Home Mangalorean News Kannada News ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 32 ನೇ ವಾರದ ಕಾರ್ಯಕ್ರಮ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 32 ನೇ ವಾರದ ಕಾರ್ಯಕ್ರಮ

Spread the love

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 32 ನೇ ವಾರದ ಕಾರ್ಯಕ್ರಮ

ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 32 ನೇ ವಾರದಲ್ಲಿ ಜರುಗಿದ 10 ಸ್ವಚ್ಛತಾ ಕಾರ್ಯಕ್ರಮಗಳ ವರದಿ

372) ಬೆಂದೂರವೆಲ್: ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಬೆಂದೂರವೆಲ್ ಪರಿಸರದಲ್ಲಿ ಜರುಗಿದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ಗದಗಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದಜಿ ಹಾಗೂ ಬೆಂಗಳೂರಿನ ಸ್ವಾಮಿ ಯೋಗೇಶ್ವರಾನಂದಜಿ ಜಂಟಿಯಾಗಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಭಿಯಾನದ ಔಚಿತ್ಯದ ಕುರಿತು ಮಾತನಾಡಿ, ಆಗಮಿಸಿದ್ದ ಯತಿಗಳನ್ನು ಸ್ವಾಗತಿಸಿದರು. ರಾಮಕೃಷ್ಣ ವಿವೇಕಾನಂದ ಆಶ್ರಮದ ಯತಿಗಳಾದ ಸ್ವಾಮಿ ಪ್ರಕಾಶಾನಂದಜಿ, ಸ್ವಾಮಿ ಅಭಯಾನಂದಜಿ, ಸ್ವಾಮಿ ಬ್ರಹ್ಮನಿಷ್ಠಾನಂದಜಿ, ಸ್ವಾಮಿ ಗುರುಚರಣಾನಂದಜಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು. ಕಂಕನಾಡಿ ರಸ್ತೆ, ಕಂಕನಾಡಿ ಮಾರ್ಕೆಟ್, ಅಪ್ಪರ ಬೆಂದೂರವೆಲ್ ರಸ್ತೆಗಳ ಇಕ್ಕೆಲಗಳನ್ನು ಗುಡಿಸಿ ಸ್ವಚ್ಛಗೊಳಿಸಲಾಯಿತು. ಸುಮಾರು ಎರಡು ಗಂಟೆಗಳ ಕಾಲ ನಡೆದ ಅಭಿಯಾನವನ್ನು ನಿತೀಶಾ ರೊಡ್ರಿಗಸ್, ಸಚಿನ್ ಶೆಟ್ಟಿ, ಸಂಧ್ಯಾಶ್ರೀ ಹಾಗೂ ನವೀನ್ ಪೀಲಾರ್ ಮಾರ್ಗದರ್ಶಿಸಿದರು. ಶ್ರೀಮತಿ ಲತಾ ಉಳ್ಳಾಲ ಅಭಿಯಾನವನ್ನು ಸಂಘಟಿಸಿದರು.

373) ಕೊಡಿಯಾಲ್ ಬೈಲ್: ಪ್ರೇರಣಾ ತಂಡದ ಕಾರ್ಯಕರ್ತರಿಂದ ಕೊಡಿಯಾಲ್ ಬೈಲ್ ನಲ್ಲಿ ಸ್ವಚ್ಛತಾ ಅಭಿಯಾನ ಜರುಗಿತು. ಶ್ರೀಮತಿ ಜಯಶ್ರೀ ಅರವಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಿ.ವಿ.ಎಸ್ ವೃತ್ತದಿಂದ ರಾಧಾ ಮೆಡಿಕಲ್ಸ್ ವರೆಗಿನ ರಸ್ತೆಯನ್ನು ಸ್ವಚ್ಛಗೊಳಿಸಲಾಯಿತು. ಮಾರ್ಗ ಬದಿಯಲ್ಲಿ ಬಿದ್ದಿದ್ದ ತ್ಯಾಜ್ಯವನ್ನು ತೆರವುಗೊಳಿಸಿ, ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲ್, ಪೇಪರ್ ಹೆಕ್ಕಿ ಶುಚಿಗೊಳಿಸಲಾಯಿತು. ಶ್ರೀ ವೆಂಕಟ್ ರೆಡ್ಡಿ, ಶ್ರೀ ಗಿರೀಶ ರಾವ್, ಶ್ರೀ ರಾಮಚಂದ್ರ ರಾವ್, ಶ್ರೀಧರ್ ಪಾಟೀಲ್ ಸೇರಿದಂತೆ ಅನೇಕರು ಸ್ವಚ್ಛತಾ ಅಭಿಯಾನದಲ್ಲಿ ಶ್ರಮದಾನಗೈದರು. ಶ್ರೀಸದಾನಂದ ಉಪಾಧ್ಯಾಯ ಕಾರ್ಯಕ್ರಮವನ್ನು ಸಂಯೋಜಿಸಿದರು.

