮಹಲ್‌ನಲ್ಲಿ ಫೆಬ್ರವರಿಯಲ್ಲಿ ಮಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿ ಪತ್ರಕರ್ತರಲ್ಲಿ ತಾಳ್ಮೆ, ಸಹನೆ ಇರಬೇಕು. ಪತ್ರಕರ್ತರಿಗೆ ಒತ್ತಡ ಇರುವುದು ಸಹಜ. ಓದುಗರಿಗೆ ನೀಡುವ ವರದಿಯು ಉಪಯುಕ್ತ ಮತ್ತು ಪರಿಣಾಮ ಬೀಡುವಂತಾಗಬೇಕು. ಇಂದು ಸಾವಿರಾರು ಮಂದಿ ಪತ್ರಕರ್ತರು ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಸಮಾಜಕ್ಕೆ ತಿಳಿಯಬೇಕು ಮತ್ತು ಅವರಿಗೆ ಸಿಗಬೇಕಾದ ವೇತನ, ಆರೋಗ್ಯ ಭದ್ರತೆ, ವೃದ್ಧಾಪ್ಯ ವೇತನ, ಸರಿಯಾಗಿ ಸಿಗುವಂತಾಗಲು ಇಂತಹ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಗಳು ಸಹಕಾರಿಯಾಗಲಿ ಎಂದರು.
ಇಂದಿನ ದಿನಪತ್ರಿಕೆಗಳ ಗುಣಮಟ್ಟ ಮತ್ತು ವರದಿಗಳನ್ನು ಒಂದು ತಿಂಗಳ ಬಳಿಕವೂ ಓದುವಂತಿರುತ್ತದೆ. ಹಿಂದೆ ದಿನಪತ್ರಿಕೆ ಎಂದರೆ ಒಂದೆರಡು ದಿವಸ ಓದಿ ಬಿಡುವಂತಾಗಿತ್ತು. ವರದಿ ನಿಡುವುದರ ಜೊತೆಗೆ ಪತ್ರಿಕೆ ಮಾರಾಟದ ಬಗ್ಗೆಯೂ ಕಾಳಜಿ ಅಗತ್ಯ ಎಂದರು.
ಶಾಸಕ ಹರೀಶ್ ಪೂಂಜಾ ಮಾತನಾಡಿ ಉತ್ತಮ ಸಮಾಜ ನಿರ್ಮಾಣಗೊಳ್ಳಲು ಪತ್ರಿಕೆ ಮತ್ತು ಪತ್ರಕರ್ತರ ಪ್ರಯತ್ನ ಕಾರಣ, ಇಂದು ರಾಜಕಾರಣಿಗಳ ಒಳಿತು, ಕೆಡುಕುಗಳನ್ನು ಹೇಳುವಂತಹ ಸಾಮರ್ಥ್ಯವಿರುವುದು ಪತ್ರಕರ್ತರಿಗೆ ಮಾತ್ರ. ಮಂಗಳೂರಿನಲ್ಲಿ ನಡೆಯುವಂತಹ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.
ರಾಜ್ಯಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ ಮಾಧ್ಯಮಗಳು ಜನರಲ್ಲಿ ಸಂಶಯ ಮೂಡುವಂತೆ ವರ್ತಿಸಬಾರದು. ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕರಾವಳಿ ಭಾಗವು ಪತ್ರಿಕೆಗೆ ನೀಡಿದ ಕೊಡುಗೆ ಅಪಾರವಾದುದು.ಇದಕ್ಕಾಗಿಯೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಇದಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಸಹಕಾರ ನೀಡುವ ಸಹಕಾರ ನೀಡುವ ಭರವಸೆ ನೀಡಿದ್ದರಿಂದ ರಾಜ್ಯ ಸಮ್ಮೇಳನಕ್ಕೆ ಶಕ್ತಿ ತುಂಬಿದೆ ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಪ್ರಾಸ್ತವಿಕವಾಗಿ ಮಾತನಾಡಿ ಜಿಲ್ಲಾ ಪತ್ರಕರ್ತರ ಸಂಘವು ಪತ್ರಿಕಾ ವೃತ್ತಿಯೊಂದಿಗೆ ಸಮಾಜಿಕ ಚಿಂತನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಪತ್ರಕರ್ತರ ಗ್ರಾಮವಾಸ್ತವ್ಯದ ಮೂಲಕ ಸರಕಾರಿ ಶಾಲೆ ಉಳಿಸುವ ಅಭಿಯಾನ, ಅಂತರ್ಜಲ ಹೆಚ್ಚಿಸುವ ಕಾರ್ಯಕ್ರಮ, ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕಾರ, ಮಾಡುತ್ತಿದೆಯಲ್ಲದೆ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಉಪಸ್ಥಿತರಿದ್ದರು.
ಪತ್ರಕರ್ತ ಡಿ.ಪಿ ಹರೀಶ್ ರೈ ನಿರೂಪಿಸಿ, ಜಿಲ್ಲಾ ಪತ್ರಕರ್ತರ ಸಂಘದ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಬಳಿಕ ರಾಜ್ಯ ಪತ್ರಕರ್ತರ ಸಂಘ ಕಾರ್ಯಕಾರಿ ಸಮಿತಿ ಸಭೆ ನಡೆಯಿತು.