ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು 16 ನೇ ವಾರ ಸ್ವಚ್ಛತಾ ಕಾರ್ಯಕ್ರಮ
ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನದ 16 ನೇ ವಾರದಲ್ಲಿ ಜರುಗಿದ ಸ್ವಚ್ಛತಾ ಕಾರ್ಯಕ್ರಮಗಳ ವರದಿ
186) ಯಯ್ಯಾಡಿ-ಮೇರಿಹಿಲ್: ಏರಪೋರ್ಟ್ ರಸ್ತೆಯಲ್ಲಿ ಫ್ರೆಂಡ್ಸ್ ಫಾರ್ ಎವರ್ ತಂಡದಿಂದ ಮೇರಿಹಿಲ್ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ಜರುಗಿತು. ಸ್ವಾಮಿ ಜಿತಕಾಮಾನಂದಜಿ ಹಾಗೂ ಶ್ರೀ ಅಶೋಕ ಹೆಗ್ಡೆ ಜಂಟಿಯಾಗಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಶ್ರೀ ಶುಭೋದಯ ಆಳ್ವ ಮಾರ್ಗದರ್ಶನದಲ್ಲಿ ಶಾಲಿಮಾರ್ ಪೇಂಟ್ಸ್ನ ಸಿಬ್ಬಂದಿ ರಸ್ತೆ ಬದಿಯಲ್ಲಿದ್ದ ಕಲ್ಲು ಮಣ್ಣುಗಳ ರಾಶಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು. ಮತ್ತೊಂದು ತಂಡ ಶ್ರೀ ಸುಜಿತ್ ಭಂಡಾರಿ ಮುಂದಾಳತ್ವದಲ್ಲಿ ಮೇರಿಹಿಲ್ ವೃತ್ತದಲ್ಲಿ ಸ್ವಚ್ಛತೆ ನಡೆಸಿದರು. ಪೂರ್ವ ಮಹಾಪೌರರಾದ ಶ್ರಿ ಮಹಾಬಲ ಮಾರ್ಲ, ಶ್ರೀ ಪ್ರಭಾಕರ ಪದವಿನಂಗಡಿ, ಶ್ರೀ ಕೆ ವಿ ಪ್ರಸಾದ ಮತ್ತಿತರರು ಅಭಿಯಾನದಲ್ಲಿ ಭಾಗವಹಿಸಿದರು.
187) ಕರಂಗಲಪಾಡಿ : ಸುಬ್ರಮಣ್ಯ ಸಭಾದ ಸದಸ್ಯರಿಂದ ಪಿಂಟೋ ಲೇನಿನಲ್ಲಿ ಸ್ವಚ್ಛತಾ ಕಾರ್ಯ ಜರುಗಿತು. ಕಾಪುಚಿನ್ ಚರ್ಚ ಫಾದರ್ ಸಲ್ವಾದೊರ್ ಹಾಗೂ ಶ್ರೀ ಎಂ ಆರ್ ವಾಸುದೇವ್ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಸ್ವಚ್ಛತೆಯ ಜಾಗೃತಿಯನ್ನು ಉಂಟುಮಾಡಲು ಹಾಗೂ ನಗರ ಸೌಂದರೀಕರಣ ದೃಷ್ಟಿಯಿಂದ ಕಾಪುಚಿನ್ ಚರ್ಚ ಆವರಣ ಗೋಡೆಗೆ ಸ್ವಚ್ಛತಾ ಜಾಗೃತಿಯ ಕಲಾಕೃತಿಯನ್ನು ರಚಿಸಲಾಗಿದೆ. ಶ್ರೀಕಾಂತ ರಾವ್ ಸೇರಿದಂತೆ ಸುಮಾರು 45 ಜನ ಕಾರ್ಯಕರ್ತರು ಪಿಂಟೊಲೇನ್ ರಸ್ತೆಯ ಬದಿಹಾಗೂ ತೋಡುಗಳನ್ನು ಸ್ವಚ್ಛಗೊಳಿಸಿದರು. ಡಾ. ಎ ಪಿ ಕೃಷ್ಣ, ಡಾ. ತಿಪ್ಪೇಸ್ವಾಮಿ, ಶ್ರೀನಿವಾಸ ಶೆಟ್ಟಿ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.