374) ಬೊಂದೆಲ್ : ಸ್ವಚ್ಛ ಕಾವೂರು ತಂಡದ ಮುತುವರ್ಜಿಯಲ್ಲಿ ಬೊಂದೇಲ್ ಕೆ ಎಚ್ ಬಿ ಯಿಂದ ಕೆಐಒಸಿಎಲ್ ವರೆಗಿನ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಶ್ರೀರಾಮ್ ಅಮೀನ್ ಹಾಗೂ ಶ್ರೀಮತಿ ಸಂಗೀತಾ ಪವಾರ್ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಮೊದಲಿಗೆ ರಸ್ತೆಯ ಬದಿಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೆಕ್ಕಲಾಯಿತು ನಂತರ ಅನೇಕ ದಿನಗಳಿಂದ ಬಿದ್ದುಕೊಂಡಿದ್ದ ತ್ಯಾಜ್ಯವನ್ನು ಜೆಸಿಬಿ ಬಳಸಿಕೊಂಡು ತೆರವುಗೊಳಿಸಲಾಯಿತು. ಜೊತೆಗೆ ಅಲ್ಲಲಿ ನೇತಾಡುತ್ತಿದ್ದ ಬ್ಯಾನರ್ ಗಳನ್ನು ತೆಗೆಯಲಾಯಿತು. ಶ್ರೀ ಕೆ ಎನ್ ಶೆಟ್ಟಿ, ಶ್ರೀ ಸದಾನಂದ ರೈ, ಶ್ರೀ ಗಣೇಶ್ ಶೆಟ್ಟಿ ಸ್ವಚ್ಛತಾ ಕಾರ್ಯದ ಮೂಂಚೂಣಿಯಲ್ಲಿದ್ದರು. ಬೆಸೆಂಟ್ ಎಂ.ಬಿ.ಎ ಕಾಲೇಜಿನ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಭಾಗವಹಿಸಿದರು. ಶ್ರೀಸುಧಾಕರ್ ಕಾವೂರು ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು.

375) ಹೊಗೆ ಬಜಾರ್: ನಿವೇದಿತಾ ಬಳಗದ ಕಾರ್ಯಕರ್ತೆಯರಿಂದ ಹೊೈಗೆ ಬಜಾರ್‍ನಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀಮತಿ ಲೇಖಾ ಹಾಗೂ ಶ್ರೀಮತಿ ನೀತಾ ರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀಮತಿ ವಿಜಯಲಕ್ಷ್ಮೀ ಮಾರ್ಗದರ್ಶನದಲ್ಲಿ ಸರಕಾರಿ ಪ್ರಾರ್ಥಮಿಕ ಶಾಲಾ ಆವರಣವನ್ನು ಶುಚಿಗೊಳಿಸಲಾಯಿತು. ಸುಮಾರು ಎರಡು ಟಿಪ್ಪರಗಳಷ್ಟು ತ್ಯಾಜ್ಯವನ್ನು ತೆಗೆದು ಆವರಣವನ್ನು ಸ್ವಚ್ಛ ಮಾಡಲಾಯಿತು.

