Home Mangalorean News Kannada News ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ 15ನೇ ಭಾನುವಾರದ ವರದಿ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ 15ನೇ ಭಾನುವಾರದ ವರದಿ

Spread the love

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ 15ನೇ ಭಾನುವಾರದ ವರದಿ

ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 4ನೇ ಹಂತದ 15ನೇ ವಾರದ ಸ್ವಚ್ಛತಾ ಅಭಿಯಾನವನ್ನು ದಿನಾಂಕ 11-2-2018 ಭಾನುವಾರ, ಫಳ್ನಿರ್‍ನಲ್ಲಿ ಕೈಗೊಳ್ಳಲಾಯಿತು. ಸ್ವಾಮಿ ಜಿತಕಾಮಾನಂದಜಿ ಮಹರಾಜ್ ಹಾಗೂ ಸ್ವಾಮಿ ಸರ್ವಸ್ಥಾನಂದಜಿ ಮಹರಾಜ್ ಸಮ್ಮುಖದಲ್ಲಿ ಬೆಳಿಗ್ಗೆ 7:30 ಕ್ಕೆ ಎವ್ರಿ ಜಂಕ್ಷನ್‍ನಲ್ಲಿ  ರಘೋತ್ತಮ್ ರಾವ್, ಮುಖ್ಯಸ್ಥರು ಮನಸ್ ತರಬೇತಿ ಸಂಸ್ಥೆ ಹಾಗೂ ಡಾ. ನಂದಿತಾ ಶೆಣೈ ಕಾರ್ಯಕ್ರಮಕ್ಕೆ ಜಂಟಿಯಾಗಿ ಚಾಲನೆ ನೀಡಿದರು. ಸ್ವಾಮಿಜಿದ್ವಯರು ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಶುಭಹಾರೈಸಿದರು.

