ರಾಷ್ಟ್ರಮಟ್ಟದ ಅಂತರ್‍ಕಾಲೇಜು ಮಟ್ಟದ ಇಗ್ನೈಟ್ ಫೆಷ್ಟ್
ಮೂಡುಬಿದರೆ: ಭೌತಶಾಸ್ತ್ರವನ್ನ ಮೂಲೆ ಮೂಲೆಗೆ ಪಸರಿಸುವಂತೆ ಮಾಡುವುದು ಪ್ರತಿಯೊಬ್ಬ ಭೌತಶಾಸ್ತ್ರಜ್ಞನ ಕರ್ತವ್ಯ ಎಂದು ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಅನಂತ ಪದ್ಮನಾಭ ಭಟ್ ಅಭಿಪ್ರಾಯ ಪಟ್ಟರು.
ಆಳ್ವಾಸ್ ಕಾಲೇಜಿನ ಶಿವರಾಮ ಕಾರಂತ ವೇದಿಕೆಯಲ್ಲಿ ಭೌತಶಾಸ್ತ್ರ ವಿಭಾಗ ಆಯೋಜಿಸಿದ್ದ ರಾಷ್ಟ್ರಮಟ್ಟದ ಇಂಟರ್ಕಾಲೇಜಿಯೇಟ್ ಫೆಷ್ಟ್ ಇಗ್ನೈಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ಭೌತಶಾಸ್ತ್ರ ವಿದ್ಯಾರ್ಥಿಯು ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಪಡೆದುಕೊಂಡು, ಅದನ್ನು ಯುವಜನಾಂಗಕ್ಕೆ ತಲುಪುವುವಂತೆ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಕಾಲೇಜಿನ ಮಾನೇಜ್‍ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಪ್ರಸ್ತುತ ವಿದ್ಯಮಾನದಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬದಲು ಕೋರ್ಸ್‍ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಒಂದು ವಿಷಯದ ಕುರಿತು ಉತ್ಸಾಹ ಹೊಂದಿದಾಗ ಮಾತ್ರ ಅದರ ಮಹತ್ವ ತಿಳಿದು ಆ ವಿಷಯದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು. ನವನವೀನ ವಿಷಯಗಳಿಗೆ ಮತ್ತು ಸಂಶೋಧನೆಗಳಿಗೆ ಅದರದೇ ಆದ ಮಹತ್ವ ಇದೆ ಆದ್ದರಿಂದ ವಿದ್ಯಾರ್ಥಿಗಳು ಆ ವಿಷಯಗಳಿಗೆ ಹೆಚ್ಚಿನ ಗಮನ ಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಭೌತಶಾಸ್ತ್ರ ವಿಭಾಗದ ಸಂಯೋಜಕರಾದ ಡಾ. ಶಶಿಧರ್ ಭಟ್, ವಿದ್ಯಾರ್ಥಿ ಸಂಯೋಜಕ ಕ್ಷಮಿತ್ ಎಂ ಜೈನ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಗಗನ ಕೆ.ಎಚ್ ಕಾರ್ಯಕ್ರಮ ನಿರೂಪಿಸಿದರು.