ರಾಮಕೃಷ್ಣ ಮಿಷನ್ ಐದನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನದ 7ನೇ ಶ್ರಮದಾನ
ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ ಐದನೇ ಹಂತದ ಪ್ರಯುಕ್ತ ಹಮ್ಮಿಕೊಳ್ಳಲಾಗುತ್ತಿರುವ 7ನೇ ರವಿವಾರದ ಶ್ರಮದಾನವನ್ನು ದಿನಾಂಕ 20 ಜನವರಿ 2019 ರಂದು ಬೆಳಿಗ್ಗೆ 7-30 ರಿಂದ 10-30 ರವರೆಗೆ ಕೇಂದ್ರ ರೈಲು ನಿಲ್ದಾಣದ ಹೊರಪರಿಸರದಲ್ಲಿ ಕೈಗೊಳ್ಳಲಾಯಿತು. ರೈಲ್ವೆ ಇಲಾಖೆಯ ಹಿರಿಯ ಆರೋಗ್ಯಾಧಿಕಾರಿ ಡಾ. ಶಿವಶಂಕರ್ ಮೂರ್ತಿ ಹಾಗೂ ವಿಕಾಸ್ ಪದವಿಪೂರ್ವ ಕಾಲೇಜಿನ ಡಾ. ಅನಂತ ಪ್ರಭು ಇವರುಗಳು ಜಂಟಿಯಾಗಿ ಅಭಿಯಾನವನ್ನು ಶುಭಾರಂಭಗೊಳಿಸಿದರು. ಈ ಸಂದರ್ಭದಲ್ಲಿ ಶುಭಹಾರೈಸಿ ಮಾತನಾಡಿದ ಡಾ. ಅನಂತ ಪ್ರಭು “ಜನರ ಮನಸ್ಸು ಶುದ್ಧವಾಗದೇ ದೇಶ ಸ್ವಚ್ಛವಾಗದು. ಸಾರ್ವಜನಿಕರು ಜವಾಬ್ದಾರಿಯಿಂದ ವರ್ತಿಸಿದಾಗ ಈ ತೆರನಾದ ಶ್ರಮದಾನಗಳಿಗೆ ಅರ್ಥ ಬರುತ್ತದೆ. ಶ್ರಮದಾನದೊಂದಿಗೆ ಸ್ವಚ್ಛ ಮನಸ್ಸು ಎಂಬ ಅಭಿಯಾನವನ್ನು ಆಯೋಜಿಸಿ ಜನಜಾಗೃತಿಯನ್ನೂ ಉಂಟು ಮಾಡುತ್ತಿರುವ ರಾಮಕೃಷ್ಣ ಮಿಷನ್ನಿನ ಕಾರ್ಯ ಅದ್ವಿತೀಯವಾದುದು” ಎಂದು ತಿಳಿಸಿ ಶುಭ ಹಾರೈಸಿದರು.
ಡಾ. ಶಿವಶಂಕರ್ ಮೂರ್ತಿ ಮಾತನಾಡಿ “ಸ್ವಚ್ಛತೆ ಎಂಬುದು ಮೌಲ್ಯವಾದಾಗ ಸ್ವಚ್ಛ ಭಾರತ ಸಾಕಾರಗೊಳ್ಳುತ್ತದೆ. ಸ್ವಚ್ಛತೆಗೂ ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ. ನಾವು ಆರೋಗ್ಯವಂತರಾಗಿರಬೇಕಾದರೆ ಸ್ವಚ್ಛತೆಯನ್ನು ಮೈಗೂಡಿಸಿಕೊಳ್ಳಬೇಕು. ಕೇವಲ ನನ್ನ ಮನೆ ಶುಚಿಯಾಗಿದ್ದರೆ ಸಾಲದು, ನಾವು ವಾಸಿಸುವ ಪರಿಸರವೂ ಸ್ವಚ್ಛವಾಗಿದ್ದಾಗ ಮಾತ್ರ ನಾವು ಆರೋಗ್ಯವಂತನಾಗಿರಲು ಸಾಧ್ಯ. ಈ ಸ್ವಚ್ಛತಾ ಅಭಿಯಾನಗಳು ನಮ್ಮ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪ್ರೇರೇಪಣೆಯಾಗಬಲ್ಲವು” ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರೈಲ್ವೆ ಸ್ಟೇಷನ್ ಮೆನೇಜರ್ ರಾಮಕುಮಾರ್, ಪೆÇೀಲಿಸ್ ಅಧಿಕಾರಿ ಎ ಎಸ್ ಐ ಬಿನೋಯ, ಉಪ ಸ್ಟೇಷನ್ ಮಾಸ್ಟರ್ ಕಿಶನ್ ಹಾಗೂ ಇತರೆ ರೈಲ್ವೆ ಸಿಬ್ಬಂದಿ ಉಪಸ್ಥಿತರಿದ್ದರು. ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ವಂದಿಸಿದರು.
