ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 10 ನೇ ಭಾನುವಾರದ ವರದಿ
ಮಂಗಳೂರು : ನಾಲ್ಕನೇ ಹಂತದ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 10ನೇ ವಾರದ ಸ್ವಚ್ಛತಾ ಕಾರ್ಯಕ್ರಮವನ್ನು 7 ಜನವರಿ 2018 ಭಾನುವಾರದಂದು ಕದ್ರಿಯಲ್ಲಿರುವ ವೀರ ಯೋಧರ ಸ್ಮಾರಕದ ಎದುರುಗಡೆ ಹಮ್ಮಿಕೊಳ್ಳಲಾಗಿತ್ತು. ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಘನ ಉಪಸ್ಥಿತಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಹಾಗೂ ಖ್ಯಾತ ವೈದ್ಯರಾದ ಡಾ. ಜೀವರಾಜ್ ಸೊರಕೆ ಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿ ಶುಭ ಹಾರೈಸಿದರು.
ಪ್ರಥಮ್ ಮಾತನಾಡಿ “ರಾಮಕೃಷ್ಣ ಮಿಷನ್ನಿನ ಕಾರ್ಯ ಇಡೀ ದೇಶಕ್ಕೆ ಮಾದರಿಯಾಗುವಂತದ್ದು. ಇದು ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಗದೇ ಇಡೀ ಕರ್ನಾಟಕದಾದ್ಯಂತ ಪಸರಿಸಬೇಕು. ಬಾಹ್ಯ ಶುಚಿತ್ವದಂತೆ ಮನಸ್ಸನ್ನು ಹಸನುಗೊಳಿಸುವ ‘ಸ್ವಚ್ಛ ಮನಸ್ಸು’ ಕಾರ್ಯಕ್ರಮ ರಾಮಕೃಷ್ಣ ಮಿಷನ್ನಿನಿಂದ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಪ್ರಧಾನಿಯವರ ಕನಸು ಇಲ್ಲಿ ನನಸಾಗುತ್ತಿರುವುದು ಹೆಮ್ಮೆಯಾಗುತ್ತಿದೆ. ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಪಾಲ್ಗೊಳ್ಳುವುದಕ್ಕೆ ಹಮ್ಮೆಪಡುತ್ತೇನೆ.” ಎಂದು ತಿಳಿಸಿದರು.
ಡಾ. ಜೀವರಾಜ್ ಸೊರಕೆ ಮಾತನಾಡಿ “ಕಳೆದ ಮೂರುವರೆ ವರ್ಷಗಳಿಂದ ಈ ಅಭಿಯಾನ ನಿರಂತರವಾಗಿ ನಡೆದುಕೊಂಡು ಬಂದು ಜನಮಾನಸವನ್ನು ಮುಟ್ಟಿ ಜನಜಾಗೃತಿ ಉಂಟುಮಾಡುವಲ್ಲಿ ಯಶಸ್ವಿಯಾಗಿದೆ. ಇದರ ಹಿಂದಿನ ಪರಿಶ್ರಮ ಅಪಾರವಾದುದು. ಇದರ ಯಶಸ್ಸಿಗೆ ರಾಮಕೃಷ್ಣ ಮಿಷನ್ನಿಗೆ ವಿಶೇಷ ಅಭಿನಂದನೆಗಳು” ಎಂದು ತಿಳಿಸಿದರು.
ಸ್ವಚ್ಛತಾ ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿ ಅಭಿಯಾನ ಸಾಗಿ ಬಂದ ದಾರಿ ಹಾಗೂ ನಾಲ್ಕನೇ ಹಂತದಲ್ಲಿ ಆಗುತ್ತಿರುವ ಸ್ವಚ್ಛತಾ ಅಭಿಯಾನದ ಕುರಿತು ವಿವರಿಸಿದರು. ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಸ್ವಾಗತಿಸಿ ವಂದಿಸಿದರು.
