ರಾಜ್ಯ ಸರಕಾರಕ್ಕೆ ಸಿಗುತ್ತಿರುವ ಜನಬೆಂಬಲ ಬಿಜೆಪಿಗೆ ನುಂಗಲಾರದ ತುತ್ತು; ರಮಾನಾಥ ರೈ
ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆಗೆ ಮುನ್ನ ನೀಡಿದ ಭರವಸೆಯಲ್ಲಿ ಶೇ.95ಕ್ಕಿಂತ ಹೆಚ್ಚು ಈಡೇರಿಸಿದೆ. ಭರವಸೆ ನೀಡದ್ದನ್ನೂ ಮಾಡಿ ಜನಬೆಂಬಲ ಪಡೆದಿದೆ. ಇದು ಪ್ರತಿಪಕ್ಷ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ನೀರಿನಿಂದ ಮೇಲೆ ಬಿದ್ದ ಮೀನಿನಂತೆ ಚಡಪಡಿಸುತ್ತಿದೆ. ಕೇಂದ್ರ ಸರಕಾರದ ವಿರುದ್ಧವೂ ಅಲೆ ಎದ್ದಿದೆ. ಈ ಸಂದರ್ಭದಲ್ಲಿ ಮತೀಯ ಗಲಭೆ ಸೃಷ್ಟಿಸಲು ಅನಗತ್ಯ ಹೇಳಿಕೆ ನೀಡುತ್ತಿದೆ ಎಂದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಸಂಘ ಪರಿವಾರದ ಪ್ರಯೋಗ ಶಾಲೆ ಎನ್ನುತ್ತಿದ್ದರೂ, ಇಲ್ಲಿಯ ಕಾಂಗ್ರೆಸ್ ಅಲೆ ಕಂಡು ಅಮಿತ್ ಶಾ ಸಭೆ ನಡೆಸದೆಯೇ ಹೊರಟು ಹೋದರು. ಅಧಿಕಾರಕ್ಕಾಗಿ ಬಿಜೆಪಿ ನಡೆಸುವ ಅಪಪ್ರಚಾರಕ್ಕೆ ಜನ ಬೆಂಬಲ ನೀಡುವುದಿಲ್ಲ. ಕೇರಳಕ್ಕೆ ಹೋಗಿ ಸಿಪಿಎಂ ಕೊಲೆಗಾರ ಎಂದು ಶಾ ಹೇಳುತ್ತಾರೆ. ರಾಜಕೀಯ ಕೊಲೆ ಮಾಡುವುದರಲ್ಲಿ ಬಿಜೆಪಿ ಹಿಂದೆ ಬಿದ್ದಿಲ್ಲ. ಕಾಂಗ್ರೆಸ್ ಮಾತ್ರ ಎಲ್ಲೂ ಕೊಲೆ ಮಾಡಿದ ಉದಾಹರಣೆ ಇಲ್ಲ ಎಂದರು.
ರಾಜ್ಯದ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಅವರು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿನ ರಸ್ತೆ ಹೊಂಡಗಳ ವಿರುದ್ದ ಬಿಜೆಪಿ ಕಾರ್ಯಕರ್ತರಿಗೆ ಪ್ರತಿಭಟನೆಗೆ ಕರೆ ನೀಡಿದ್ದಾರೆ ಆದರೆ ರಾಜ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳು ಸಂಪೂರ್ಣ ಹದಗೆಟ್ಟಿವೆ ಅದನ್ನು ಮೊದಲು ದುರಸ್ತಿ ಮಾಡಿ ಬಳಿಕ ಪ್ರತಿಭಟನೆ ನಡೆಸಿ ಎಂದು ರೈ ಹೇಳಿದರು. ಮೊದಲ ಬಾರಿಗೆ ನಂಬರ್ ವನ್ ಸಂಸದ ನಳಿನ್ ಕುಮಾರ್ ಕಟೀಲ್ ಲೇಡಿಗೋಷನ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಲೇಡಿಗೋಷನ್ ಆಸ್ಪತ್ರೆಗೆ ಅನುದಾನವನ್ನು ಎಮ್ ಆರ್ ಪಿ ಎಲ್ ಮೂಲಕ ಒದಗಿಸಿದ್ದವರು ವೀರಪ್ಪ ಮೊಯ್ಲಿ ಅದು ನಳಿನ್ ಕುಮಾರ್ ಅವರಿಗೆ ತಿಳಿದಿಲ್ಲ. ಕಾಂಗ್ರೆಸ್ ಮಾಡಿದ ಕೆಲಸಗಳಿಗೆ ಬಿಜೆಪಿ ತಾನು ಮಾಡಿದ್ದು ಎಂದು ಬಿಂಬಿಸಿಕೊಳ್ಳುವುದೆ ಅವರ ಕೆಲಸ ಎಂದರು.
ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ವ್ಯಾಪಕವಾಗಿ ಗಾಂಜಾ ಮಾರಾಟವಾಗುತ್ತಿದೆ ಎಂದು ನಳಿನ್ ಹೇಳುತ್ತಿದ್ದು, ಬಿಜೆಪಿ ಸರಕಾರದ ಅವಧಿಯಲ್ಲೂ ಕೂಡ ಗಾಂಜಾ ಮಾರಾಟ ನಡೆಯುತ್ತಿತ್ತು ಯಾಕೆ ಅದನ್ನು ನಿಯಂತ್ರಿಸಲು ಹೋಗಿಲ್ಲ ಎಂದು ಪ್ರಶ್ನಿಸಿದರು.
ಹಿಂದುಗಳು ಮುಸ್ಲಿಮರ ಜತೆ ವ್ಯವಹಾರ ಮಾಡಬಾರದು ಹೇಳಿದ ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯಸಿದ ರೈ ಮಾತಿಗೆ ಬೆಲೆ ಕೊಡುವ ಅಗತ್ಯ ಇಲ್ಲ ಎಂದರು.