ಅಭಿಯಾನದ ಮಾರ್ಗದರ್ಶಿ ಕ್ಯಾ. ಗಣೇಶ್ ಕಾರ್ಣಿಕ್ ಕಾರ್ಯಕರ್ತರನ್ನು ಸ್ವಾಗತಿಸಿದರು. ಮಹ್ಮದ್ ಶಮೀಮ್, ಮಸಾ ಹಿರೋ, ಡಾ. ರಾಜೇಂದ್ರ ಪ್ರಸಾದ ಮತಿತ್ತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶ್ರಮದಾನ: ಸುಮಾರು ನಾನ್ನೂರು ಜನ ಕಾರ್ಯಕತರನ್ನು ಎಂಟು ತಂಡಗಳಾಗಿ ವಿಂಗಡಿಸಲಾಯಿತು. 1)ಮಂಗಳೂರು ಲೇಡಿಸ್ ಬ್ಯೂಟಿ ಅಸೋಶಿಯೆಶನ್ ಸದಸ್ಯೆಯರು ಬಬಿತಾ ಶೆಟ್ಟಿ ಹಾಗೂ ಮೀನಾ ಡಿಸೋಜಾ ಮುಂದಾಳತ್ವದಲ್ಲಿ ಎವ್ರಿ ಜಂಕ್ಷನ್‍ನಿಂದ ಮಿಲಾಗ್ರಿಸ್ ಸಾಗುವ ಎಡಬದಿಯ ರಸ್ತೆ, ತೋಡುಗಳನ್ನು ಶುಚಿಗೊಳಿಸಿದರು.2) ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಶ್ರೀಲತಾ ಉಳ್ಳಾಲ, ಅಂಕಿತಕುಮಾರ್ ಜೊತೆ ಸೇರಿಕೊಂಡು ಜ್ಯೋತಿಯತ್ತ ಸಾಗುವ ಡಾ. ಎ ಎಸ್ ಕೊಯಿಲೊ ರಸ್ತೆಯನ್ನು ಗುಡಿಸಿ ಸ್ವಚ್ಛಗೊಳಿಸಿದರು.3) ಸಂತ ಅಲೋಶಿಯಸ್ ಕಾಲೇಜಿನ ಎನ್ನೆಸ್ಸೆಸ್ ಸ್ವಯಂಸೇವಕರು ಸಂಯೋಜಕಿ ಪ್ರೇಮಲತಾ ಹಾಗೂ ಅರ್ಜುನ ಪ್ರಕಾಶ ಮಾರ್ಗದರ್ಶದಲ್ಲಿ ಡಾನ್ ಬಾಸ್ಕೊ ರೋಡ್‍ನಲ್ಲಿ ಸ್ವಚ್ಛತೆ ನಡೆಸಿದ್ದಲ್ಲದೇ ರಸ್ತೆಯ ಬದಿಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕತ್ತರಿಸಿ ಶುಚಿಮಾಡಿದರು. 4) ಯಕ್ಕೂರಿನ ನಾಗರಿಕರು ಮತ್ತು ಅಯ್ಯಪ್ಪ ಭಜನಾ ಮಂದಿರದ ಸದಸ್ಯರು ಎವ್ರಿ ಜಂಕ್ಷನ್‍ನಿಂದ ಅತ್ತಾವರ ಮಾರ್ಗದಲ್ಲಿ ಶ್ರಮದಾನಗೈದರು. ಪ್ರಶಾಂತ ಯಕ್ಕೂರು, ಜಯಪ್ರಕಾಶ ಯಕ್ಕೂರು ಸೇರಿದಂತೆ ಅನೇಕರು ಪಾಲ್ಗೊಂಡರು. 5) ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ಸಂಘದ ಸದಸ್ಯರು ಎವ್ರಿ ಜಂಕ್ಷನ್ ನಿಂದ ಮೀಲಾಗ್ರಿಸ್ ಸಾಗುವ ಬಲಬದಿಯ ಮಾರ್ಗ ಬದಿಯನ್ನು ಗುಡಿಸಿ, ಅನೇಕ ದಿನಗಳಿಂದ ಸಂಗ್ರಹವಾಗಿ ಬಿದ್ದುಕೊಂಡಿದ್ದ ಪ್ಲಾಸ್ಟಿಕ್ ರಾಶಿಯನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು. ಪ್ರಾಧ್ಯಾಪಕರಾದ ಸುಧಾ ಕುಮಾರಿ, ಆರತಿ ಶಾನುಭೋಗ್ ಭಾಗವಹಿಸಿದರು. 6) ರಥಬೀದಿ ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕ ಮೊಹಬೂಬ್ ಸಾಬ್ ಜೊತೆಗೂಡಿ ಹೈಲ್ಯಾಂಡ್‍ನತ್ತ ಸಾಗುವ ರಸ್ತೆಯಲ್ಲಿ ಶ್ರಮದಾನ ಮಾಡಿದರು. 7) ಸಂತ ಅಲೋಶಿಯಸ್ ಸಹಾಯ ತಂಡದ ಸದಸ್ಯರು ಫಳ್ನಿರ್ ಪ್ರದೇಶದ ಮನೆ ಮನೆಗಳಿಗೆ ತೆರಳಿ ಸ್ವಚ್ಛತೆಯ ಕುರಿತಂತೆ ಜನಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಕಸ ವಿಂಗಡಣೆ, ಕಸವನ್ನು ಕಡಿತಗೊಳಿಸುವಿಕೆ ಹಾಗೂ ಮಾರ್ಗ ಬದಿಗಳಲ್ಲಿ ಕಸ ಹಾಕದಂತೆ ವಿದ್ಯಾರ್ಥಿಗಳು ಮನವಿ ಮಾಡಿದರು. ಕಾಲೇಜಿನ ಉಪನ್ಯಾಸಕಿ ವಿದ್ಯಾಕುಮಾರಿ ಅಭಿಯಾನದಲ್ಲಿ ಪಾಲ್ಗೊಂಡರು.

ಮಾರ್ಗ ವಿಭಾಜಕ ಅಳವಡಿಕೆ: ಎವ್ರಿ ಜಂಕ್ಷನ್‍ನಲ್ಲಿ ಸ್ವಚ್ಛ ಮಂಗಳೂರು ಕಾರ್ಯಕರ್ತರು ಬ್ಯಾರಿಕೇಡ್‍ಗಳನ್ನು ತೆಗೆದು ಅದರಲ್ಲಿ ಸೇರಿಕೊಂಡಿದ್ದ ಮಣ್ಣು ತ್ಯಾಜ್ಯವನ್ನು ತೆಗೆದರು. ಸುಗಮ ಸಂಚಾರಕ್ಕಾಗಿ ಅಳವಡಿಸಲಾಗಿದ್ದ ಬ್ಯಾರಿಕೇಡ್‍ಗಳಲ್ಲಿ ಅಪಾರ ಪ್ರಮಾಣದ ಮಣ್ಣು-ಕಸ ಸೇರಿಕೊಳ್ಳುವುದು, ಆಗಾಗ ಅಸ್ತವ್ಯಸ್ತವಾಗುವುದು ಹಾಗೂ ಹೆಚ್ಚಿನ ಪ್ರಮಾಣದ ಸ್ಥಳವನ್ನು ಆಕ್ರಮಿಸಿಕೊಳ್ಳುವುದನ್ನು ತಪ್ಪಿಸಲು ಇಂದು ಅಲ್ಲಿ ಹಳೆಯ ಬ್ಯಾರಿಕೇಡ್ ತೆಗೆದು ರಿಫ್ಲೆಕ್ಟರ್ ಸಹಿತವಾದ ಕಬ್ಬಿಣದ ಕಂಬಗಳನ್ನು ಅಳವಡಿಸಲಾಯಿತು. ಸಂದೀಪ್ ಕೋಡಿಕಲ್, ಪ್ರಕಾಶ್ ಗರೋಡಿ, ವಿಜಯ ಶೆಟ್ಟಿ, ಪ್ರೀತಮ್ ಸೇರಿದಂತೆ ಅನೇಕ ಯುವ ಕಾರ್ಯಕರ್ತರು ಈ ಕಾರ್ಯದಲ್ಲಿ ಕೈಜೋಡಿಸಿದರು.

