ರಾಹುಲ್ ಗಾಂಧಿಯನ್ನು ಅವಹೇಳನ ಮಾಡಿದ ಭರತ್ ಶೆಟ್ಟಿ ವಿರುದ್ದ ಪ್ರಕರಣ ದಾಖಲಿಸಿ – ವೆರೋನಿಕಾ ಕರ್ನೆಲಿಯೋ

Spread the love

ರಾಹುಲ್ ಗಾಂಧಿಯನ್ನು ಅವಹೇಳನ ಮಾಡಿದ ಭರತ್ ಶೆಟ್ಟಿ ವಿರುದ್ದ ಪ್ರಕರಣ ದಾಖಲಿಸಿ – ವೆರೋನಿಕಾ ಕರ್ನೆಲಿಯೋ

ರಾಹುಲ್ ಗಾಂಧಿ ಬೊಗಳುತ್ತಿದ್ದಾನೆ. ರಾಹುಲ್ ಗಾಂಧಿಗೆ ಸಂಸತ್ತಿನೊಳಗೇ ಹೋಗಿ ಬಾಗಿಲು ಹಾಕಿಕೊಂಡು ಕೆನ್ನೆಗೆ ಎರಡು ಬಾರಿಸಿಬೇಕು ಎಂದು ಹೇಳಿಕೆ ನೀಡಿರುವ ಸುರತ್ಕಲ್ ಶಾಸಕ ಭರತ್ ಶೆಟ್ಟಿ ಅವರ ವಿರುದ್ದ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಬಂಧಿಸುವಂತೆ ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಸರಕಾರವನ್ನು ಆಗ್ರಹಿಸಿದ್ದಾರೆ.

ಒರ್ವ ಜನಪ್ರತಿನಿಧಿ ಸಮಾಜಕ್ಕೆ ಮಾದರಿಯಾಗಿ ನಡೆದುಕೊಳ್ಳುವ ಬದಲು ಪುಂಡು ಪೋಕರಿಗಳಂತೆ ಸಾರ್ವಜನಿಕ ಸಭೆಗಳಲ್ಲಿ ಹೇಳಿಕೆ ನೀಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಚಾಳಿ ಬಿಜೆಪಿಗರಿಗೆ ಅಭ್ಯಾಸವಾಗಿ ಬಿಟ್ಟಿದ್ದು ಇಂತಹವರ ಬೇಜವಬ್ದಾರಿ ಹೇಳಿಕೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಹಿಂದೆ ರಾಹುಲ್ ಗಾಂಧಿಯವರು ಯಾವುದೋ ಸಭೆಯಲ್ಲಿ ಮೋದಿ ಹೆಸರು ಬಳಸಿದ್ದಕ್ಕೆ ಅವರ ಸಂಸತ್ ಸದಸ್ಯತ್ವ ಕೂಡ ರದ್ದುಗೊಳಿಸುವ ತನಕ ಬಿಜೆಪಿಗರು ಬೀದಿ ರಂಪ ಮಾಡಿದ್ದರು ಇಂದು ಅದೇ ರಾಹುಲ್ ಗಾಂಧಿಯವರ ಕುರಿತು ಕೇವಲವಾಗಿ ಮಾತನಾಡಿರುವುದು ಖಂಡನೀಯ.

ರಾಹುಲ್ ಗಾಂಧಿಯವರನ್ನು ಇಡೀ ದೇಶವೇ ಒಪ್ಪಿಕೊಂಡಿದೆ ಈ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಅತೀ ಹೆಚ್ಚು ಅಂತರದ ಮತಗಳಿಂದ ಗೆದ್ದು ಲೋಕಸಭೆಯ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಕೂತಿದ್ದಾರೆ. ಪ್ರತಿಪಕ್ಷ ಸ್ಥಾನ ಪ್ರಧಾನಿ ಸ್ಥಾನದಷ್ಟೇ ಮಹತ್ವದ್ದಾಗಿದ್ದು ಅಂತಹವರ ಬಗ್ಗೆ ಕೀಳು ಭಾಷೆಯನ್ನು ಬಳಸಿರುವ ವಿದ್ಯಾವಂತ ಎಂದುಕೊಳ್ಳುವ ಶಾಸಕನ ನಿಜ ಬಣ್ಣ ಬಯಲಾಗಿದೆ.

