Home Mangalorean News Kannada News ರಾಜ್ಯ ಬಿಜೆಪಿ ಸರಕಾರ ‘ಕೋಮಾ’ದಲ್ಲಿದೆ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ರಾಜ್ಯ ಬಿಜೆಪಿ ಸರಕಾರ ‘ಕೋಮಾ’ದಲ್ಲಿದೆ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

Spread the love

ರಾಜ್ಯ ಬಿಜೆಪಿ ಸರಕಾರ ‘ಕೋಮಾ’ದಲ್ಲಿದೆ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಮಂಗಳೂರು: ಪಕ್ಷದೊಳಗಿನ ಆಂತರಿಕ ಕಚ್ಚಾಟವು ಸರ್ಕಾರದ ಮೇಲೆ ಪರಿಣಾಮ ಬೀರುತ್ತಿದ್ದು, ಮೈತ್ರಿ ಸರ್ಕಾರವನ್ನು ಕೆಡವಿ ಅಧಿಕಾರಕ್ಕೇರಿದ ಬಿಜೆಪಿಗೆ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಪಕ್ಷದೊಳಗಿನ ಆಂತರಿಕ ಕಚ್ಚಾಟವು ಸರಕಾರದ ಮೇಲೆ ಪರಿಣಾಮ ಬೀರಿದ್ದು, ಅದೀಗ ಕೋಮಾದಲ್ಲಿದೆ ಎಂದು   ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಅಧಿಕಾರದ ಆಸೆಗಾಗಿ ಬಿಜೆಪಿಯು ಮೈತ್ರಿ ಸರ್ಕಾರವನ್ನು ಉರುಳಿಸಿತ್ತು. ಆದರೆ ಇದೀಗ ಬಿಜೆಪಿ ಆಡಳಿತ ನಡೆಸಲಾಗದ ಸ್ಥಿತಿಯಲ್ಲಿದೆ ಎಂದರು.

