ರಾಜ್ಯ ಬಜೆಟ್: ಜಿಲ್ಲೆಯ ಪ್ರಗತಿಗೆ ಪೂರಕ- ಸಚಿವ ರಮಾನಾಥ ರೈ
ಮಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ ಬಜೆಟ್ ಕರಾವಳಿಯ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಇನ್ನಷ್ಟು ವೇಗ ನೀಡಲಿದೆ ಎಂದು ಅರಣ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.
ಜಿಲ್ಲೆಯ ಪ್ರಮುಖ ಮೀನುಗಾರಿಕಾ ಕ್ಷೇತ್ರಕ್ಕೆ ಸಾಕಷ್ಟು ನೆರವು ದೊರಕಿದೆ. ಮೀನುಗಾರರ ಮಹಿಳೆಯರಿಗೆ ಶೇಕಡಾ 2 ಬಡ್ಡಿ ದರದಲ್ಲಿ ಸಾಲ ಸಿಗಲಿದೆ. ಕರಾವಳಿ ತೀರ ಸಂರಕ್ಷಣೆಗೆ 2ನೇ ಹಂತದಲ್ಲಿ 650 ಕೋಟಿ ರೂ. ನೆರವು ಒದಗಿಸಲಾಗಿದೆ. ಮಂಗಳೂರು ಹಳೇ ಬಂದರಿನಲ್ಲಿ 65 ಕೋಟಿ ರೂ. ವೆಚ್ಚದಲ್ಲಿ 300 ಮೀಟರ್ ಉದ್ದ ಕೋಸ್ಟಲ್ ಬರ್ತ್ ನಿರ್ಮಾಣ ಹಾಗೂ ಬಂದರಿನ ಹೂಳೆತ್ತಿ ಆಳವನ್ನು 29 ಕೋಟಿ ರೂ. ವೆಚ್ಚದಲ್ಲಿ 7 ಮೀಟರ್‍ಗೆ ಹೆಚ್ಚಳವಾಗಲಿದೆ. ದೇವಾಲಯಗಳನ್ನು ಅಭಿವೃದ್ಧಿಪಡಿಸಲು ಬೃಹತ್ ದೇವಾಲಯಗಳ ಪೂರ್ಣಾಭಿವೃದ್ಧಿ ಯೋಜನೆ ಜಾರಿಗೆ ಬರಲಿದೆ. ಇದೇ ರೀತಿ ಜಿಲ್ಲೆಗೆ ಹಲವಾರು ಕೊಡುಗೆಗಳ್ನು ನೀಡಿರುವ ಮುಖ್ಯಮಂತ್ರಿಗಳನ್ನು ಅಭಿನಂದಿಸುವುದಾಗಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.