ರಾಷ್ಟ್ರ ಪ್ರಶಸ್ತಿ ಪಡೆದ ಸುರಿಬೈಲು ಶಾಲೆಗೆ ಎಸ್ ಐ ಓ ದಿಂದ ಅಭಿನಂದನೆ
ಬಂಟ್ವಾಳ: ಸುಮಾರು ಒಂದೂವರೆ ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಅಡಕೆ ತೋಟ ಸಹಿತ ವಿವಿಧ ತರಕಾರಿ ಬೆಳೆಯೊಂದಿಗೆ ಕೃಷಿ ಚಟುವಟಿಕೆ ನಡೆಸಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದ ಬಂಟ್ವಾಳ ತಾಲೂಕಿನ ಸುರಿಬೈಲು ಸರಕಾರಿ ಉನ್ನತೀಕರಿಸಿದ ಶಾಲೆಯು ಇತ್ತೀಚೆಗೆ ರಾಷ್ಟಮಟ್ಟದ ಸ್ವಚ್ಛ ವಿದ್ಯಾಲಯ(ಎಸ್ ವಿ ಪಿ) ಪ್ರಶಸ್ತಿ ಪಡೆದುಕೊಂಡ ಹಿನ್ನೆಲೆಯಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್ ಐ ಓ) ಪಾಣೆಮಂಗಳೂರು ಶಾಖೆಯ ವತಿಯಿಂದ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಎಸ್ ಡಿ ಎಂ ಸಿಯನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಐ ಓ ಜಿಲ್ಲಾ ಕಾರ್ಯದರ್ಶಿ ಇರ್ಷಾದ್ ವೇಣೂರ್, ಸರಕಾರಿ ಶಾಲೆ ಎಂದು ಕೀಳುಮಟ್ಟದ ಮನೋಭಾವನೆಯಿಂದ ನೋಡುವಂತಹ ಇಂದಿನ ಸಮಾಜದಲ್ಲಿ ಸುರಿಬೈಲು ಸರಕಾರಿ ಶಾಲೆ ಸ್ಚಚ್ಛತೆಯನ್ನು ಕಾಪಾಡಿಕೊಂಡು, ಕೃಷಿ ಚಟುವಟಿಕೆಯಲ್ಲಿಯೂ ತೊಡಗಿಸಿಕೊಂಡು ಖಾಸಗಿ ಶಾಲೆಗಳಿಗಿಂತ ಕಡಿಮೆ ಏನಿಲ್ಲ ಎಂದು ಸಾಬೀತುಪಡಿಸಿದೆ. ಸ್ವಚ್ಛ ವಿದ್ಯಾಲಯ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಣ್ಣ ವಿಚಾರವಲ್ಲ. ಈ ಪ್ರಶಸ್ತಿಯು ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ಇಂತಹ ರಾಷ್ಟ್ರ ಪ್ರಶಸ್ತಿ ಗಳಿಸಲು ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಎಸ್ ಡಿ ಎಂ ಸಿ ಸಹಿತ ಎಲ್ಲರ ಶ್ರಮವಿದೆ. ಸರಕಾರಿ ಶಾಲೆಯನ್ನು ದತ್ತು ಪಡೆದುಕೊಂಡು ಖಾಸಗಿ ಶಾಲೆಗಿಂತ ಹೆಚ್ಚು ವೇಗದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಉದ್ಯಮಿ ಎಸ್.ಎಂ. ಅಬೂಬಕ್ಕರ್ ರವರ ನಿಸ್ವಾರ್ಥ ಸೇವೆಗೆ ಸಂದ ಅರ್ಹ ಪ್ರಶಸ್ತಿಯಾಗಿದೆ. ಇದು ಶಾಲೆಯ ಎಲ್ಲರಿಗೂ ಸಂದ ಗೌರವವಾಗಿದೆ ಎಂದು ಇರ್ಷಾದ್ ವೇಣೂರ್ ಅಭಿನಂದಿಸಿದರು.
ಸೆ.1 ರಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯನ್ನು ದತ್ತು ಪಡೆದುಕೊಂಡಿರುವ ಉದ್ಯಮಿ ಎಸ್.ಎಂ. ಅಬೂಬಕ್ಕರ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿ ಶಾಂಭವಿಯವರಿಗೆ ಎಸ್ ಐ ಓ ಪಾಣೆಮಂಗಳೂರು ಅಧ್ಯಕ್ಷ ತಮೀಝ್ ಅಲಿ ಕಾರಾಜೆ ಸ್ಮರಣಿಕೆ ಹಾಗೂ ಫಲಪುಷ್ಪವನ್ನು ನೀಡಿ ಗೌರವಿಸಿದರು. ಶಾಲೆಯ ಶಿಕ್ಷಕಿ ನೀರಜ ಧನ್ಯವಾದವಿತ್ತರು.
ಈ ಸಂದರ್ಭದಲ್ಲಿ ಎಸ್ ಐ ಓ ಪಾಣೆಮಂಗಳೂರು ಕಾರ್ಯದರ್ಶಿ ಮುಬಾರಿಶ್ ಚೆಂಡಾಡಿ, ಸದಸ್ಯ ರಿಝ್ವಾನ್ ಬೋಳಂಗಡಿ ಉಪಸ್ಥಿತರಿದ್ದರು.