ಆರು ತಂಡಗಳಿಂದ ಶ್ರಮದಾನ : ಸುಮಾರು ಮೂನ್ನೂರು ಜನ ಕಾರ್ಯಕರ್ತರನ್ನು ಒಟ್ಟು ಆರು ತಂಡಗಳಲ್ಲಿ ವಿಂಗಡಿಸಿಕೊಂಡು. ರೈಲ್ವೇ ನಿಲ್ದಾಣದ ಹೊರಾವರಣ ಹಾಗೂ ರಸ್ತೆಗಳಲ್ಲಿ ಸ್ವಚ್ಛತೆ ಕೈಗೊಳ್ಳಲಾಯಿತು. ಕಳೆದ ಎರಡು ದಿನಗಳಿಂದ ರಾಮಕೃಷ್ಣ ಮಠದಲ್ಲಿ ಯುವಕರಿಗಾಗಿ ನಡೆಯುತ್ತಿರುವ ‘ಪ್ರೇರಣಾ ಶಿಬಿರ’ದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳೂ ಈ ವಾರದ ಸ್ವಚ್ಛ ಮಂಗಳೂರು ಶ್ರಮದಾನದಲ್ಲಿ ಭಾಗವಹಿಸಿದರು. ಮೊದಲ ತಂಡ ರಾಜಗೋಪಾಲ ಶೆಟ್ಟಿ ಹಾಗೂ ಸುಭೋದಯ ಆಳ್ವ ಜೊತೆಗೂಡಿ ರೈಲ್ವೆ ನಿಲ್ದಾಣದಿಂದ ಪುರಭವನದತ್ತ ಸಾಗುವ ರಸ್ತೆಯ ಇಕ್ಕೆಲಗಳನ್ನು ಸ್ವಚ್ಛ ಮಾಡಿದರು. ಎರಡನೇ ತಂಡ ಯೋಗೀಶ್ ಕಾಯರ್ತಡ್ಕ ಹಾಗೂ ಸುಧೀರ್ ವಾಮಂಜೂರು ನೇತೃತ್ವದಲ್ಲಿ ಅತ್ತಾವರದತ್ತ ಸಾಗುವ ಮಾರ್ಗ ಹಾಗೂ ಕಾಲುದಾರಿಯಲ್ಲಿ ಬಿದ್ದುಕೊಂಡಿದ್ದ ಮಣ್ಣು, ರಾಶಿ ಹಾಗೂ ತ್ಯಾಜ್ಯವನ್ನು ತೆಗೆದು ಹಾಕಿದರು. ಮೂರನೇ ತಂಡ ಸುಬ್ರಾಯ ನಾಯಕ್ ಮಾರ್ಗದರ್ಶನದಲ್ಲಿ ಮಿಲಾಗ್ರೀಸ್ ವೃತ್ತದತ್ತ ಸಾಗುವ ದಾರಿಯಲ್ಲಿ ಸ್ವಚ್ಛತೆಯನ್ನು ನಡೆಸಿದರು. ನಾಲ್ಕನೇ ತಂಡದ ಸದಸ್ಯರು ಕಮಲಾಕ್ಷ ಪೈರೊಂದಿಗೆ ಸೇರಿ ಪ್ರಾದೇಶಿಕ ರೈಲ್ವೆ ಪ್ರಬಂಧಕರ ಕಚೇರಿಯ ಮುಂಭಾಗದಲ್ಲಿದ್ದ ಹುಲ್ಲು ಕಸ ಕಡ್ಡಿಗಳನ್ನು ತೆಗೆದು ಹಸನು ಮಾಡಿದರು. ಐದನೇ ತಂಡದಲ್ಲಿದ್ದ ಶ್ರೀಮತಿ ಯಶೋದ ರೈ, ಸ್ಮಿತಾ ಶೈಣೈ ಹಾಗೂ ಇತರ ಮಹಿಳಾ ಕಾರ್ಯಕರ್ತರು ರೈಲ್ವೆ ನಿಲ್ದಾಣ ಮುಂಭಾಗದ ವಾಹನ ನಿಲುಗಡೆ ಸ್ಥಳವನ್ನು ಗುಡಿಸಿದರು. ಕೊನೆಯ ತಂಡದ ಸದಸ್ಯರು ರೈಲು ನಿಲ್ದಾಣ ಮುಂಭಾಗದ ಮೇಲ್ಭಾಗದ ಪಾರ್ಕಿಂಗ್ ಸ್ಥಳವನ್ನು ಹಿಮ್ಮತ್ ಸಿಂಗ್, ಮಹ್ಮದ್ ಶಮೀಮ್ ಅವರೊಂದಿಗೆ ಸೇರಿಕೊಂಡು ಶುಚಿಮಾಡಿದರು.
