ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನಕ್ಕೆ ನೂರರ ಸಂಭ್ರಮ
ಮಂಗಳೂರು: ರಾಮಕೃಷ್ಣ ಮಿಷನ್ ಆಯೋಜಿಸಿದ ಸ್ವಚ್ಚ ಮಂಗಳೂರು ಅಭಿಯಾನ ಆರಂಭಿಸಿ ನೂರನೇ ದಿನಕ್ಕೆ ತಲುಪಿದ್ದು ಡಿಸೆಂಬರ್ 4 ರಂದು ನಡೆಸಿದ ಸ್ವಚ್ಚ ಅಭಿಯಾನದ ವರದಿ ಇಂತಿದೆ.
ಎ ಬಿ ಶೆಟ್ಟಿ ವೃತ್ತ : ಶ್ರೀರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಸಿಬ್ಬಂದಿಗಳು ಎ ಬಿ ಶೆಟ್ಟಿ ವೃತ್ತದ ಬಳಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದರು. ಕಂಪನಿಯ ಡಿಜಿಎಂ ಶ್ರೀ ಶರತಚಂದ್ರ ಹಾಗೂ ಶ್ರೀ ಸತ್ಯನಾರಾಯಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೃತ್ತದ ಪಕ್ಕದಲ್ಲಿರುವ ಕಿರು ಗಾರ್ಡನ್ ಬಹಳ ದಿನಗಳಿಂದ ನಿರ್ಲಕ್ಷಕ್ಕೆ ಒಳಗಾಗಿತ್ತು. ಅದನ್ನೆಲ್ಲ ಸರಿಮಾಡಿ ನೂತನವಾಗಿ ಸಸಿ ನೆಡಲಾಯಿತು. ಅಲ್ಲದೇ ಸಿಬ್ಬಂದಿಗಳು ಅತ್ತ್ಯುತ್ಸಾಹದಿಂದ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು.
ಜಿ ಎಚ್ ಎಸ್ ರಸ್ತೆ: ಗಣಪತಿ ಹೈಸ್ಕೂಲ್ ವಿದ್ಯಾರ್ಥಿಗಳಿಂದ ಮಹಮ್ಮಾಯ ದೇವಸ್ಥಾನದ ಸುತ್ತಮುತ್ತ ಸ್ವಚ್ಛತಾ ಅಭಿಯಾನ ಜರುಗಿತು. ಶ್ರೀ ಜಿ ಜಿ ಮೋಹನ ದಾಸ ಪ್ರಭು ಹಾಗೂ ಶ್ರೀಮತಿ ಶಾಲಿನಿ ಅಭಿಯಾನಕ್ಕೆ ಚಾಲನೆ ನೀಡಿದರು. ಮೊದಲಾಗಿ ಸುಮಾರು 150 ವಿದ್ಯಾರ್ಥಿಗಳನ್ನು ಎರಡು ತಂಡವಾಗಿ ವಿಂಗಡಿಸಲಾಯಿತು. ಮೊದಲ ತಂಡದಿಂದ ದೇವಸ್ಥಾನದ ಹತ್ತಿರ ಸ್ವಚ್ಛತೆಯನ್ನು ಮಾಡಿಸಲಾಯಿತು. ಎರಡನೇ ತಂಡ ಗಣಪತಿ ಹೈಸ್ಕೂಲ್ ಆವರಣ ಗೋಡೆಯನ್ನು ಸ್ವಚ್ಛ ಮಾಡಿ ಅಂದವಾಗಿ ಬಣ್ಣ ಬಳಿಯಿತು. ಸತತವಾಗಿ 5ನೇ ವಾರದ ಕಾರ್ಯಕ್ರಮವನ್ನು ಶ್ರೀ ಮಹೇಶ ಬೊಂಡಾಲ ಸಂಯೋಜಿಸಿದರು.
ಬೋಳಾರ: ನಿವೇದಿತಾ ಬಳಗದ ಸದಸ್ಯರಿಂದ ಬೋಳಾರದ ಲೀವೆಲ್ಲ ಬಸ್ತಂಗುದಾಣದ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಯಿತು. ಬಸ್ ತಂಗುದಾಣದಿಂದ ಬೋಳಾರ ಮುಖ್ಯರಸ್ತೆಯ ವರೆಗೆ ಸ್ವಚ್ಛತಾ ಕಾರ್ಯ ನಡೆಯಿತು. ಸಾಮಾಜಿಕ ಕಾರ್ಯಕರ್ತ ಶ್ರೀ ಸುರೇಶ್ ಶೆಟ್ಟಿ ಮಾರ್ಗದರ್ಶನದಲ್ಲಿ ಕಾರ್ಯಕರ್ತರು ರಸ್ತೆಯ ಬದಿಯಲ್ಲಿಯ ತೋಡುಗಳಲ್ಲಿದ್ದ ಅಪಾರ ಪ್ರಮಾಣದ ಕಸವನ್ನು ಹೊರತೆಗೆದರು. ಹಾಗೆಯೇ ರಸ್ತೆಯನ್ನು ಗುಡಿಸಿ ಸ್ವಚ್ಛ ಮಾಡಲಾಯಿತು. ಶ್ರೀಮತಿ ವಿಜಯಲಕ್ಷ್ಮಿ ನೇತೃತ್ವದಲ್ಲಿ ಯುವತಿಯರು ಅಂಗಡಿ ಮುಂಗಟ್ಟುಗಳಿಗೆ ತೆರಳಿ ಜಾಗೃತಿಯ ಕಾರ್ಯ ಮಾಡಿದರು.
