ರಾಷ್ಟ್ರ ಧ್ವಜಕ್ಕೆ ಅವಮಾನ; ಚುನಾವಣಾಧಿಕಾರಿಗಳಿಂದ ಹಿಮ್ಮುಖ ಕಾರು ಚಾಲಕನ ವಿರುದ್ದ ಪ್ರಕರಣ ದಾಖಲು
ಉಡುಪಿ: ಹಿಮ್ಮುಖ ಕಾರು ಚಲಾಯಿಸುತ್ತಾ 29 ರಾಜ್ಯಗಳಲ್ಲಿ ಸಂಚರಿಸಿ ಕರ್ನಾಟಕದ ಮೂಲಕ ಗೋವಾಕ್ಕೆ ಹೊರಟ ಮಹಾರಾಷ್ಟ್ರ ಪುಣೆ ಮೂಲದ ಎಂಜಿನಿಯರ್ ಸಂತೋಷ್ ರಾಜಶಿರ್ಕೆ ವಿರುದ್ದ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿಸಿದ ಆರೋಪದಲ್ಲಿ ಚುನಾವಣಾ ಅಧಿಕಾರಿಗಳು ಉಡುಪಿ ಜಿಲ್ಲೆಯ ಸಾಸ್ತಾನದಲ್ಲಿ ಶನಿವಾರ ಕೇಸು ದಾಖಲಿಸಿಕೊಂಡಿದ್ದಾರೆ.
ರಾಷ್ಟ್ರಭಕ್ತಿ ಜಾಗೃತಿಗಾಗಿ ಸಂತೋಷ ರಾಜಶಿರ್ಕೆ ತನ್ನ ಸ್ವಿಫ್ಟ್ ಕಾರಿಗೆ ದೇಶ ಕಾಯುವ ಸೈನಿಕರ ಹಾಗೂ ದೇಶ ನಾಯಕರ ಭಾವಚಿತ್ರ ಜತೆಗೆ 10 ಅಡಿ ಉದ್ದದ ರಾಷ್ಟ್ರಧ್ವಜ, ಕೇಸರಿ ಧ್ವಜ ಅಳವಡಿಸಿಕೊಂಡು ಮಹಾರಾಷ್ಟ್ರದ ಪುಣೆಯಿಂದ ಜನವರಿ 10ರಿಂದ ಕಾರಿನಲ್ಲಿ ಹಿಮ್ಮುಖವಾಗಿ ಸಂಚರಿಸುತ್ತಾ 20 ರಾಜ್ಯಗಳಲ್ಲಿ 17 ಸಾವಿರ ಕಿಮಿ ಕ್ರಮಿಸಿ ಕೊನೆಯದಾಗಿ ಗೋವಾ ರಾಜ್ಯಕ್ಕೆ ಪ್ರಯಾಣ ಬೆಳಿಸಿದ್ದರು.
ಉಡುಪಿಯಿಂದ ಕುಂದಾಪುರ ಕಡೆಗೆ ಆಗಮಿಸಿದ ಕಾರನ್ನು ಬ್ರಹ್ಮಾವರದ ಸಾಸ್ತಾನ ಬಳಿ ಚುನಾವಣೆ ಚೆಕ್ ಪೋಸ್ಟಿನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ತಡೆದು ಕಾರಿನ ಮೇಲಿರುವ ಕೇಸರಿಧ್ವಜ ಚುನಾವಣೆ ನೀತಿ ಸಂಹಿತೆಯ ವ್ಯಾಪ್ತಿಗೆ ಬರುತ್ತಿದ್ದು ಅದನ್ನು ತೆಗೆಯಬೆಕು ಜತೆಗೆ ರಾಷ್ಟ್ರಧ್ವಜವನ್ನು ಕಾರಿನ ಮೇಲೆ ಹಾರಿಸುವಂತಿಲ್ಲ ಕೂಡಲೇ ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆದರೂ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪದ ಹಿನ್ನಲೆಯಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.