ಸ್ವಚ್ಛತಾ ಕಾರ್ಯ: ಔಪಚಾರಿಕ ಕಾರ್ಯಕ್ರಮದ ಬಳಿಕ ಸ್ವಾಮಿಜಿಗಳು ಸ್ವಯಂ ಸೇವಕರು ಪೆÇರಕೆ ಬುಟ್ಟಿಗಳನ್ನು ಹಿಡಿದು ಸ್ವಚ್ಛತಾ ಕಾರ್ಯ ಮಾಡಿದರು. ಸ್ವಾಮಿಜಿಗಳೊಂದಿಗೆ ಪ್ರಥಮ್ ಕದ್ರಿ ಪಾರ್ಕ್ ರಸ್ತೆಯಲ್ಲಿ ಕಸ ಗುಡಿಸಿದ್ದಲ್ಲದೇ ಅಲ್ಲಲ್ಲಿ ಬಿದ್ದುಕೊಂಡಿದ್ದ ಬಾಟಲ್‍ಗಳನ್ನು ಹೆಕ್ಕಿ ಶುಚಿಗೊಳಿಸಿದರು. ಸುಮಾರು 150 ಜನ ಸ್ವಯಂಸೇವಕರು ನಾಲ್ಕು ತಂಡಗಳಾಗಿ ವಿಂಗಡಿಸಿಕೊಂಡು ಸ್ವಚ್ಛತಾ ಕಾರ್ಯ ಮಾಡಿದರು. ಸರ್ಕೂಟ್ ಹೌಸ್ ಮುಂಭಾಗದ ವೃತ್ತವನ್ನು ಪ್ರಾಧ್ಯಾಪಕ ಶೇಷಪ್ಪ ಅಮೀನ್ ಸೇರಿದಂತೆ 30 ಜನ ಕಸ ತೆಗೆದು ಸ್ವಚ್ಛ ಮಾಡಿದರು. ಶ್ರೀ ಉದಯ ಕೆ ಪಿ ಹಾಗೂ ಕಮಲಾಕ್ಷ ಪೈ ಮಾರ್ಗದರ್ಶನದಲ್ಲಿ ಸಂತ ಅಲೋಶಿಯಸ್ ಸಹಾಯ ತಂಡದ ವಿದ್ಯಾರ್ಥಿಗಳು ಬಸ್ ಶೆಲ್ಟರ್ ಸುತ್ತಮುತ್ತ ಬೆಳೆದಿದ್ದ ಹುಲ್ಲು ಕತ್ತರಿಸಿ ಕಸ ಹೆಕ್ಕಿ ಸ್ವಚ್ಛ ಮಾಡಿದರು. ಶ್ರೀ ವಿವೇಕಾನಂದ ಶೆಣೈ ಹಾಗೂ ಯುವ ಕಾರ್ಯಕರ್ತರು ಬಸ್ ನಿಲ್ದಾಣದ ಮೇಲ್ಚಾವಣೆಯನ್ನು ನೀರಿನಿಂದ ತೊಳೆದು ಸುಂದರಗೊಳಿಸಿದರು. ಶ್ರೀ ಮಹ್ಮದ್ ಶಮೀಮ ಹಾಗೂ ಮಸಾ ಹೀರೊ ಸಹಿತ ಅನೇಕ ಹಿರಿಯರು ಮಾರ್ಗವಿಭಾಜಕಗಳಲ್ಲಿದ್ದ ತ್ಯಾಜ್ಯ ಹುಲ್ಲು ತೆಗೆದು ಗುಡಿಸಿದರು. ಶ್ರೀ ಎಂ ಆರ್ ವಾಸುದೇವ ಮಾರ್ಗದರ್ಶನದಲ್ಲಿ ಕದ್ರಿ ಪರಿಸರದ ಮನೆಮನೆಗೆ ತೆರಳಿ ಸಾರ್ವಜನಿಕರಿಗೆ ಸ್ವಚ್ಛತೆಯ ಕರಪತ್ರ ನೀಡಿ ಅರಿವು ಮೂಡಿಸಲು ಪ್ರಯತ್ನಿಸಲಾಯಿತು.
ವಿಶೇಷತೆ: ಶ್ರೀ ಜಗನ್ ಹಾಗೂ ಶ್ರೀ ಚಂದ್ರಶೇಖರ್ ಎನ್ನುವ ನಾಗರಿಕರು ತಮ್ಮ ವೈಕಲ್ಯತೆಗಳನ್ನು ಮರೆತು ಅಭಿಯಾನದಲ್ಲಿ ಭಾಗವಹಿಸಿ ಪರಿಸರವನ್ನು ಸ್ವಚ್ಛಗೊಳಿಸಿದರು. ಜಗನ್ ತಮ್ಮ ಮೂರುಚಕ್ರದ ವಾಹನದ ಮಧ್ಯೆ ಕಸ ಹೇರಿಕೊಂಡು ಸಾಗಿಸುವ ದೃಶ್ಯ ಅಸಾಮಾನ್ಯವಾಗಿತ್ತು. ಅಲ್ಲದೇ ಚಿಕ್ಕ ಮಗುವೊಂದು ತನ್ನ ಪುಟ್ಟಪುಟ್ಟ ಕೈಗಳಿಂದ ನಿರಂತರವಾಗಿ ಎರಡು ಗಂಟೆಗಳ ಕಾಲ ಕಸ ಹೆಕ್ಕುತ್ತಿದ್ದುದು ನೋಡುಗರನ್ನು ಸ್ಪೂರ್ತಿಗೊಳಿಸುತ್ತಿತ್ತು.
