ರಾಜ್ಯ ಸರಕಾರದಿಂದ ರಾಮರಾಜ್ಯದ ಆಶಯ ಜಾರಿ: ಸಚಿವ ದಿನೇಶ್ ಗುಂಡೂರಾವ್

Spread the love

ರಾಜ್ಯ ಸರಕಾರದಿಂದ ರಾಮರಾಜ್ಯದ ಆಶಯ ಜಾರಿ: ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: ಸರ್ವರಿಗೂ ನ್ಯಾಯ ಮತ್ತು ಸುಖೀರಾಜ್ಯಕ್ಕೆ ಪೂರಕವಾದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯ ಸರಕಾರವು ರಾಮರಾಜ್ಯದ ಪರಿಕಲ್ಪನೆಯನ್ನು ಜಾರಿಗೆ ತಂದಿದೆ ಎಂದು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಅವರು ಸುಳ್ಯ ಪುರಭವನದಲ್ಲಿ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರು ಆರ್ಥಿಕವಾಗಿ ಸಬಲೀಕರಣಗೊಂಡು ನೆಮ್ಮದಿಯಿಂದ ಬಾಳಬೇಕು ಎಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಹಿಂದೆ ಒಂದು ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ವರ್ಷ ತಗಲುಲತ್ತಿತ್ತು. ಆದರೆ, ರಾಜ್ಯ ಸರಕಾರವು ಕ್ಷಿಪ್ರಗತಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನೇರವಾಗಿ ಜನರ ಮನೆಗೆ ತಲುಪಿಸಿದೆ. ಯಾವುದೇ ಮಧ್ಯವರ್ತಿಗಳಿಲ್ಲದೇ, ಜನರೇ ಸ್ವಯಂ ಆಗಿ ಅರ್ಜಿ ಹಾಕಿ ಯೋಜನೆಯ ಲಾಭ ಪಡೆಯುತ್ತಿರುವುದು ಕಲ್ಯಾಣ ಕಾರ್ಯಕ್ರಮಗಳಲ್ಲಿ ಚಾರಿತ್ರಿಕವಾಗಿದೆ ಎಂದು ಸಚಿವರು ಹೇಳಿದರು.

ಪ್ರಸಕ್ತ ವರ್ಷ ಗ್ಯಾರಂಟಿ ಯೋಜನೆಗಳಿಗೆ 38 ಸಾವಿರ ಕೋಟಿ ರೂ. ಅನುದಾನ ವೆಚ್ಚ ಮಾಡಲಾಗುತ್ತಿದೆ. ಮುಂದಿನ ವರ್ಷ ಇದನ್ನು 58 ಸಾವಿರ ಕೋಟಿಗಳಿಗೆ ಹೆಚ್ಚಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಜನರ ಸಮಸ್ಯೆಗಳಿಗೆ ಕ್ಷಿಪ್ರವಾಗಿ ಸ್ಪಂದಿಸಲು ಜನತಾದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇಲ್ಲಿ ಸ್ವೀಕರಿಸಲಾದ ಸಾರ್ವಜನಿಕರ ಅಹವಾಲುಗಳನ್ನು ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಲಿದ್ದಾರೆ. ಈ ಸಂಬಂಧ ಜಿಲ್ಲಾಡತದಿಂದ ವರದಿ ಪಡೆಯಲಾಗುವುದು ಎಂದು ಸಚಿವರು ಹೇಳಿದರು.

ಸುಳ್ಯ, ಕಡಬ ತಾಲೂಕಿನ ಸಮಸ್ಯೆಗಳ ಬಗ್ಗೆ ತನಗೆ ಅರಿವಿದೆ. ಅರಣ್ಯ ಭೂಮಿ, ಸರ್ವೇ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಲಾಗುವುದು ಎಂದು ಸಚಿವರು ಹೇಳಿದರು.
ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಓ ಡಾ. ಕೆ. ಆನಂದ್ ಉಪಸ್ಥಿತರಿದ್ದರು.

ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

ಇದಕ್ಕೂ ಮೊದಲು ಸಚಿವ ದಿನೇಶ್ ಗುಂಡೂರಾವ್ ಅವರು ಸುಳ್ಯ ತಾಲೂಕಿನ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಪರಿಶಿಷ್ಟ ವರ್ಗಗಳ ಬಾಲಕರ ಹಾಸ್ಟೆಲ್ ಬಾಳಿಲ, ವಾಲ್ಮೀಕಿ ಆಶ್ರಮ ಶಾಲೆ ಬಾಳಿಲ, ವಾಲ್ಮೀಕಿ ಆಶ್ರಮ ಶಾಲೆ ಸುಬ್ರಹ್ಮಣ್ಯ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಸುಳ್ಯ ಕಚೇರಿ ಶಂಕುಸ್ಥಾಪನೆ, ಸುಳ್ಯ ತಾಲೂಕಿನ ವಿವಿಧ ಲೋಕೋಪಯೋಗಿ ರಸ್ತೆಗಳನ್ನು ರೂ. 190 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು.

407 ಮನವಿ ಸ್ವೀಕೃತ
ಸುಳ್ಯದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಒಟ್ಟು 407 ಮನವಿ/ಅಹವಾಲುಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಸ್ವೀಕರಿಸಿದರು. ಎಲ್ಲಾ ಮನವಿಗಳನ್ನು ಸ್ವೀಕರಿಸಿ, ಖುದ್ದಾಗಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಸಚಿವರು, ನಿಗದಿತ ಅವಧಿಯಲ್ಲಿ ಮನವಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಆದೇಶಿಸಿದರು.


Spread the love