ರಾಜ್ಯ ಸರಕಾರದ ಬಜೆಟ್ ಅಭಿವೃದ್ಧಿಗೆ ಪೂರಕವಾದ ಬಜೆಟ್ : ಕುಯಿಲಾಡಿ ಸುರೇಶ್ ನಾಯಕ್
ಉಡುಪಿ: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಮಂಡಿಸಿದ ರಾಜ್ಯ ಸರಕಾರದ 2020-21 ಸಾಲಿನ ಬಜೆಟ್ ಅಭಿವೃದ್ಧಿಗೆ ಪೂರಕವಾದ ಸರ್ವವ್ಯಾಪಿ ಸರ್ವಸ್ಪರ್ಶಿಯಾದ ಬಜೆಟ್ ಆಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ ನಾಯಕ್ ಅವರು ಬಜೆಟ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಗ್ರಾಮೀಣ ಸುಮಾರ್ಗ ಯೋಜನೆ, ಪಂಚಾಯತ್ ರಾಜ್ ಆಯುಕ್ತಾಲಯ ಆರಂಭ, ಖಾಸಗಿ ಸಹಭಾಗಿತ್ವದಲ್ಲಿ ಎಲ್ಲಾ ಬಂದರುಗಳ ಅಭಿವೃದ್ಧಿ, ಯುವ ಸಬಲೀಕರಣಕ್ಕೆ ಹೊಸ ಯೋಜನೆ, ರಾಜ್ಯದ ಗೊಲ್ಲ ಸಮುದಾಯ, ಅಂಬಿಗಾ ಚೌಡಯ್ಯ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ ಮತ್ತು ಕಂಬಾರರ ಸಮುದಾಯಗಳಿಗೆ ಕೋಟ್ಯಾಂತರ ರೂಪಾಯಿಗಳ ಅನುದಾನ ನೀಡುವ ಮೂಲಕ ರಾಜ್ಯದ ಎಲ್ಲಾ ಸಮುದಾಯಗಳ ಏಳಿಗೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಕೃಷಿ ಸಾಲದ ಬಡ್ಡಿ ಮನ್ನಾ, ನೇಕಾರರ ಸಾಲದ ಬಡ್ಡಿ ಮನ್ನಾ ಮತ್ತು ರಾಜೀವ ಗಾಂಧಿ ವಸತಿ ಯೋಜನೆಗೆ ಅಡಮಾನ ವಿನಾಯಿತಿ ನೀಡುವ ಮೂಲಕ ಎಲ್ಲಾ ದೀನ ದಲಿತರ ಏಳಿಗೆಗೆ ಒತ್ತು ಕೊಟ್ಟಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿಗೆ ಜವಳಿ ಪಾರ್ಕ್ ಘೋಷಣೆ ಮಾಡುವ ಮೂಲಕ ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿ, ಎಸ್.ಸಿ./ಎಸ್.ಟಿ. ಯುವಕರಿಗೆ ಉಚಿತವಾಗಿ ಡ್ರೈವಿಂಗ್ ತರಭೇತಿ, ಅಡಿಕೆ ಬೆಳೆಗಾರರಿಗೆ ಎರಡು ಲಕ್ಷ ಹೊಸ ಸಾಲ ಯೋಜನೆ ಮತ್ತು ಮೀನುಗಾರ ಮಹಿಳೆಯರಿಗೆ ಸ್ಕೂಟರ್ ಸೌಲಭ್ಯ ನೀಡುವ ಮೂಲಕ ಎಲ್ಲಾ ವರ್ಗದ ಜನರಿಗೆ ಜನಪರವಾದ ಬಜೆಟ್ ಮಂಡಿಸಿದ್ದಾರೆ. ಅಭಿವೃದ್ಧಿಗೆ ಅತ್ಯಂತ ಪೂರಕವಾದ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಕುಯಿಲಾಡಿ ಅಭಿನಂದನೆ ಸಲ್ಲಿಸಿದ್ದಾರೆ.