ಕ್ಷೇತ್ರದಲ್ಲಿ ಕಳೆದ ಅವಧಿಯಲ್ಲಿ ಹೇಳಿಕೊಳ್ಳೂವಂತಹ ಯಾವುದೇ ಸಾಧನೆಯನ್ನು ಮಾಡದೇ ಹೋದರು ಹಿಂದುತ್ವ ಎಂಬ ಲೇಬಲ್ ಅಂಟಿಸಿಕೊಂಡು ಗೆದ್ದು ಬಂದಿರುವ ಭರತ್ ಶೆಟ್ಟಿಯವರು ನಿಜವಾದ ಹಿಂದೂ ಧರ್ಮ ಏನು ಎನ್ನುವುದನ್ನು ಮೊದಲು ಅರಿಯಬೇಕಾಗಿದೆ. ಕೇವಲ ಹೊಡಿ ಬಡಿ ಸಂಸ್ಕೃತಿ ಇವರ ಹಿಂದೂ ಧರ್ಮ ಎನ್ನುವಂತಾಗಿದ್ದು ನೈಜ ಹಿಂದೂ ಧರ್ಮ ಏನು ಎನ್ನುವುದರ ಬಗ್ಗೆ ರಾಹುಲ್ ಗಾಂಧಿಯವರು ಸಂಸತ್ತಿನಲ್ಲಿ ಸವಿಸ್ತಾರವಾಗಿ ಮಾತನಾಡಿದ್ದಾರೆ ಹೊರತು ಹಿಂದೂ ಧರ್ಮಕ್ಕೆ ಅವಹೇಳನ ಮಾಡಿಲ್ಲ. ಬಿಜೆಪಿಗರಿಗೆ ತಮ್ಮ ಬಾಯಿ ಚಪಲ ತೀರಿಸಿಕೊಳ್ಳಲು ರಾಹುಲ್ ಗಾಂಧಿಯವರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡದೇ ಹೋದರೆ ನಿದ್ದೆ ಕೂಡ ಬರುವುದಿಲ್ಲ.

ರಾಹುಲ್ ಗಾಂಧಿ ಬಿಡಿ ಕಾಂಗ್ರೆಸ್ ಪಕ್ಷದ ಕಟ್ಟ ಕಡೆಯ ಒರ್ವ ಕಾರ್ಯಕರ್ತನ ಕೂದಲು ಕೊಂಕುವ ಧಮ್ಮು ತಾಕತ್ತು ಭರತ್ ಶೆಟ್ಟಿಯವರಿಗೆ ಇದೆಯಾ ಎನ್ನುವುದನ್ನು ಮೊದಲು ನೋಡಿಕೊಳ್ಳಲಿ ಬಳಿಕ ಅವರು ರಾಹುಲ್ ಗಾಂಧಿಯವರ ಬಗ್ಗೆ ಮಾತನಾಡಲಿ. ಇಂತಹ ಕೀಳು ಹೇಳಿಕೆಯನ್ನು ಒಂದು ವೇಳೆ ಕಾಂಗ್ರೆಸ್ ಪಕ್ಷ ನೀಡಿದ್ದರೆ ಇಷ್ಟರೊಳಗೆ ಬಿಜೆಪಿಗರು ಇಡೀ ಜಿಲ್ಲೆಯಲ್ಲಿ ರಾದ್ದಾಂತವೇ ಮಾಡಿ ಬಿಡುತ್ತಿದ್ದರು ಆದರೆ ಕಾಂಗ್ರೆಸ್ ಪಕ್ಷ ಗಲಭೆ ದೊಂಬಿಗಳಲ್ಲಿ ನಂಬಿಕೆ ಇಟ್ಟುಕೊಂಡಿಲ್ಲ ಕಾನೂನನ್ನು ಗೌರವಿಸುವುದು ಕಾಂಗ್ರೆಸ್ ಪಕ್ಷದ ಬದ್ದತೆಯಾಗಿದೆ. ರಾಹುಲ್ ಗಾಂಧಿಯವರ ಕುರಿತು ಅಸಂಬದ್ಧ ಹೇಳಿಕೆ ನೀಡಿರುವ ಶಾಸಕ ಭರತ್ ಶೆಟ್ಟಿಯವರ ವಿರುದ್ದ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಇದರಿಂದ ಮುಂದೆ ಇನ್ನೊಬ್ಬ ವ್ಯಕ್ತಿ ಮಾತನಾಡುವಾಗ ಸಾವಿರ ಬಾರಿ ಯೋಚಿಸಬೇಕು ಅಂತಹ ಕ್ರಮ ಅವರ ವಿರುದ್ದ ನಡೆಯಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.


Spread the love