ರಾಜ್ಯ ಬಜೆಟ್‍ನಲ್ಲಿ ಜಿಲ್ಲೆಯ ಸಮಗ್ರ ಪ್ರಗತಿಗೆ ಒತ್ತು: ಸಚಿವ ರಮಾನಾಥ ರೈ
ಮ0ಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇತ್ತೀಚೆಗೆ ಮಂಡಿಸಿದ ರಾಜ್ಯ ಬಜೆಟ್‍ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಪ್ರಗತಿಗೆ ಒತ್ತು ದೊರಕಿದೆ ಎಂದು ಅರಣ್ಯ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ತಿಳಿಸಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಏರ್ಪಡಿಸಿರುವ ರಾಜ್ಯ ಬಜೆಟ್ ಕುರಿತು ಪ್ರಚಾರ ಅಭಿಯಾನ ‘ಜನಪರ-ಜನಪ್ರಿಯ” ಆಯವ್ಯಯ ಕಾರ್ಯಕ್ರಮಕ್ಕೆ ಅವರು ಗುರುವಾರ ನಗರದ ಸಕ್ರ್ಯುಟ್ ಹೌಸ್ ಆವರಣದಲ್ಲಿ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ಜಿಲ್ಲೆಯ ದೀರ್ಘಕಾಲದ ಬೇಡಿಕೆಯಾದ ಪಶ್ಚಿಮವಾಹಿನಿಗೆ 100 ಕೋಟಿ ರೂ. ಬಜೆಟ್‍ನಲ್ಲಿ ಒದಗಿಸುವ ಮೂಲಕ ಇಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ದಿಟ್ಟ ಹೆಜ್ಜೆ ಇಡಲಾಗಿದೆ. ಅದೇ ರೀತಿ ಹೊಸ ತಾಲೂಕುಗಳ ರಚನೆ, ವಿಮಾನ ನಿಲ್ದಾಣದ ವಿಸ್ತರಣೆ, ಮೀನುಗಾರಿಕಾ ಜೆಟ್ಟಿ ವಿಸ್ತರಣೆ ಸೇರಿದಂತೆ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಕೇಳಿಬರುತ್ತಿದ್ದ ಬೇಡಿಕೆಗಳಿಗೆ ಬಜೆಟ್‍ನಲ್ಲಿ ಸ್ಪಂದಿಸಲಾಗಿದೆ ಎಂದು ಸಚಿವರು ಹೇಳಿದರು.
ರಾಜ್ಯದ ಜನತೆ ಇಂದು ರಾಜ್ಯ ಸರಕಾರದ ಒಂದಲ್ಲೊಂದು ಯೋಜನೆಯಲ್ಲಿ ನೇರ ಪ್ರಯೋಜನ ಪಡೆಯುತ್ತಿದ್ದಾರೆ. ನಾಗರೀಕರಿಗೆ ಬಜೆಟ್ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಈ ಪ್ರಚಾರ ಅಭಿಯಾನ ನಡೆಸಲಾಗುತ್ತಿದೆ ಎಂದು ಸಚಿವ ರಮಾನಾಥ ರೈ ತಿಳಿಸಿದರು.
ಮಂಗಳೂರು ಉತ್ತರ ಶಾಸಕ ಬಿ.ಎ. ಮೊಹಿದೀನ್ ಬಾವಾ ಅವರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಮೂಲಸೌಕರ್ಯ ಯೋಜನೆಗಳಿಗೆ ಬಜೆಟ್‍ನಲ್ಲಿ ಅನುದಾನ ದೊರೆತಿದೆ. ಮಂಗಳೂರು ವಿಮಾನ ನಿಲ್ದಾಣದ ರಸ್ತೆ ಅಭಿವೃದ್ಧಿ, ರನ್‍ವೇ ವಿಸ್ತರಣೆ ಕೈಗೆತ್ತಿಕೊಳ್ಳಲಾಗಿದೆ. ಅದೇ ರೀತಿ ಮೊಗವೀರರು ಸೇರಿದಂತೆ ಬೆಸ್ತ ಸಮುದಾಯಕ್ಕೆ ಪ್ರತ್ಯೇಕ ನಿಗಮ ‘ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ’ ಸ್ಥಾಪಿಸಲಾಗಿದೆ. ಹಜ್ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ವಾರ್ತಾ ಇಲಾಖೆಯು ಜಾಗೃತಿ ಅಭಿಯಾನ ನಡೆಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಪ್ರಾಸ್ತಾವಿಕವಾಗಿ ಮಾತನಾಡಿ, ‘ಜನಪರ-ಜನಪ್ರಿಯ” ಬಜೆಟ್ ಅಭಿಯಾನವು ಜಿಲ್ಲೆಯಾದ್ಯಂತ 20 ದಿನಗಳ ಕಾಲ ಸಂಚರಿಸಲಿದೆ ಎಂದು ಹೇಳಿದರು.