ರಾಹೆ ಕಾಮಗಾರಿ ಪೂರ್ಣಕ್ಕೆ ಸಮಯ ಕೇಳಿದ ನವಯುಗ; 6 ತಿಂಗಳ ನಿಗದಿ ಮಾಡಿದ ಕುಂದಾಪುರ ಎಸಿ
ಕುಂದಾಪುರ: ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿಯ ಹೆದ್ದಾರಿ 66 ರಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ (ಫ್ಲೈಓವರ್) ಹಾಗೂ ಉಡುಪಿ ಕರಾವಳಿ ಜಂಕ್ಷನ್ ಬಳಿ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್ ಕಾಮಗಾರಿ ಕಾಲ ಮಿತಿ ಒಳಗೆ ಮುಗಿಸುವಂತೆ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ನವಯುಗ ಕಂಪೆನಿಗೆ ಕುಂದಾಪುರದ ಕಂದಾಯ ಉಪವಿಭಾಗಾಧಿಕಾರಿ ಟಿ.ಭೂಬಾಲನ್ ಬುಧವಾರ ಸೂಚಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಹೆದ್ದಾರಿ 66 ಚತುಷ್ಫಥ ರಸ್ತೆಯ ನಿರ್ಮಾಣಕ್ಕಾಗಿ ಕುಂದಾಪುರ ಹಾಗೂ ಉಡುಪಿಯಲ್ಲಿ ಕೈಗೊಂಡಿದ್ದ ಎರಡು ಕಾಮಗಾರಿಗಳ ವಿಳಂಭಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಆಕ್ರೋಶಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಈಚೆಗೆ ಉಪವಿಭಾಗಾಧಿಕಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದ್ದ ನವಯುಗ ಕಂಪೆನಿಗೆ ನೋಟಿಸ್ ಜಾರಿ ಮಾಡಿದ್ದರು.
ಬುಧವಾರ ತಮ್ಮ ವಕೀಲರೊಂದಿಗೆ ಕುಂದಾಪುರದ ಉಪಿಭಾಗಾಧಿಕಾರಿ ಕಚೇರಿಗೆ ಬಂದಿದ್ದ ಕಂಪನಿ ಎಂಜಿನಿಯರ್ ಹಾಗೂ ಅಧಿಕಾರಿಗಳು ಮುಂದಿನ 2 ತಿಂಗಳ ಒಳಗೆ ಉಡುಪಿ ಅಂಡರ್ ಪಾಸ್ ಕಾಮಗಾರಿಯನ್ನ ಹಾಗೂ ಮುಂದಿನ 1 ವರ್ಷದ ಒಳಗೆ ಕುಂದಾಪುರದ ಫ್ಲೈಓವರ್ ಕಾಮಗಾರಿ ಮುಗಿಸಲು ಕಾಲಾವಕಾಶ ಕೇಳಿದ್ದರು.
ಚತುಷ್ಫಥ ಯೋಜನೆಯ ಪ್ರಾರಂಭದಲ್ಲಿ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕಾಗಿ ಯೋಜನೆ ರೂಪಿಸಲಾಗಿತ್ತು. ನಂತರ ಮೂಲ ಯೋಜನೆಯನ್ನು ಬದಲಾಯಿಸಿ ಮೇಲ್ಸೇ
ತುವೆ ನಿರ್ಮಾಣದ ಕುರಿತು ಹೆದ್ದಾರಿ ಪ್ರಾಧಿಕಾರ ತೀರ್ಮಾನ ಮಾಡಿತ್ತು.
ಬದಲಾವಣೆಯ ಯೋಜನೆ ಮಂಜೂರಾತಿಯಾಗಿ ಆದೇಶವಾಗಿ ಹೊರ ಬರಲು ಸಾಕಷ್ಟು ಸಮಯವಾಗಿದ್ದರಿಂದ ಹಾಗೂ ಮಳೆಗಾಲದ 4 ತಿಂಗಳುಗಳ ಕಾಲ ಕಾಮಗಾರಿ ನಿರ್ವಹಿಸಲು ಸಮಸ್ಯೆಯಾಗುತ್ತಿರುವುದರಿಂದ ಹೆಚ್ಚಿನ ಕಾಲಾವಕಾಶ ನೀಡುವಂತೆ ಕಂಪೆನಿಯವರು ಕೋರಿಕೊಂಡಿದ್ದರು. ಇದಕ್ಕೆ ಒಪ್ಪದ ಉಪವಿಭಾಗಾಧಿಕಾರಿಗಳು ಈಗಾಗಾಲೆ ಕಾಮಗಾರಿಯ ವಿಳಂಭದಿಂದಾಗಿ ಸಾರ್ವಜನಿಕರಿಗೆ ತೊಂದರೆಗಳಾಗುತ್ತಿರುವುದರಿಂದಾಗಿ ಉಡುಪಿಯ ಕಾಮಗಾರಿಯನ್ನ 1 ತಿಂಗಳ ಒಳಗೆ ಹಾಗೂ ಕುಂದಾಪುರದ ಕಾಮಗಾರಿ 6 ತಿಂಗಳ ಒಳಗೆ ಕಾಮಗಾರಿ ಮುಗಿಸುವಂತೆ ಸೂಚಿಸಿದ್ದಾರೆ.