ವಿಶೇಷ ಕಾರ್ಯ: ರೈಲ್ವೆ ನಿಲ್ದಾಣದಿಂದ ಅತ್ತಾವರದತ್ತ ಸಾಗುವ ಮಾರ್ಗದ ಬದಿಯಲ್ಲಿ ಕಸದ ರಾಶಿಯೇ ಬಿದ್ದಿತ್ತು. ಸಾಲದೆಂಬಂತೆ ಅದು ಮೂತ್ರ ವಿಸರ್ಜನೆಯ ತಾಣವೂ ಆಗಿತ್ತು. ಸ್ವಚ್ಛ ಮಂಗಳೂರು ಕಾರ್ಯಕರ್ತರಾದ ಚೇತನಾ, ದಿನೇಶ್, ಸುಮಾ ಕೊಡಿಕಲ್ ಮತ್ತಿತರರು ಅಲ್ಲಿಯ ತ್ಯಾಜ್ಯವನ್ನೆಲ್ಲ ತೆಗೆದು ಶುಚಿಗೊಳಿಸಿದರು. ಹಲವು ಕಾಲದಿಂದಿದ್ದ ಕಸದ ಕೊಪ್ಪೆಯ ಗಬ್ಬುನಾತದಿಂದ ರಸ್ತೆಯ ಮೇಲೆ ಓಡಾಡುವ ಜನರೆಲ್ಲ ಮೂಗುಮುಚ್ಚಿ ಹೋಗುವಂತಾಗಿತ್ತು. ಆದರೆ ಇಂದು ಆ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಅಲ್ಲಿ ರೋಗ ಹರಡದಂತೆ ಪೌಡರ್ ಹಾಕಲಾಗಿದೆ. ಇನ್ನೊಂದೆಡೆ ಅದೇ ರೀತಿಯ ಸ್ಥಳ ರೈಲ್ವೆ ನಿಲ್ದಾಣದಿಂದ ಟೌನ್ ಹಾಲ್ಗೆ ತೆರಳುವ ಮಾರ್ಗ ಮಧ್ಯದಲ್ಲಿತ್ತು. ಅದನ್ನೂ ಇಂದು ಸ್ವಚ್ಛಗೊಳಿಸಿ ಅಲ್ಲಿರುವ ಅಂಗಡಿ ವರ್ತಕರಿಗೆ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಲಾಯಿತು. ಸ್ವಚ್ಛತಾ ಅಭಿಯಾನದ ಸ್ವಯಂ ಸೇವಕರಾದ ಶ್ರದ್ಧಾ ಎಸ್ ಕೆ, ಕಾಂಚನಾ, ಪೆÇ್ರೀ. ರಾಮನಾಥ್, ನಿಶಾ, ಕಿರಣ ಫರ್ನಾಂಡಿಸ್ ಮತ್ತಿತರರು ಶ್ರಮದಾನದಲ್ಲಿ ಭಾಗಿಯಾಗಿದ್ದರು.
ಏರ್ಪೆÇೀರ್ಟ್ ರಸ್ತೆಯಲ್ಲಿ ಸ್ವಚ್ಛತೆ: ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಕರ್ನಾಟಕ ಪಾಲಿಟೆಕ್ನಿಕ್ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಏರ್ ಪೆÇೀರ್ಟ್ ರಸ್ತೆಯಲ್ಲಿ ಶ್ರಮದಾನ ಜರುಗಿತು. ಕೆಪಿಟಿ ವೃತ್ತ, ಬಸ್ ತಂಗುದಾಣ ಹಾಗೂ ಏರ್ಪೆÇೀರ್ಟ್ ರಸ್ತೆಯ ಬದಿ ಹಾಗೂ ಕಾಲುದಾರಿಗಳನ್ನು ಸ್ವಚ್ಛಗೊಳಿಸಲಾಯಿತು. ಜೊತೆಗೆ ಬಸ ತಂಗುದಾಣಗಳನ್ನೂ ಸ್ವಚ್ಛ ಮಾಡಲಾಯಿತು. ಉಪನ್ಯಾಸಕ ಶ್ರೀ ಸೂರಜ್ ನೇತೃತ್ವದಲ್ಲಿ ಗೌತಮ್, ಮಹಾಗುಂಡ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಭಾಗಿಯಾಗಿದ್ದರು.
ಸ್ವಚ್ಛ ಗ್ರಾಮ ಅಭಿಯಾನ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ರಾಮಕೃಷ್ಣ ಮಿಷನ್ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತಾ ಶ್ರಮದಾನಗಳನ್ನು ಕೈಗೊಳ್ಳುತ್ತಿದೆ. ಇಂದು ಬಾಳಿಲ, ಹೆಬ್ರಿ, ಶಿರ್ವಾ, ಅಮಾಸೆಬೈಲು, ಜೋಕಟ್ಟೆ, ಪಡುಮೂರ್ನಾಡು, ಕುಟ್ರಪಾಡಿ, ಮಡಾಮಕ್ಕಿ, ಬಾರ್ಕೂರು, ಪಡುಪಣಂಬೂರು ಸೇರಿದಂತೆ ಒಟ್ಟು ಮೂವತ್ತಕ್ಕೂ ಅಧಿಕ ಗ್ರಾಮಗಳಲ್ಲಿ ಶ್ರಮದಾನ ಜರುಗಿತು. ಈ ಸ್ವಚ್ಛತಾ ಅಭಿಯಾನಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.