ರಾತ್ರಿ ಸಂಚರಿಸುವ ಗ್ಯಾಸ್ ಟ್ಯಾಂಕರ್‍ಗಳ ವಶ: ಡಿಸಿ ಸೂಚನೆ

Spread the love

ಮಂಗಳೂರು: ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಗ್ಯಾಸ್ ಟ್ಯಾಂಕರ್‍ಗಳ ಸಂಚಾರಕ್ಕೆ ನಿರ್ಬಂಧವಿದ್ದರೂ, ಗ್ಯಾಸ್ ಟ್ಯಾಂಕರ್‍ಗಳು ಸಂಚರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿದ್ದು, ಈ ನಿಟ್ಟಿನಲ್ಲಿ ನಿರ್ಬಂಧಿತ ಅವಧಿಯಲ್ಲಿ ಸಂಚರಿಸುವ ಟ್ಯಾಂಕರ್‍ಗಳನ್ನು ವಶಪಡಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಸೂಚಿಸಿದ್ದಾರೆ.

ಅವರು ಮಂಗಳವಾರ ತಮ್ಮ ಕಚೇರಿಯಲ್ಲಿ ಈ ಸಂಬಂಧ ತೈಲಕಂಪೆನಿಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕರ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗದು. ಗ್ಯಾಸ್ ಟ್ಯಾಂಕರ್‍ಗಳ ಸಂಚಾರಕ್ಕೆ ಸಂಬಂಧಿಸಿ ಜಿಲ್ಲಾಡಳಿತವು ಹಲವು ಸೂಚನೆಗಳನ್ನು ನೀಡಿದ್ದರೂ,ಕಂಪೆನಿಗಳು ಪರಿಣಾಮಕಾರಿಯಾಗಿ ಪಾಲಿಸುತ್ತಿಲ್ಲ. ಹೀಗಾಗಿ ಜಿಲ್ಲೆಯ ಹಲವೆಡೆ ಆಗಿಂದಾಗ್ಗೆ ಗ್ಯಾಸ್ ಟ್ಯಾಂಕರ್‍ಗಳ ಅಪಘಾತ ಸಂಭವಿಸಿ, ಸಾರ್ವಜನಿಕರ ಜನಜೀವನಕ್ಕೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರಾತ್ರಿ ವೇಳೆ ಗ್ಯಾಸ್ ಟ್ಯಾಂಕರ್‍ಗಳ ಸಂಚಾರ ಕಂಡುಬಂದರೆ ಅವುಗಳನ್ನು ವಶಪಡಿಸಿಕೊಳ್ಳುವಂತೆ ಪೊಲೀಸ್ ಮತ್ತು ಆರ್‍ಟಿಓ ಇಲಾಖೆಗೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಾರ್ವಜನಿಕರು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6ಗಂಟೆಯವರೆಗೆ ಟ್ಯಾಂಕರ್‍ಗಳ ಸಂಚಾರ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ತಿಳಿಸಿದರು.

ಗ್ಯಾಸ್ ಟ್ಯಾಂಕರ್‍ಗಳಲ್ಲಿ ತಲಾ ಇಬ್ಬರು ಡ್ರೈವರ್ ಹಾಗೂ ಒಬ್ಬ ಕ್ಲೀನರ್ ಇರುವುದು ಕಡ್ಡಾಯವಾಗಿದೆ. ಆದರೆ ಒಬ್ಬ ಡ್ರೈವರ್ ಮಾತ್ರ ಸಂಚರಿಸುತ್ತಿರುವುದು ಕಂಡುಬರುತ್ತಿದೆ. ತೈಲ ಕಂಪೆನಿಗಳಿಗೆ ಡ್ರೈವರ್‍ಗಳ ಮಾಹಿತಿಯೇ ಇರುವುದಿಲ್ಲ. ಸಾವಿರಾರು ಟ್ಯಾಂಕರ್‍ಗಳು ಆಗಮಿಸುತ್ತಿದ್ದೂ, ಸಮರ್ಪಕವಾದ ಸುರಕ್ಷತಾ ಕ್ರಮ ಅನುಸರಿಸುತ್ತಿಲ್ಲ. ಕೇವಲ ಕಂಪೆನಿಯ ಒಳಗೆ ಮಾತ್ರ ಸುರಕ್ಷತಾ ಕ್ರಮಗಳು ಸಾಕಾಗುವುದಿಲ್ಲ. ಟ್ಯಾಂಕರ್ ಸಂಚರಿಸುವ ರಸ್ತೆಯುದ್ದಕ್ಕೂ, ಸುರಕ್ಷತಾ ಕ್ರಮಗಳನ್ನು ಪಾಲನೆಯಾಗುವುದು ಖಾತ್ರಿ ವಹಿಸುವುದು ಗ್ಯಾಸ್ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದರು.

