ರಾಹುಲ್‌ ಗಾಂಧಿ ಸ್ವಾಗತಕ್ಕೆ ಕಾಪು ಸಕಲ ರೀತಿಯಿಂದ ಸಜ್ಜು : ವಿನಯ್ ಕುಮಾರ್ ಸೊರಕೆ

Spread the love

ರಾಹುಲ್‌ ಗಾಂಧಿ ಸ್ವಾಗತಕ್ಕೆ ಕಾಪು ಸಕಲ ರೀತಿಯಿಂದ ಸಜ್ಜು : ವಿನಯ್ ಕುಮಾರ್ ಸೊರಕೆ

ಉಡುಪಿ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮಾರ್ಚ್‌ 20ರಂದು ಉಡುಪಿ ಜಿಲ್ಲೆಯ ಕಾಪು ಕ್ಷೇತ್ರಕ್ಕೆ ಭೇಟಿ ನೀಡಲಿದ್ದು ಅವರನ್ನು ಸ್ವಾಗತಿಸಲು ಸಿದ್ದತೆ ಪೂರ್ಣಗೊಂಡಿದೆ ಎಂದು ಕಾಪು ಶಾಸಕ ಹಾಗೂ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.

ಅವರು ಸೋಮವಾರ ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ   ಕಾಪು ವಿಧಾನಸಭಾಕ್ಷೇತ್ರದ ಎಲ್ಲಾ 225 ಬೂತ್ ಗಳಿಂದ  15 ಸಾವಿರದಷ್ಟು ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ರಾಹುಲ್‌ ಗಾಂಧಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿದ್ದಾರೆ.  ಮೂರು ದಿನಗಳ ಎಐಸಿಸಿ ಅಧಿವೇಶವನ್ನು ಮುಗಿಸಿ ಪ್ರಥಮ ಬಾರಿಗೆ ಕರ್ನಾಟಕದ ಕಾಪು ವಿಧಾನಸಭಾಕ್ಷೇತ್ರಕ್ಕೆ ಬರುತ್ತಿರುವುದು ನಮ್ಮ ಭಾಗ್ಯ ಎಂದರು.

ಮಾ.20ರಂದು ಬೆಳಗ್ಗೆ ವಿಮಾನ ಮೂಲಕ ರಾಹುಲ್‌ ಗಾಂಧಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಉಡುಪಿ ಜಿಲ್ಲೆಯ ಕಾಪುಗೆ ಆಗಮಿಸಲಿದ್ದು ಅಲ್ಲಿ ಸೇವಾದಳದ ಕಾರ್ಯಕ್ರಮದಲ್ಲಿ ಭಾಗವಹಿಸಿ ರೋಡ್‌ ಶೋ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.

ಕಾಪುವಿನಿಂದ ಪಡುಬಿದ್ರಿ ಮೂಲಕ ಮೂಲ್ಕಿಗೆ ಬರಲಿದ್ದಾರೆ. ಅಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಗುತ್ತದೆ. ಮೂಲ್ಕಿ ಹಾಗೂ ಸುರತ್ಕಲ್‌ನಲ್ಲಿ ರೋಡ್‌ ಶೋ ನಡೆಸಲಿರುವ ಅವರು ಮಧ್ಯಾಹ್ನ 3 ಗಂಟೆ ಸುಮಾರಿಗೆ ನಗರದ ಅಂಬೇಡ್ಕರ್‌ ವೃತ್ತಕ್ಕೆ ಬರಲಿದ್ದಾರೆ. ಅಂಬೇಡ್ಕರ್‌ ವೃತ್ತದಿಂದ ನೆಹರೂ ಮೈದಾನದ ವರೆಗೆ ರೋಡ್‌ ಶೋ ನಡೆಯಲಿದೆ. ನೆಹರೂ ಮೈದಾನದಲ್ಲಿ ಸಂಜೆ 5.30ರ ಸುಮಾರಿಗೆ ಬೃಹತ್‌ ಸಮಾವೇಶ ನಡೆಯಲಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಲೋಕಸಭೆ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.


Spread the love