ಮುಂದುವರೆದ ಕಾರ್ಯ: ಹಿಂದಿನ ವಾರ ನಡೆದ ಅಭಿಯಾನದಲ್ಲಿ ಕರಂಗಲ್ಪಾಡಿ ಮಾರುಕಟ್ಟೆ ಬಳಿ ಬೀಳುತ್ತಿದ್ದ ತ್ಯಾಜ್ಯವನ್ನು ನಿಲ್ಲಿಸಲು ಹರಸಾಹಸ ಪಡಲಾಗಿತ್ತು. ಅಂಗಡಿ ಮುಂಗಟ್ಟುಗಳಿಗೆ ಹಾಗೂ ಮನೆ ಮನೆಗೆ ತೆರಳಿ ವಿನಂತಿಸಿದ ಪರಿಣಾಮ ಅಲ್ಲಿ ತ್ಯಾಜ್ಯ ಬೀಳುವುದು ನಿಂತಿತ್ತು. ಇದೀಗ ಆ ಜಾಗೆಯನ್ನು ಸುಂದರಗೊಳಿಸಬೇಕು ಎನ್ನುವ ದೃಷ್ಟಿಯಿಂದ ಇಂದು ಅಲ್ಲಿ ನುರಿತ ಕಾರ್ಮಿಕರ ಸಹಾಯದಿಂದ ಗೋಡೆಗೆ ಸಾರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಬರಹ ಹಾಗೂ ಹೂ ಗಿಡಗಳನ್ನು ನೆಟ್ಟು ಮತ್ತಷ್ಟು ಅಂದವಾಗಿಸಲು ಪ್ರಯತ್ನಿಸಲಾಗುತ್ತದೆ. ಅಲ್ಲಿಯೇ ಮತ್ತೊಂದೆಡೆ ಕರಂಗಲ್ಪಾಡಿಯ ಮುಖ್ಯರಸ್ತೆಯಲ್ಲಿ ಪ್ರಾಯೋಗಿಕವಾಗಿ ರೇಲಿಂಗನ್ನು ಅಳವಡಿಸಲಾಗಿತ್ತು. ಇಂದು ಅದಕ್ಕೆ ಮತ್ತೊಂದಿಷ್ಟು ರೇಲಿಂಗ್ ನ್ನು ಕಾರ್ಯಕರ್ತರು ಸೇರಿಸಿ, ವಿಸ್ತರಿಸಿ ಬಣ್ಣ ಬಳಿದರು. ಹಳೆಯ ಬ್ಯಾರಿಕೇÉಡ್ ತೆಗೆದು ರಸ್ತೆಯನ್ನು ಶುಚಿಗೊಳಿಸಿದರು. ಅಭಿಯಾನದ ಮುಖ್ಯ ಸಂಯೊಜಕ ಶ್ರೀ ದಿಲ್ ರಾಜ್ ಆಳ್ವ ಮಾರ್ಗದರ್ಶಿಸಿದರು.
ಶ್ರೀ ವಿಠಲ್ ದಾಸ್ ಪ್ರಭು, ಶ್ರೀ ಕಿಶೋರ್ ಕುಮಾರ್ ಪುತ್ತೂರು, ಶ್ರೀ ಸುಜಿತ್ ಪ್ರತಾಪ್, ಶ್ರೀ ಅಕ್ಷಿತ್ ಅತ್ತಾವರ್, ಸೌರಜ್ ಮಂಗಳೂರು, ಶ್ರೀ ಮೆಹಬೂಬ್ ಸಾಬ್ ಸೇರಿದಂತೆ ಅನೇಕರು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಎಲ್ಲ ಕಾರ್ಯಕರ್ತರಿಗೆ ಕದ್ರಿ ಪೆÇೀಲಿಸ್ ಠಾಣೆಯ ಆವರಣದಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮಗಳಿಗೆ ಎಂ ಆರ್‍ಪಿಎಲ್ ಪ್ರಾಯೋಜಕತ್ವ ನೀಡಿ ಪೆÇ್ರೀತ್ಸಾಹಿಸುತ್ತಿದೆ.