ಭೀಕರ ಪ್ರಕೃತಿ ವಿಕೋಪ ಸಂಭವಿಸಿದರೂ ಅದನ್ನು ನಿಭಾಯಿಸಲಾಗದ ಅಸಹಾಯಕ ಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ. ಸಕಾಲಕ್ಕೆ ಎಚ್ಚೆತ್ತುಕೊಂಡು ಕೆಲಸ ಮಾಡಬೇಕಾದ ಸರ್ಕಾರಕ್ಕೆ ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಆರಂಭದ ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಒನ್‌ಮ್ಯಾನ್ ಶೋ ಮಾಡಿದರೆ, ಬಳಿಕ ಸಂಪುಟ ರಚಿಸಿದರೂ ಮಂತ್ರಿಗಳಿಗೆ ತೃಪ್ತಿ ಎಂಬುದೇ ಇಲ್ಲ. ಒಬ್ಬರನ್ನೊಬ್ಬರು ಕಂಡರಾಗದ ಸ್ಥಿತಿಯಲ್ಲಿ ಬಿಜೆಪಿಯ ಶಾಸಕರು, ಸಚಿವರಿದ್ದಾರೆ. ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯದ 23 ಜಿಲ್ಲೆಗಳಲ್ಲಿ ಮಳೆ ಹಾನಿ, ನೆರೆ ಹಾವಳಿ ವಿಪರೀತವಾಗಿದೆ. ಲಕ್ಷಾಂತರ ಮಂದಿ ಬೀದಿ ಪಾಲಾಗಿದ್ದಾರೆ. ಬೆಳೆಹಾನಿ ತೀವ್ರವಾಗಿದೆ. ಸರ್ಕಾರ ಪರಿಹಾರ ಧನ ಘೋಷಿಸಿದರೂ, ಪೂರ್ಣ ಪ್ರಮಾಣದಲ್ಲಿ ವಿತರಿಸಿಲ್ಲ. ಆಡಳಿತ ಯಂತ್ರ ಚುರುಕುಗೊಂಡಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಧಾನಿ ನರೇಂದ್ರ ಮೋದಿ ರಾಜ್ಯವನ್ನು ನಿರ್ಲಕ್ಷಿಸಿದ್ದಾರೆ. ಬೇರೆಲ್ಲಾ ಕೆಲಸ ಮಾಡಲು ಆತುರ ತೋರುವ ಪ್ರಧಾನಿ ರಾಜ್ಯಕ್ಕೆ ಇನ್ನೂ ಭೇಟಿ ನೀಡಿಲ್ಲ. ಸೌಜನ್ಯಕ್ಕೂ ರಾಜ್ಯದ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಸಹಿತ ಬಿಜೆಪಿಯ ಯಾವೊಬ್ಬ ನಾಯಕನಿಗೂ ಮೋದಿಯ ಮುಂದೆ ನಿಂತು ಮಾತನಾಡುವ ಧೈರ್ಯವಿಲ್ಲ. ಉಪಚುನಾವಣೆಯ ದೃಷ್ಟಿಯಲ್ಲಿಟ್ಟುಕೊಂಡು 1,200 ಕೋ.ರೂ. ಪರಿಹಾರ ಧನ ಘೋಷಿಸಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪರ ಬಗ್ಗೆ ನಮಗೆ ಕನಿಕರವಿದೆ. ಅವರು ಆಡಳಿತ ನಡೆಸಲು ಅಸಹಾಯಕರಾಗಿದ್ದಾರೆ. ಪಕ್ಷದಲ್ಲಿ ಅವರ ಮಾತನ್ನು ಕೇಳುವವರಿಲ್ಲವಾಗಿದೆ. ಹಾಲಿ ಸರಕಾರವು ರಾಜ್ಯಕ್ಕೆ ಶಾಪವಾಗಿ ಪರಿಣಮಿಸಿದ್ದು, ಅದರ ವಿಮೋಚನೆಗಾಗಿ ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಮತ ಚಲಾಯಿಸಬೇಕಾಗಿದೆ. ದೇಶದ ವಿವಿಧೆಡೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜನತೆ ಕೈ ಹಿಡಿದಿದ್ದಾರೆ. ರಾಜ್ಯದಲ್ಲೂ ಕಾಂಗ್ರೆಸ್ ಪರ ಪೂರಕ ವಾತಾವರಣವಿದೆ. ಈ ಹಿಂದೆ ಕಾಂಗ್ರೆಸ್ ಸರಕಾರ ಹಮ್ಮಿಕೊಂಡ ಯೋಜನೆಗಳೇ ಪಕ್ಷಕ್ಕೆ ಶ್ರೀರಕ್ಷೆಯಾಗಲಿದೆ ಎಂದು ದಿನೇಶ್ ಗುಂಡೂರಾವ್ ನುಡಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಇದೀಗ ಅವರು ಮರಳಿ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಇತ್ತೀಚೆಗೆ ನಡೆದ ಮಂಜೇಶ್ವರ ಉಪಚುನಾವಣೆಯಲ್ಲಿ ಅವರು ಯುಡಿಎಫ್ ಅಭ್ಯರ್ಥಿಯ ಪರ ಪ್ರಚಾರವನ್ನೂ ನಡೆಸಿದ್ದಾರೆ. ಆದಾಗ್ಯೂ ಅವರ ಸೇರ್ಪಡೆ ಬಗ್ಗೆ ಉಡುಪಿ ಜಿಲ್ಲಾ ಘಟಕದ ಮುಖಂಡರ ಜತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಅಧಿಕವಿದೆ. ಅ.30ರೊಳಗೆ ಕಾಂಗ್ರೆಸ್ ಅಭ್ಯರ್ಥಿಗಳು ಯಾರು ಎಂಬುದನ್ನು ಅಂತಿಮಗೊಳಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.


Spread the love

Exit mobile version