ಗ್ಯಾಸ್ ಟ್ಯಾಂಕರ್ ಅಪಘಾತವಾಗಿ, ಗ್ಯಾಸ್ ಸೋರಿಕೆ ಯಾವ ಪ್ರಮಾಣದಲ್ಲಿದ್ದರೂ, ಅದನ್ನು ನಿಯಂತ್ರಿಸಿ ತಡೆಗಟ್ಟುವ ಜವಾಬ್ದಾರಿ ಸಂಬಂಧಪಟ್ಟ ತೈಲ ಕಂಪೆನಿಗಳದ್ದಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಗ್ಯಾಸ್ ಕಂಪೆನಿಗಳು ಸೇರಿ ಮಂಗಳೂರು-ಬೆಂಗಳೂರು ರಸ್ತೆ ಹಾಗೂ ಮಂಗಳೂರು-ಉಡುಪಿ ಹೆದ್ದಾರಿಗಳಲ್ಲಿ ತುರ್ತು ನಿರ್ವಹಣಾ ಕೇಂದ್ರ ಹಾಗೂ ಟ್ಯಾಂಕರ್‍ಗಳನ್ನು ಎತ್ತಲು ಕ್ರೇನನ್ನು ಇಡಬೇಕು. ಮುಂದಿನ 1 ವಾರದೊಳಗೆ ಈ ಬಗ್ಗೆ ಕ್ರಮ ಕೈಗೊಳ್ಳಲು ಅವರು ಸೂಚಿಸಿದರು.

ಗ್ಯಾಸ್ ಟ್ಯಾಂಕರ್‍ಗಳು ಅವಘಡಕ್ಕೀಡಾಗಿ, ಗ್ಯಾಸ್ ಸೋರಿಕೆಯಾಗಿ ಸಾರ್ವಜನಿಕ ಜೀವ, ಆಸ್ತಿ ಪಾಸಿಗೆ ಹಾನಿಯಾದಾಗ ಗ್ಯಾಸ್ ಕಂಪೆನಿಗಳು ಸಂತ್ರಸ್ತರಿಗೆ ಅಲ್ಪ ಪರಿಹಾರ ಕೊಟ್ಟು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ ಜಿಲ್ಲಾಧಿಕಾರಿಗಳು, ಮುಂದಿನ ದಿನಗಳಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಗ್ಯಾಸ್ ಟ್ಯಾಂಕರ್‍ಗಳ ಚಿಕ್ಕ ಅಪಘಾತವಾದರೂ ಕಠಿಣ ಕ್ರಮಗಳನ್ನು ಕೈಗೊಳ್ಳಲಾವುದು. ಗ್ಯಾಸ್ ಟ್ಯಾಂಕರ್‍ಗಳ ಮಾಲೀಕರು ಯಾರೇ ಆಗಿದ್ದರೂ, ಸಾರ್ವಜನಿಕ ರಸ್ತೆಗಳಲ್ಲಿ ಅವುಗಳ ಸುರಕ್ಷಿತ ಸಂಚಾರದ ಬಗ್ಗೆ ಗ್ಯಾಸ್ ಕಂಪೆನಿಗಳೇ ಜವಾಬ್ದಾರಿ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಎಲ್‍ಪಿಜಿ ಟ್ಯಾಂಕರ್‍ಗಳ ಜಿಪಿಎಸ್ ವ್ಯವಸ್ಥೆಯನ್ನು ಪೊಲೀಸ್ ಕಂಟ್ರೋಲ್ ರೂಂಗೆ ಸಂಪರ್ಕಿಸಲಾಗುವುದು. ಅಲ್ಲದೇ, ಟ್ಯಾಂಕರ್‍ಗಳಿಗೆ ಕಡ್ಡಾಯವಾಗಿ ಸ್ಪೀಡ್ ಗವರ್ನರ್ ಅಳವಡಿಸಲಾಗುವುದು. ಈ ನಿಟ್ಟಿನಲ್ಲಿ ಗ್ಯಾಸ್ ಟ್ಯಾಂಕರ್‍ಗಳಿಗೆ ಏಪ್ರಿಲ್ ತಿಂಗಳ ಬಿಲ್ ಪಾವತಿಯನ್ನು ಸ್ಪೀಡ್ ಗವರ್ನರ್ ಅಳವಡಸಿದ ಬಳಿಕವಷ್ಟೇ ಪಾವತಿಸಲು ಎ.ಬಿ. ಇಬ್ರಾಹಿಂ ಅವರು ಗ್ಯಾಸ್ ಕಂಪೆನಿಗಳ ಅಧಿಕಾರಿಗಳಿಗೆ ಆದೇಶಿಸಿದರು.