ತಂಗುದಾಣಕ್ಕೆ ಬಣ್ಣ: ಫಳ್ನೀರ್‍ನಲ್ಲಿರುವ ಬಸ್ ತಂಗುದಾಣ ಕಸ ತ್ಯಾಜ್ಯದಿಂದ ತುಂಬಿತ್ತು. ಪ್ರಯಾಣಿಕರು ಕುಳಿತುಕೊಳ್ಳಲು ಆಗದ ಪರಿಸ್ಥಿತಿಯಿತ್ತು. ಇಂದು ಆ ತಂಗುದಾಣವನ್ನು ಸ್ವಚ್ಛಗೊಳಿಸಿ ಸುಣ್ಣ ಬಣ್ಣ ಬಳಿದು ಸುಂದರಗೊಳಿಸಲಾಯಿತು. ಹಾಗೇ ಅದರ ಮುಂದೆ ಹಾಕಲಾಗಿದ್ದ ಮಣ್ಣು ಕಲ್ಲುಗಳ ಗುಡ್ಡೆಯನ್ನು ಜೆಸಿಬಿ ಬಳಸಿ ತೆಗೆಯಲಾಯಿತು. ಕೋಡಂಗೆ ಬಾಲಕೃಷ್ಣ ನಾಯ್ಕ್, ರಮ್ಯ ಪಿ ಡಿ, ಪ್ರಿಯಾ ವೈ ಎಸ್, ಗಿರೀಶ್ ಎನ್ ಜಿ, ಉಮರ್ ಫಾರೂಕ್ ಸೇರಿದಂತೆ ಸುಮಾರು ನಾನೂರಕ್ಕೂ ಅಧಿಕ ಜನ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು. ಸ್ವಚ್ಛತಾ ಅಭಿಯಾನದ ಬಳಿಕ ಕಾರ್ಯಕರ್ತರಿಗೆ ಮೋತಿ ಮಹಲ್ ಹೋಟೆಲ್‍ನಲ್ಲಿ ಉಪಾಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಸ್ವಚ್ಛತಾ ರಾಯಭಾರಿಗಳು: ಸುಮಾರು ನೂರು ಪ್ರೌಢಶಾಲೆಗಳಿಂದ ಹನ್ನೊಂದು ಸಾವಿರ ಸ್ವಚ್ಛತಾ ಸೇನಾನಿಗಳಲ್ಲಿನ ಕಲಿಕೆ ಹಾಗೂ ಆಸಕ್ತಿ ಗುರುತಿಸಿ, ಸುಮಾರು ಐನೂರು ವಿದ್ಯಾರ್ಥಿಗಳನ್ನು ಸ್ವಚ್ಛತಾ ರಾಯಭಾರಿಗಳೆಂದು ಗುರುತಿಸಲಾಗಿದೆ. ಅವರಿಗೆ ದಿನಾಂಕ 9-2-2018 ರಂದು ರಾಮಕೃಷ್ಣ ಮಠದಲ್ಲಿ ಪ್ರತಿಜ್ಞಾವಿಧಿ ಸಹಿತ ವಿಶೇಷ ತರಬೇತಿಯನ್ನು ನೀಡಲಾಗಿದೆ. ಇಂದು (11-2-2018) ಸುಮಾರು ಐವತ್ತು ಜನ ಸಂಪನ್ಮೂಲ ವ್ಯಕ್ತಿಗಳಿಗೆ ಸ್ವಚ್ಛತಾ ಮಂಥನ ಎಂಬ ಕೈಪಿಡಿಯ ಮೇಲೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಅಭಿಯಾನಗಳಿಗೆ ಎಂ ಆರ್‍ಪಿಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.


Spread the love

Exit mobile version