ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಿಜೆಪಿ ಶಾಸಕ ವೈ ಭರತ್ ಶೆಟ್ಟಿ ಮೇಲೆ ಎಫ್.ಐ.ಆರ್
ಮಂಗಳೂರು: ಕಾಂಗ್ರೆಸ್ ಸಂಸದ, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಡಾ. ವೈ ಭರತ್ ಶೆಟ್ಟಿ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ.
ಪಾಲಿಕೆ ಸದಸ್ಯ ಕಾಂಗ್ರೆಸ್ನ ಅನಿಲ್ ಕುಮಾರ್ ನೀಡಿದ್ದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. BNS 351(3), 353 ಸೆಕ್ಷನ್ ಅಡಿ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಕಾವೂರಿನಲ್ಲಿ ಸೋಮವಾರ ನಡೆದಿದ್ದ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದ್ದ ಭರತ್ ಶೆಟ್ಟಿ, ರಾಹುಲ್ ಗಾಂಧಿಗೆ ಪಾರ್ಲಿಮೆಂಟ್ ಒಳಗೆ ಹೋಗಿ ಕೆನ್ನೆಗೆ ಬಾರಿಸಬೇಕಿತ್ತು ಅನಿಸುತ್ತಿದೆ ಎಂದಿದ್ದರು. ರಾಹುಲ್ ಗಾಂಧಿ ಶಿವನ ಫೋಟೊ ಹಿಡಿದು ನಿಂತಿದ್ದ. ಈ ಹುಚ್ಚನಿಗೆ ಶಿವ ಮೂರನೇ ಕಣ್ಣು ಬಿಟ್ಟರೆ ಸುಟ್ಟು ಬೂದಿಯಾಗಬಹುದು ಅಂತ ಗೊತ್ತಿಲ್ಲ ಎಂದು ಭರತ್ ಶೆಟ್ಟಿ ಹೇಳಿದ್ದರು.
ಸಾರ್ವಜನಿಕ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ವ್ಯಕ್ತಿಯನ್ನು ನಿಂದಿಸಿದ ಬಗ್ಗೆ ಅವರ ವಿರುದ್ಧ ದೂರು ದಾಖಲಾಗಿತ್ತು. ಶಸ್ತ್ರಾಸ್ತ್ರ ಉಪಯೋಗಿಸಿ ಹೋರಾಟ ಮಾಡೋಣ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದೂ ಆರೋಪಿಸಲಾಗಿತ್ತು. ಶಾಸಕರ ಹೇಳಿಕೆಯನ್ನು ಬೆಂಬಲಿಸಿದ ಶಾಸಕ ವೇದವ್ಯಾಸ್ ಕಾಮತ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕಾರ್ಪೋರೇಟರ್ಗಳ ವಿರುದ್ಧವೂ ಸೂಕ್ತ ಕ್ರಮಕ್ಕೆ ದೂರುದಾರರು ಆಗ್ರಹಿಸಿದ್ದರು.