376) ಜೆಪ್ಪು: ಶ್ರೀ ಅಂಬಾಮಹೇಶ್ವರಿ ಭಜನಾ ಮಂದಿರದ ಸದಸ್ಯರಿಂದ ಜೆಪ್ಪು ಮಾರ್ಕೆಟ್ ಬಳಿ ಸ್ವಚ್ಛತಾ ಕಾರ್ಯ ಜರುಗಿತು. ಶ್ರೀ ರಮೇಶ ಕೊಟ್ಟಾರಿ ಹಾಗೂ ಮಾಲತಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ಮೊದಲಿಗೆ ಜೆಪ್ಪು ಮಾರ್ಕೆಟ್ ಬಳಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹೊಸದಾಗಿ ಬಸ್ ವೇಳಾಪಟ್ಟಿಯನ್ನು ಅಳವಡಿಸಲಾಯಿತು. ತದನಂತರ ಬಸ್ ತಂಗುದಾಣವನ್ನು ಶುಚಿಗೊಳಿಸಿ ಮಾರ್ಗದ ಬಳಿ ಬಿದ್ದಿದ್ದ ಕಸದ ತ್ಯಾಜ್ಯವನ್ನು ತೆಗೆಯಲಾಯಿತು. ಜಾಗೃತಿ ಕಾರ್ಯಕ್ರಮದ ಅಂಗವಾಗಿ ಅಂಗಡಿಮುಂಗಟ್ಟುಗಳಿಗೆ ತೆರಳಿ ಸ್ವಚ್ಛತೆಯ ಕುರಿತು ತಿಳುವಳಿಕೆ ನೀಡಲಾಯಿತು.

377) ಪದವಿನಂಗಡಿ: ಫ್ರೆಂಡ್ಸ್ ಫಾರ್ ಎವರ್ ಟೀಮಿನ ಸದಸ್ಯರಿಂದ ಪದವಿನಂಗಡಿ ಜಂಕ್ಷನ್ ನಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಅಡಿಷನಲ್ ಎಸ್ ಪಿ ಶ್ರೀ ವೇದಮೂರ್ತಿ ಹಾಗೂ ಶ್ರೀಮತಿ ಕಸ್ತೂರಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಪದವಿನಂಗಡಿ ಕಟ್ಟೆಯ ಸುತ್ತಮುತ್ತ ಹಾಗೂ ವಿಮಾನ ನಿಲ್ದಾಣಕ್ಕೆ ಸಾಗುವ ಮಾರ್ಗದ ಇಕ್ಕೆಲಗಳನ್ನು ಹಾಗೂ ಮಾರ್ಗವಿಭಾಜಕಗಳನ್ನು ಸ್ವಚ್ಛ ಮಾಡಲಾಯಿತು. ಟೆಕ್ನಿಪ್ ಲಿಮಿಟೆಡ್ ಸಿಬ್ಬಂದಿ ವಿಶೇಷ ಸಹಯೋಗ ನೀಡಿದರು. ಶ್ರೀ ನಿರ್ಮಲ್ ಕುಮಾರ್, ಶ್ರೀ ಚರಣ ಪ್ರಸಾದ ಆಡ್ಯಂತಾಯ, ಶ್ರೀ ಕಾರ್ಲೋ ಕೊರೆಟ್ಟೊ, ಶ್ರೀ ಪಿ ಎನ್ ರವಿಶಂಕರ್ ಮತ್ತಿತರರು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಶ್ರೀ ಶುಭೋಧಯ ಆಳ್ವ ಅಭಿಯಾನವನ್ನು ಮುನ್ನಡೆಸಿದರು.

378) ಹಂಪಣಕಟ್ಟೆ: ಶ್ರೀಕೃಷ್ಣ ಭವನ ಆಟೋ ಚಾಲಕರಿಂದ ಹಂಪಣಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಗಣಪತಿ ಹೈಸ್ಕೂಲ್ ರಸ್ತೆ ಹಾಗೂ ಕ್ಲಾಕ್ ಟವರ್‍ನತ್ತ ಸಾಗುವ ಮಾರ್ಗ ಹಾಗೂ ವಿಭಾಜಕಗಳನ್ನು ಶುಚಿಗೊಳಿಸಲಾಯಿತು. ಅನೇಕ ಜನ ಅಟೋ ಚಾಲಕರು ಶ್ರಮದಾನ ಮಾಡಿದರು. ಚಂದಯ್ಯ, ರಮೇಶ್, ಯೋಗಿಶ್ ಮತ್ತಿತರರು ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಶ್ರೀ ಗಣೇಶ್ ಬೋಳಾರ ಮತ್ತು ಶ್ರೀ ನವೀನ್ ಶೆಟ್ಟಿ ಸಂಯೋಜಿಸಿದರು