ತೈಲ ಕಂಪೆನಿಗಳೊಂದಿಗೆ ಚರ್ಚಿಸಿ, ಕಲ್ಲಡ್ಕ ಮತ್ತು ಶಿರಾಡಿ ಮಧ್ಯೆ ಎರಡು ಕಡೆ ಟ್ಯಾಂಕರ್‍ಗಳ ಪಾರ್ಕಿಂಗ್ ಟರ್ಮಿನಲ್‍ಗೆ ಜಾಗ ಗುರುತಿಸುವಂತೆ ಆರ್‍ಟಿಓ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಇದಕ್ಕಾಗಿ ಜಿಲ್ಲಾಡಳಿತ ಜಾಗ ನೀಡಲಿದೆ. ಗುಂಡ್ಯ-ಉಪ್ಪಿನಂಗಡಿ ಮಧ್ಯೆ ಅಗ್ನಿಶಾಮಕ ಠಾಣೆ ತೆರೆಯಲು ಜಾಗ ನೀಡಲಾಗುವುದು. ನಿಗದಿತ ಪಾರ್ಕಿಂಗ್ ಹೊರತುಪಡಿಸಿ, ರಸ್ತೆ ಬದಿಗಳಲ್ಲಿ, ಜನವಸತಿ ಪ್ರದೇಶಗಳಲ್ಲಿ ಟ್ಯಾಂಕರ್‍ಗಳ ಪಾರ್ಕಿಂಗ್‍ಗೆ ನಿಷೇಧ  ವಿಧಿಸಿ ಆದೇಶ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಇತ್ತೀಚೆಗೆ ಸೂರಿಕುಮೇರ್‍ನಲ್ಲಿ ನಡೆದ ಗ್ಯಾಸ್ ಟ್ಯಾಂಕರ್ ಅಪಘಾತದ ನಿರ್ವಹಣೆಗೆ ತಗುಲಿದ ಸಂಪೂರ್ಣ ಖರ್ಚುವೆಚ್ಚ, ಸಂತ್ರಸ್ತರಿಗೆ ಪರಿಹಾರವನ್ನು ಸಂಭಂಧಪಟ್ಟ ಗ್ಯಾಸ್ ಕಂಪೆನಿಯಿಂದಲೇ ವಸಸೂಲು ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ, ಅಪರ ಜಿಲ್ಲಾಧಿಕಾರಿ ಕುಮಾರ್, ಎಎಸ್‍ಪಿ ವಿನ್ಸಂಟ್ ಶಾಂತಕುಮಾರ್, ಕಾರ್ಖಾನೆ ಸುರಕ್ಷತಾ ಇಲಾಖೆ ಉಪನಿರ್ದೇಶಕ ನಂಜಪ್ಪ, ವಿವಿಧ ಗ್ಯಾಸ್, ತೈಲ ಕಂಪೆನಿಗಳ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.


Spread the love