ರಾತ್ರಿ ನಿಷೇಧವಿದ್ದರೂ ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಹೈ ಪಾರ್ಟಿ! ಏಳು ಮಂದಿ ವಶಕ್ಕೆ
ಉಡುಪಿ: ಇಡೀ ಜಗತ್ತೇ ಕೊರೋನಾ ಮಹಾಮಾರಿಯಿಂದ ತತ್ತರಿಸುತ್ತಿದ್ದರೆ, ಜಗತ್ಪ್ರಸಿದ್ಧ ಮಲ್ಪೆಯ ಸೈಂಟ್ ಮೇರೀಸ್ ದ್ವೀಪದಲ್ಲಿ ರಾತ್ರಿ ಹೈಫೈ ಪಾರ್ಟಿ ನಡೆದಿರುವ ಕುರಿತು ವರದಿಯಾಗಿದೆ.
ಸಾರ್ವಜನಿಕರಿಗೆ ರಾತ್ರಿ 7ರಿಂದ ಬೆಳಗ್ಗೆ 7 ಗಂಟೆಯವರೆಗೆ ಸೈಂಟ್ ಮೇರೀಸ್ ದ್ವೀಪಕ್ಕೆ ಹೋಗುವುದು ಮತ್ತು ರಾತ್ರಿ ಅಲ್ಲಿ ವಾಸ್ತವ್ಯ ಮಾಡುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ. ಇದೀಗ ಜಿಲ್ಲಾಡಳಿತ ಗುತ್ತಿಗೆ ನೀಡಿರುವ ಮಲ್ಪೆ ಬೀಚ್ ನಿರ್ವಾಹಕರು ಹಾಗೂ ನಿರ್ಮಿತಿ ಕೇಂದ್ರದ ಇಂಜಿನಿಯರ್ ಸಹಿತ ಏಳು ಮಂದಿ ದ್ವೀಪದಲ್ಲಿ ಶನಿವಾರ ರಾತ್ರಿ ಗುಂಡು ಪಾರ್ಟಿ ನಡೆಸಿದ್ದಾರೆ ಎನ್ನಲಾಗಿದೆ.
ಶನಿವಾರ ರಾತ್ರಿ 9.30ಕ್ಕೆ ದ್ವೀಪದಲ್ಲಿ ವಿದ್ಯುತ್ ದೀಪಗಳ ಬೆಳಕು ಕಾಣುತ್ತಿತ್ತು. ಬೆಳಕು 11 ಗಂಟೆಯ ವರೆಗೂ ಒಂದೇ ಸ್ಥಳದಲ್ಲಿರುವುದನ್ನು ಗಮನಿಸಿದ ಸ್ಥಳೀಯರು, 11ಗಂಟೆಗೆ ಈ ಮಾಹಿತಿಯನ್ನು ಮಲ್ಪೆ ಪೊಲೀಸ್ ಠಾಣೆ ಹಾಗೂ ಕರಾವಳಿ ಕಾವಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಲರ್ಟ್ ಆಗುತ್ತಿದ್ದಂತೆ ದ್ವೀಪದಲ್ಲಿ ಉರಿಯುತ್ತಿದ್ದ ದೀಪ ಆರಿಸಲಾಯಿತು.
ಪ್ರವಾಸಿ ಬೋಟುಗಳ ಜೆಟ್ಟಿಯ ಸಮೀಪ ಉಡುಪಿ ನೋಂದಣಿಯ ಕೆಎ 20 ಎಂಎ 1239 ಮತ್ತು ಮಂಗಳೂರು ನೋಂದಣಿಯ ಕೆಎ 19 ಎಂಜಿ 1895 ಕಾರುಗಳನ್ನು ನಿಲ್ಲಿಸಲಾಗಿತ್ತು. ಅದರಲ್ಲಿ ಒಂದು ಕಾರು ಮಲ್ಪೆ ಬೀಚ್ ನಿರ್ವಾಹಕ ಅವರಿಗೆ ಸೇರಿದ್ದಾದರೆ, ಇನ್ನೊಂದು ನಿರ್ಮಿತಿ ಕೇಂದ್ರದ ವ್ಯಕ್ತಿಯದ್ದಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಮಲ್ಪೆ ಪೊಲೀಸ್ ಹಾಗೂ ಕರಾವಳಿ ಕಾವಲು ಪಡೆಯ ಪೊಲೀಸರು ಪರಿಶೀಲಿಸಿ, ಮಲ್ಪೆ ಬೀಚ್ ನಿರ್ವಾಹಕ ರಿಗೆ ದೂರವಾಣಿ ಕರೆ ಮಾಡಿದಾಗ, ತಾನು ಸೈಂಟ್ ಮೇರೀಸ್ ದ್ವೀಪದಲ್ಲಿ ಇರುವುದನ್ನು ಸುದೇಶ್ ಒಪ್ಪಿಕೊಂಡಿದ್ದರು. ತನ್ನೊಂದಿಗೆ ನಾಲ್ಕೈದು ಜನರಿದ್ದು, ದ್ವೀಪದಲ್ಲಿರುವ ಪರಿಕರಗಳನ್ನು ಹೋಗಿದ್ದಾಗಿ ಪೊಲೀಸರಿಗೆ ತಿಳಿಸಿದ್ದರು. ತಕ್ಷಣ ವಾಪಸ್ ಬರಲು ತಿಳಿಸಿದಾಗ ಹೈಟೈಡ್ ಇದೆ, ಕಡಿಮೆ ಆದಾಗ ವಾಪಸ್ ಬರುವುದಾಗಿ ತಿಳಿಸಿದ್ದರು.