379) ಯಕ್ಕೂರು: ಸ್ವಚ್ಛ ಯಕ್ಕೂರ ತಂಡದ ಸದಸ್ಯರು ಹಾಗೂ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಸದಸ್ಯರು ಯಕ್ಕೂರಿನಲ್ಲಿ ಸ್ವಚ್ಛತಾ ಕಾರ್ಯ ಆಯೋಜಿಸಿದ್ದರು. ಶ್ರೀ ಭರತ ಶೆಟ್ಟಿ ಹಾಗೂ ಶ್ರೀ ಯಶೋಧರ ಚೌಟ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಯಕ್ಕೂರು ಟೋಕಿಲ್ ಪ್ರದೇಶವನ್ನು ಶುಚಿಗೊಳಿಸಲಾಯಿತು. ಶ್ರೀ ಶಶಿಧರ ಯಕ್ಕೂರು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

380) ಜ್ಯೋತಿ: ಟೀಮ್ ದೇಶಾಭಿಮಾನಿ ಸದಸ್ಯರಿಂದ ಸರಕಾರಿ ಮಹಿಳಾ ಕಾಲೇಜಿನ ಒಳಾವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಶ್ರೀಕರ್ ಪ್ರಭು ನೇತೃತ್ವದಲ್ಲಿ ಯುವಕರು ಕಾಲೇಜು ಆವರಣದಲ್ಲಿದ್ದ ತ್ಯಾಜ್ಯವನ್ನು ತೆಗೆದು ಶುಚಿಗೊಳಿಸಿದರು. ಅಲ್ಲದೇ ಕಂಪೌಂಡ್ ಸುತ್ತಮುತ್ತ ಬಿದ್ದಿದ್ದ ಕಸವನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು. ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಚಂದ್ರಶೇಖರ್ ಅಭಿಯಾನಕ್ಕೆ ಚಾಲನೆ ನೀಡಿದರು. ಶ್ರೀ ಅಶ್ವಿತ್ ಹಾಗೂ ಶ್ರೀ ನಾಗೇಶ್ ಶೆಣೈ ಅಭಿಯಾನವನ್ನು ಸಂಯೋಜಿಸಿದರು.

381) ಶೇಡಿಗುರಿ: ಮಂಗಳಾ ಎಂ ಸಿ ಎಫ್ ಕಾರ್ಯಕರ್ತರಿಂದ ಶೇಡಿಗುರಿಯಲ್ಲಿ ಸ್ವಚ್ಛತಾ ಅಭಿಯಾನ ಆಯೋಜಿಸಲ್ಪಟ್ಟಿತ್ತು. ಎಂ ಸಿ ಎಫ್ ನಿರ್ದೇಶಕ ಶ್ರೀ ಕೆ ಪ್ರಭಾಕರ್ ರಾವ್ ಹಾಗೂ ಶ್ರೀ ಪುಷ್ಪರಾಜ್ ಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಕಾರ್ಯಕರ್ತರು ಶೇಡಿಗುರಿಯಿಂದ ದಂಬೆಲ್ ವರೆಗಿನ ರಸ್ತೆ ಹಾಗೂ ತೋಡುಗಳನ್ನು ಶುಚಿಗೊಳಿಸಿದರು. ಹುಲ್ಲುಕತ್ತರಿಸುವ ಯಂತ್ರದ ಸಹಾಯದಿಂದ ಅಲ್ಲಲ್ಲಿ ಬೆಳೆದಿದ್ದ ಹುಲ್ಲು ಮತ್ತು ಕಸವನ್ನು ಕತ್ತರಿಸಿ ಶುಚಿ ಮಾಡಲಾಯಿತು. ದಂಬೆಲ್ ಫ್ರೆಂಡ್ಸ್ ಸರ್ಕಲ್ ಸದಸ್ಯರು ಸಹಯೋಗ ಒದಗಿಸಿದರು. ಶ್ರೀ ಜಯರಾಂ ಕಾರಂದೂರು, ಶ್ರೀ ಸುರೇಶ್ ಪಿ. ಸೇರಿದಂತೆ ಅನೇಕರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.


Spread the love

Exit mobile version