ಕೊಂಚಾಡಿ : ಕೊಂಚಾಡಿ ಫ್ರೆಂಡ್ಸ್ ಸರ್ಕಲ್ ತಂಡದಿಂದ ಮಾಲೆಮಾರ್ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ಜರುಗಿತು. ಶ್ರೀ ರತ್ನಾಕರ ಶೆಟ್ಟಿಗಾರ ಹಾಗೂ ಜಗದೀಶ್ ಶೆಟ್ಟಿ ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕರ್ತರು ಶ್ರೀ ಯೋಗಿಶ್ ಮಾರ್ಗದರ್ಶನದಲ್ಲಿ ಮಾಲೆಮಾರ್ ರಸ್ತೆಯಲ್ಲಿ ಇಕ್ಕೆಲಗಳನ್ನು ಶುಚಿಗೊಳಿಸಿದರು. ಸಾರ್ವಜನಿಕ ನೀರಿನ ನಲ್ಲಿಯಲ್ಲಿಯ ನೀರು ಅಲ್ಲಲ್ಲಿ ಹರಿದು ಕೊಚ್ಚೆಯಾಗುತ್ತಿತ್ತು.
ಇಂದು ಅದನ್ನು ಶ್ರೀ ಬಾಲಕೃಷ್ಣ ಹಾಗೂ ಶ್ರೀ ಸುಧೀರ್ ಮುತುವರ್ಜಿಯಿಂದ ಸ್ವಚ್ಛಗೊಳಿಸಿ ನುರಿತ ಕಾರ್ಮಿಕರಿಂದ ಕಟ್ಟೆಕಟ್ಟಿಸಿ, ಹೆಚ್ಚುವರಿ ನೀರು ಹರಿದು ಹೋಗಲು ಪೈಪನ್ನು ರಸ್ತೆಗೆ ಅಳವಡಿಸಲಾಯಿತು. ಇದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಪ್ರಾಧ್ಯಾಪಕ ಶ್ರೀ ಶಂಕರನಾರಾಯಣ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಬಿಜೈ: ಮಂಗಳೂರು ಹಿರಿಯ ನಾಗರಿಕರಿಂದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಹಿರಿಯರಾದ ಶ್ರೀ ಕೇಶವ ರಾವ್ ಹಾಗೂ ದಾಮೋದರ್ ಹೆಗ್ಡೆ ಈ ವಾರದ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಮೊದಲಾಗಿ ಪುಟ್ಫಾತ್ ಮೇಲಿದ್ದ ಕಲ್ಲು ಮಣ್ಣಿನ ರಾಶಿಯನ್ನು ತೆರವುಗೊಳಿಸಿ ಸ್ವಚ್ಛ ಮಾಡಲಾಯಿತು, ನಂತರ ಬಿಜೈ ಕಾಪಿಕಾಡ್ ರಸ್ತೆ ಹಾಗೂ ವಿಭಾಜಕಗಳಲ್ಲಿದ್ದ ತ್ಯಾಜ್ಯವನ್ನು ತೆಗೆಯಲಾಯಿತು. ರಸ್ತೆ ಬದಿ ವ್ಯಾಪಾರಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಯಿತು. ಶ್ರೀ ಸಿ ವಿ ಕಾಮತ್ ಹಾಗೂ ಶ್ರೀ ಡೊನಾಲ್ಡ್ ಸೇರಿದಂತೆ ಅನೇಕ ಜನ ಹಿರಿಯರು ಶ್ರಮದಾನಗೈದರು.