188) ಕಪಿತಾನಿಯೋ: ಟೀಮ್ ಗರೋಡಿ ಸಂಯೋಜಕತ್ವದಲ್ಲಿ ಕಪಿತಾನಿಯೋ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು. ಕಪಿತಾನಿಯೋ ಶಾಲೆಯ ಮುಖ್ಯಾಧ್ಯಾಪಕಿ ಸಿಸ್ಟರ್ ಲೀನಾ ಡಿಸೋಜಾ ಹಾಗೂ ಶ್ರೀ ಶ್ರೀಕರ್ ಪ್ರಭು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿನ್ನೆಯಿಂದಲೇ ಪ್ರಾರಂಭವಾದ ಅಭಿಯಾನದಲ್ಲಿ ಎರಡು ಬಸ್ ತಂಗುದಾಣಗಳನ್ನು ಶುಚಿಗೊಳಿಸಿ ನವೀಕರಿಸಲಾಯಿತು. ಮೇಲ್ಛಾವಣಿ ಬದಲಿಸಿ ಬಣ್ಣ ಬಳಿದು ಸ್ವಚ್ಛತೆಯ ಜಾಗೃತಿಯ ಫಲಕ ಹಾಕಲಾಯಿತು. ಸಾಂಪ್ರದಾಯಿಕ ಕಂಬಳ ಉಳಿಸಿ ಅಭಿಯಾನದ ಹೋರ್ಡಿಂಗ್ ಕೂಡ ಬಸ್ ತಂಗುದಾಣಕ್ಕೆ ಅಳವಡಿಸಲಾಯಿತು. ಕಪಿತಾನಿಯೋ ಶಾಲಾ ವಿದ್ಯಾರ್ಥಿಗಳು ರಸ್ತೆಗಳನ್ನು ಹಾಗೂ ತೋಡುಗಳನ್ನು ಶುಚಿಗೊಳಿಸಿದರು. ಗರೋಡಿ ಎಕ್ಸೆಲ್ ಜಿಮ್ ಸದಸ್ಯರು, ಶ್ರೀ ಅಶ್ವಿನ್, ಶ್ರೀ ಮಧುಪ್ರಸಾದ ಸೇರಿದಂತೆ ಅನೇಕರು ಭಾಗವಹಿಸಿದರು. ಗರೋಡಿಯ ಶ್ರೀ ಸಂದೀಪ್, ಶ್ರೀಪ್ರಕಾಶ್ ಹಾಗೂ ಶ್ರೀ ಬ್ರಿಜೇಶ್ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು.
189) ಮಂಗಳಾದೇವಿ: ನಿವೇದಿತ ಬಳಗದಿಂದ ಮಂಕಿಸ್ಟಾಂಡ್ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಉದ್ಯಮಿ ಶ್ರೀ ಶಾಂತೇಶ್ ಎಸ್ ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿವೇದಿತಾ ಬಳಗದ ಸದಸ್ಯರು ರಸ್ತೆಗಳನ್ನು ಶುಚಿಗೊಳಿಸಿ ಮೂಲೆಯೊಂದರಲ್ಲಿ ಸಂಗ್ರಹವಾಗಿದ್ದ ಕಸ ತ್ಯಾಜ್ಯವನ್ನು ತೆರವುಗೊಳಿಸಿದರು. ಹಾಗೆಯೇ ಮನೆ ಮನೆಗೆ ತೆರಳಿ ಸ್ವಚ್ಛತೆಯ ಕುರಿತು ಮಾಹಿತಿ ನೀಡಿದರು. ಕಾರ್ಯಕರ್ತರಾದ ಶ್ರೀ ಶಿಶಿರ ಅಮೀನ್ ಹಾಗೂ ಉಪನ್ಯಾಸಕ ಶ್ರೀ ಮೆಹಬೂಬ್ ಇನ್ನುಳಿದ ಸದಸ್ಯರನ್ನು ಮಾರ್ಗದರ್ಶಿಸಿದರು.