ರಾತ್ರಿ 1ಗಂಟೆವರೆಗೆ ವಾಪಸ್ ಬರದಿರುವುದರಿಂದ ಕರಾವಳಿ ಕಾವಲು ಪೊಲೀಸ್ ಗಸ್ತು ಬೋಟ್ ಭಾರ್ಗವದಲ್ಲಿ ತೆರಳಿದ್ದು, ದ್ವೀಪದಲ್ಲಿ ಮದ್ಯಪಾನ ಮಾಡಿ, ಊಟ ಮಾಡಿ ಮಲಗಿದ್ದ ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ರಾತ್ರಿ 3.15ಕ್ಕೆ ಎಲ್ಲರನ್ನು ಅಲ್ಲಿಂದ ಕರಾವಳಿ ಕಾವಲು ಪೊಲೀಸ್ ಮಲ್ಪೆ ಠಾಣೆಗೆ ಕರೆತರಲಾಗಿದೆ ಎಂದು ಸಿಎಸ್ಪಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ನಗರಸಭೆ ವಡಭಾಂಡೇಶ್ವರ ವಾರ್ಡ್ ಚುನಾಯಿತ ಸದಸ್ಯ ಯೋಗೀಶ್ ಸಾಲ್ಯಾನ್ ಮಲ್ಪೆಯ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ನಿರ್ವಾಹಕ ಸುದೇಶ್ ಶೆಟ್ಟಿ, ನಾನು ದ್ವೀಪಕ್ಕೆ ಹೋಗಿಲ್ಲ. ಐದು ಮಂದಿ ಕೆಲಸದವರು ಬೆಳಗ್ಗೆ ಅಲ್ಲಿರುವ ಪರಿಕರಗಳನ್ನು ತರಲು ಹೋಗಿದ್ದರು. ಸಂಜೆ ಅಲೆಗಳ ಅಬ್ಬರ ಹೆಚ್ಚಾ ಗಿರುವುದರಿಂದ ಅಲ್ಲೇ ಉಳಿದು ಮರುದಿನ ವಾಪಾಸ್ಸು ಬರಲು ನಿಶ್ಚಯಿಸಿದ್ದರು. ಅದು ಬಿಟ್ಟು ಅಲ್ಲಿ ಯಾವುದೇ ಪಾರ್ಟಿ ನಡೆದಿಲ್ಲ ಎಂದು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಕರಾವಳಿ ಕಾವಲು ಪೊಲೀಸ್ ಎಸ್ಪಿ ಚೇತನ್ ಆರ್. ಮಾಧ್ಯಮದೊಂದಿಗೆ ಮಾತನಾಡಿ, ಏಳು ಮಂದಿ ಶನಿವಾರ ತಡರಾತ್ರಿ ಸೈಂಟ್ ಮೇರೀಸ್ ದ್ವೀಪದಲ್ಲಿ ವಶಕ್ಕೆ ಪಡೆಯಲಾಗಿದೆ. ಮಲ್ಪೆ ಬೀಚ್ ಅಭಿವೃದ್ಧಿಯ ನಿರ್ವಾಹಕರೇ ಆಗಿರುವುದರಿಂದ ಸಮಿತಿಯ ಕರಾರಿನಲ್ಲಿ ಏನು ಅವಕಾಶ ಅವರಿಗಿದೆ ಎಂಬುದನ್ನು ಪರಿಶೀಲನೆ ನಡೆಸಬೇಕು. ವಶಕ್ಕೆ ಪಡೆದವರನ್ನು ವಿಚಾರಣೆ ನಡೆಸಿ, ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಅವರಿಗೆ ವರದಿ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.