ರಥಬೀದಿ: ಶ್ರೀಗೋಕರ್ಣ ಮಠದ ಭಕ್ತರು ಹಾಗೂ ರಥಬೀದಿ ನಾಗರಿಕರಿಂದ ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಪೂರ್ವ ಶಾಸಕ ಶ್ರೀಯೋಗಿಶ್ ಭಟ್ ಹಾಗೂ ಮನಪಾ ಸದಸ್ಯೆ ಶ್ರೀಮತಿ ಪೂರ್ಣಿಮಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ಶ್ರೀ ನರೇಶ್ ಕಿಣಿ ಮುದಾಳತ್ವದಲ್ಲಿ ಸ್ವಯಂಸೇವಕರು ಹೂವಿನ ಮಾರುಕಟ್ಟೆಯಿಂದ ಶ್ರೀ ರಾಘವೇಂದ್ರ ಸ್ವಾಮಿ ಮಠದ ದ್ವಾರದವರೆಗೆ ಶುಚಿತ್ವದ ಕಾರ್ಯ ನಡೆಸಿದರು. ಗೋಡೆಗಳಿಗೆ ಅಂಟಿಸಿದ್ದ ಪೋಸ್ಟರಗಳನ್ನು ತೆಗೆದು ಸ್ವಚ್ಚಗೊಳಿಸಲಾಯಿತು. ಶ್ರೀ ಬಸ್ತಿ ಪುರುಷೋತ್ತಮ ಶೆಣೈ, ರಮೇಶ್ ಹೆಗ್ಡೆ, ಶ್ರೀಮತಿ ಚಂದ್ರಿಕಾ ಬಾಳಿಗಾ ಮತ್ತಿತರರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಮುಳಿಹಿತ್ಲು: ಶ್ರೀಅಂಬಾಮಹೇಶ್ವರೀ ಭಜನಾ ಮಂಡಳಿಯ ಸದಸ್ಯರಿಂದ ಮುಳಿಹಿತ್ಲುವಿನಿಂದ ಅಂಬಾನಗರಕ್ಕೆ ಹೋಗುವ ರಸ್ತೆಯಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಶ್ರೀ ಕಮಲಾಕ್ಷ ಬೋಳಾರ್ ಮತ್ತು ಬ್ರ. ನಿಶ್ಚಯ ಕಾರ್ಯಕ್ರಮವನ್ನು ಆರಂಭಗೊಳಿಸಿದರು. ಕಳೆದವಾರ ತ್ಯಾಜ ಬೀಳುವ ಜಾಗೆಯಲ್ಲಿ ಪುಟ್ಟ ಗಾರ್ಡನ್ ನಿರ್ಮಿಸಲಾಗಿತ್ತು ಅದರ ಯಶಸ್ಸಿಗಾಗಿ ಶ್ರೀಮತಿ ಹೇಮಲತಾ ಹಾಗೂ ಜಯಂತಿ ಮಾರ್ಗದರ್ಶನದಲ್ಲಿ ಮನೆ ಮನೆಗೆ ತೆರಳಿ ಅಲ್ಲಿ ಕಸ ಹಾಕದಂತೆ ಜಾಗೃತಿ ಕಾರ್ಯ ಮಾಡಲಾಯಿತು. ಶ್ರೀ ರಮೇಶ್ ಕೊಟ್ಟಾರಿ ನೇತೃತ್ವದಲ್ಲಿ ಅನೇಕರು ಅಂಬಾನಗರದ ಮಾರ್ಗಗಳನ್ನು ಸ್ವಚ್ಛ ಮಾಡಲಾಯಿತು. ಶ್ರೀ ಕೂಸಪ್ಪ ಸರ್ವ ವ್ಯವಸ್ಥೆ ನೋಡಿಕೊಂದರು.
ಮಂಗಲಾದೇವಿ: ಶ್ರೀಭಗಿನಿ ಸಮಾಜದ ವಿದ್ಯಾರ್ಥಿಗಳಿಂದ ಮಂಗಳಾದೇವಿ ಕ್ರಾಸ್ ನಿಂದ ಜೆಪ್ಪು ಮಾರ್ಕೆಟ್ ರಸ್ತೆಯ ವರೆಗೂ ಸ್ವಚ್ಛತೆ ನಡೆಯಿತು. ಕಾರ್ಯಕರ್ತರು ಸ್ವಚ್ಛತೆಯೊಂದಿಗೆ ಮನೆ ಮನೆಗೆ ತೆರಳಿ ಜಾಗೃತಿಯ ಕಾರ್ಯ ಮಾಡಿದರು. ಅಲ್ಲಲ್ಲಿ ರಸ್ತೆಯ ಬದಿಯಲ್ಲಿ ತ್ಯಾಜ್ಯ ಹಾಕದಂತೆ ವಿನಂತಿಸಲಾಯಿತು. ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಡಾ. ಗುರುಕಿರಣ ಹಾಗೂ ಶ್ರೀಮತಿ ಜ್ಯೋತಿಕಿರಣ ಹಸಿರು ನಿಶಾನೆ ತೋರಿದರು. ಶ್ರೀಮತಿ ರತ್ನಾ ಆಳ್ವ ಅಭಿಯಾನವನ್ನು ಸಂಯೋಜಿಸಿದರು.