190) ರಥಬೀದಿ: ಸರಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ರಥಬೀದಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಪ್ರೋ. ಶಿವರಾಮ್ ಹಾಗೂ ಪ್ರೋ. ರವಿಕುಮಾರ್ ಅಭಿಯಾನವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು ಸ್ಕೂಲ್ ಬುಕ್ ಕಂಪೆನಿಯಿಂದ ನ್ಯೂ ಪೀಲ್ಡ್ ರಸ್ತೆಯ ತನಕ ಸ್ವಚ್ಛತಾ ಕೈಂಕರ್ಯವನ್ನು ಕೈಗೊಂಡರು. ಪ್ರಾಧ್ಯಾಪಕ ಶ್ರೀ ಶೇಷಪ್ಪ ಅಮೀನ್ ಅಭಿಯಾನವನ್ನು ಸಂಯೋಜಿಸಿದರು.
191) ಕೆಪಿಟಿ ವೃತ್ತ: ಕೆಪಿಟಿ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಕೆಪಿಟಿ ವೃತ್ತ ಹಾಗೂ ಏರ್ಪೋರ್ಟ್ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀ ನರಸಿಂಹ ಭಟ್ ಹಾಗೂ ಎನ್ ಎಸ್ ಎಸ್ ಅಧಿಕಾರಿ ಶ್ರೀ ಸಂತೋಷಕುಮಾರ್ ಪಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಎರಡು ತಂಡಗಳಲ್ಲಿ ಸ್ವಚ್ಛತೆಯನ್ನು ಕೈಗೊಂಡರು. ಮೊದಲ ತಂದ ಕೆಪಿಟಿ ವೃತ್ತದಲ್ಲಿ ಸ್ವಚ್ಛತೆ ಕೈಗೊಂಡಿತು. ಹಾಗೂ ಎರಡನೇ ತಂಡ ಏರಪೋರ್ಟ್ಗೆ ಹೋಗುವ ರಸ್ತೆಯನ್ನು ಗುಡಿಸಿ ಶುಚಿಗೊಳಿಸಿದರು. ಕಾಲುದಾರಿಯಲ್ಲಿದ್ದ ಬೃಹತ್ ಮರದ ದಿಮ್ಮಿಯನ್ನು ಶ್ರಮವಹಿಸಿ ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಪ್ರಾಧ್ಯಾಪಕರಾದ ಸುರಜ್ ಪಿ, ಬಾಲಕೃಷ್ಣ ಭಟ್ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.
192) ಕೊಣಾಜೆ : ಮಂಗಳಗಂಗೋತ್ರಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಂದ ಕೊಣಾಜೆಯಲ್ಲಿ ಸ್ವಚ್ಛ ಭಾರತ ಅಭಿಯಾನ ನಡೆಯಿತು. ಪ್ರೋ. ಸುದೀಪ ಹಾಗೂ ಪ್ರೋ. ಯತೀಶ್ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಸ್ನಾತಕೊತ್ತರ ವಿದ್ಯಾರ್ಥಿಗಳು ಕೊಣಾಜೆಯ ಬಸ್ ತಂಗುದಾಣವನ್ನು ಶುಚಿಗೊಳಿಸಿದರು. ಅಲ್ಲದೆ ಅದರ ಸುತ್ತಮುತ್ತಲಿನ ಪ್ರದೇಶದ ರಸ್ತೆಗಳನ್ನು ಸ್ವಚ್ಛ ಮಾಡಿದರು. ಅಂಗಡಿ ಹಾಗೂ ಮನೆಗಳಿಗೆ ತೆರಳಿ ಕರಪತ್ರ ನೀಡಿ ಸ್ವಚ್ಛತೆಯ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ವಿದ್ಯಾರ್ಥಿಗಳಾದ ಗಿರೀಶ್ ಕುಟ್ಟತ್ತಾಜೆ, ಮನೋಜ್ ಮೊಗವೀರ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಅಭಿಯಾನದಲ್ಲಿ ಪಾಲ್ಗೊಂಡರು.