ರಾಮಸೇನೆ ಹೆಸರಿನಲ್ಲಿ ಗೂಂಡಾಗಿರಿ ಮಾಡುವ ಕೆಲಸ ಆಗುತ್ತಿದೆ : ದಿನೇಶ್ ಗುಂಡೂರಾವ್
ರಾಮನಗರ : ರಾಮಸೇನೆ ಹೆಸರಿನಲ್ಲಿ ಗೂಂಡಾಗಿರಿ ಮಾಡುವ ಕೆಲಸ ಆಗುತ್ತಿದೆ. ದೇವರ ಹೆಸರು ಹೇಳಿಕೊಂಡು ಶ್ರೀರಾಮನಿಗೆ ಕಳಂಕ ತರುವ ಕೆಲಸ ಮಾಡಬೇಡಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಸಾಜ್ ಸೆಂಟರ್ ಮೇಲೆ ರಾಮಸೇನೆ ಕಾರ್ಯಕರ್ತರು ದಾಳಿ ಮಾಡಿ ಪೀಠೋಪಕರಣ ಧ್ವಂಸ ಮಾಡಿದ ವಿಚಾರಕ್ಕೆ ಸಂಬಂದಿಸಿದಂತೆ ಗುರುವಾರ ರಾಮನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಯಾರಿಗೂ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರವಿಲ್ಲ. ರಾಮಸೇನೆ ಹೆಸರಲ್ಲಿ ಇಂತಹ ದಾಂಧಲೆ ಮಾಡುವುದು ಸರಿಯಲ್ಲ. ಏನಾದರೂ ಅಕ್ರಮ ನಡೆಯುತ್ತಿದ್ದರೆ ಪೊಲೀಸರ ಗಮನಕ್ಕೆ ತಂದು ದೂರು ನೀಡಬೇಕು. ಇವರೇ ನುಗ್ಗಿ ದಾಂಧಲೆ ಮಾಡಿ ಗೂಂಡಾಗಿರಿ ಮಾಡುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾನೂನು ಸುವ್ಯವಸ್ಥೆಯನ್ನು ಎಲ್ಲರೂ ಪಾಲಿಸಬೇಕು. ಇಂತವರ ಮೇಲೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ದೇವರ ಹೆಸರು ಇಟ್ಟುಕೊಂಡು ಇಂತಹ ಕೃತ್ಯ ಮಾಡೋದು ರಾಮನಿಗೆ ಅಗೌರವ. ಹಿಂದೂ ಸಂಘಟನೆಗಳು ಕೂಡ ಇದನ್ನು ಖಂಡಿಸಬೇಕು. ಅನೈತಿಕ ಪೊಲೀಸ್ ಗಿರಿ ಮಾಡಿ ಕಾನೂನು ಕೈಗೆತ್ತಿಕೊಂಡರೆ ಅಂತವರ ವಿರುದ್ಧ ಕ್ರಮವಹಿಸುತ್ತೇವೆ. ಈ ರೀತಿ ಮಾಡಿಕೊಂಡು ಹೋದರೆ ಮುಂದೆ ಮಂಗಳೂರಿನ ಅಭಿವೃದ್ಧಿಗೆ ಹಿನ್ನೆಡೆಯಾಗಲಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಕಾಂಗ್ರೆಸ್ ಸರಕಾರ ಬಂದ ಬಳಿಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಆಗುತ್ತಿದೆ. ಕೆಲವು ಸಂಘಟನೆಗಳು ಗಲಾಟೆ ಮಾಡಿ ಗೊಂದಲ ಸೃಷ್ಠಿಸುವ ಮೂಲಕ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.