ಮಹಾತ್ಮಾ ಗಾಂಧಿ ರಸ್ತೆ: ಎಲ್ ಐ ಸಿ ಸಿಬ್ಬಂದಿ ಹಾಗೂ ಏಜೆಂಟರ್ ಅಸೋಸಿಯೇಶನ್ ವತಿಯಿಂದ ಜೈಲ್ ರಸ್ತೆಯಲ್ಲಿ ಸ್ವಚ್ಛತೆಯ ಕೈಂಕರ್ಯ ನಡೆಯಿತು. ಶ್ರೀ ಪುರುಷೋತ್ತಮ್ ಭಂಡಾರಿ ಹಾಗೂ ಶ್ರೀ ನಂದಕುಮಾರ್ ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಕೊಡಿಯಾಲ್ ಬೈಲ್ ನಲ್ಲಿರುವ ಎಲ್ ಐ ಸಿ ವಠಾರ ಹಾಗೂ ರಸ್ತೆಯ ಬದಿಗಳನ್ನು ಗುಡಿಸಿ ಶುಚಿಮಾಡಲಾಯಿತು. ಶ್ರೀ ಸ್ಟಾನಿ ಡಿಸೋಜಾ, ಶ್ರೀಗೋವಿಂದರಾಜು ನಾಯಕ್ ಮತ್ತಿತರರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು.
ಬಜಾಲ್ : ಆರ್ಟ್ ಆಫ್ ಲೀವಿಂಗ್ ಸದಸ್ಯರು ಕಾವುಬೈಲ್ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸುತ್ತಮುತ್ತ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಗಿತ್ತು. ಶ್ರೀ ಭಾಸ್ಕರ್ ಚಂದ್ರ ಶೆಟ್ಟಿ ಹಾಗೂ ಶ್ರೀಮತಿ ಪಾರ್ವತಮ್ಮ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು. ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಯಕ್ಕೂರು ಸದಸ್ಯರು ಉತ್ಸಾಹದಿಂದ ಭಾಗವಹಿಸಿದ್ದರು. ಸ್ವಚ್ಛತೆಯೊಂದಿಗೆ ಸೌಂದರ್ಯೀಕರಣಕ್ಕೆ ಒತ್ತುಕೊಡಲಾಯಿತು. ಶ್ರೀ ಭರತ್ ಶೆಟ್ಟಿ, ಯತಿಶ್ ಕುಮಾರ, ಕಿರಣ ರೈ ಮುಂತಾದವರು ಭಾಗವಹಿಸಿದರು.
ಊರ್ವ ಮಾರ್ಕೆಟ್: ಎಂಸಿಎಫ್ ಸಿಬ್ಬಂದಿಯಿಂದ ಉರ್ವ್ ಮಾರಿಗುಡಿ ದೇವಸ್ಥಾನದ ಮುಂಭಾಗದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಡಾ. ಬಿ ಜಿ ಸುವರ್ಣ ಹಾಗೂ ಮನಪಾ ಸದಸ್ಯ ಶ್ರೀ ರಾಧಾಕೃಷ್ಣ ಹಸಿರು ನಿಶಾನೆ ತೋರಿದರು. ಪಂಚಮುಖಿ ಬಳಗದ ಸದಸ್ಯರಿಂದ ಮಾರಿಗುಡಿಯಿಂದ ಊರ್ವ ಮಾರ್ಕೆಟ್ ವರೆಗೂ ರಸ್ತೆಗಳನ್ನು ಶುಚಿಗೊಳಿಸಲಾಯಿತು. ಕಾರ್ಯಕರ್ತರು ಹುಲ್ಲು ಕತ್ತರಿಸುವ ಯಂತ್ರ ಬಳಸಿ ಆಟದ ಮೈದಾನದಲ್ಲಿ ಬೆಳೆದಿದ್ದ ಹುಲ್ಲು ಕತ್ತರಿಸಿ ಸ್ವಚ್ಛಗೊಳಿಸಿದರು. ಶ್ರೀಮತಿ ಅಮಿತಕಲಾ, ಎಂಸಿಎಫ್ ನಿರ್ದೇಶಕ ಶ್ರೀ ಪ್ರಭಾಕರ ರಾವ್, ಶ್ರೀ ಜಯರಾಂ ಕಾರಂದೂರ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಈ ಬಾರಿ ಒಟ್ಟು 11 ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗಿತ್ತು. ಕಾರ್ಯಕ್ರಮದ ನಂತರ ಎಲ್ಲ ಕಾರ್ಯಕರ್ತರಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು ಈ ಕಾರ್ಯಕ್ರಮಗಳಿಗೆ ನಿಟ್ಟೆ ವಿದ್ಯಾಸಂಸ್ಥೆ ಹಾಗೂ ಎಂಆರ್ಪಿಎಲ್ ಪ್ರಾಯೋಜಕತ್ವ ನೀಡಿವೆ.