ರಿಕ್ಷಾಗಳಿಗೆ ಕಲರ್ ಕೋಡಿಂಗ್ – ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚನೆ
ಉಡುಪಿ: ಜಿಲ್ಲೆಯಲ್ಲಿನ ಆಟೋರಿಕ್ಷಾಗಳಿಗೆ ನಗರ ಪ್ರದೇಶದಲ್ಲಿ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುವಂತೆ ಪ್ರತ್ಯೇಕ ಕಲರ್ ಕೋಡಿಂಗ್ ಮಾಡುವಂತೆ ಜಿಲ್ಲಾ ಸಾರಿಗೆ ಅಧಿಕಾರಿಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚಿಸಿದ್ದಾರೆ.
ಅವರು ಶನಿವಾರ ರಜತಾದ್ರಿ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಸಾರ್ವಜನಿಕ ದೂರು ಸ್ವೀಕರಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶದ ಅನುಮತಿ ಪಡೆದ ಆಟೋರಿಕ್ಷಾಗಳು ನಗರ ಪ್ರದೇಶದಲ್ಲಿ ಸಂಚರಿಸುತ್ತಿರುವುದರಿಂದ , ನಗರ ಪ್ರದೇಶದ ರಿಕ್ಷಾ ಚಾಲಕರಿಗೆ ಸಮಸ್ಯೆಯಾಗುತ್ತಿದೆ ಈ ಕುರಿತು ಕ್ರಮ ಕೈಗೊಳ್ಳುವಂತೆ ಚಂದ್ರಶೇಖರ್ ಎಂಬುವರು ಮನವಿ ನೀಡಿದರು, ಈ ಕುರಿತಂತೆ ಆಟೋರಿಕ್ಷಾಗಳ ಮೇಲೆ ವಲಯ 1 ಮತ್ತು ವಲಯ 2 ಎಂದು ನಮೂದಿಸಿ, ವಲಯ 1 ರ ಆಟೋಗಳು ಉಡುಪಿ ನಗರ ಪ್ರದೇಶದಲ್ಲಿ ಮತ್ತು ವಲಯ 2 ರಡಿಯ ರಿಕ್ಷಾಗಳು ಉಡುಪಿ ನಗರದ ಹೊರಗಡೆ ಸಂಚರಿಸುವ ಕುರಿತಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ವಲಯ 1 ಮತ್ತು ವಲಯ 2 ಆಟೋಗಳ ಕುರಿತು ಮಾಹಿತಿಯನ್ನು ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ದಾಖಲಿಸಿಕೊಂಡು, ವಲಯ ಮೀರಿ ಸಂಚರಿಸುವ ಕುರಿತು ತಪಾಸಣೆ ಕೈಗೊಂಡು ,ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಕಿವಿಗೆ ಇಯರ್ ಫೋನ್ ಹಾಕಿಕೊಂಡು ಮತ್ತು ಹೆಲ್ಮೆಟ್ ಒಳಗೆ ಮೊಬೈಲ್ ಇಟ್ಟುಕೊಂಡು ಸಂಚರಿಸುತ್ತಿದ್ದು, ಹಿಂದಿನಿಂದ ಬರುವ ವಾಹನಗಳು ಹಾರ್ನ್ ಮಾಡಿದರೂ ಸಹ ಸೈಡ್ ನೀಡುವುದಿಲ್ಲ ಅಲ್ಲದೇ ತಕ್ಷಣ ಬ್ರೇಕ್ ಹಾಕುವುದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಮಣಿಪಾಲದ ಸುರೇಂದ್ರ ನಾಯಕ್ ಕೋರಿದರು, ಈ ಕುರಿತಂತೆ ಪೊಲೀಸ್ ಮತ್ತು ಸಾರಿಗೆ ಇಲಾಖೆಗಳು ವಿಶೇಷ ತನಿಖಾ ತಂಡಗಳನ್ನು ರಚಿಸಿಕೊಂಡು, ಅಕ್ಟೋಬರ್ ತಿಂಗಳು ಪೂರ್ತಿ ವಿಶೇಷ ಅಭಿಯಾನ ಕೈಗೊಂಡು ಅಂತಹ ವಾಹನ ಸವಾರರ ವಿರುದ್ದ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಮಣಿಪಾಲದಲ್ಲಿ ಖಾಸಗಿ ಕಂಪೆನಿಗಳು ಬಾಡಿಗೆಗೆ ಬೈಕ್ ಮತ್ತು ಕಾರು ಗಳನ್ನು ನೀಡುತ್ತಿದ್ದು, ಇದರಿಂದ ರಿಕ್ಷಾ ಚಾಲಕರಿಗೆ ತೊಂದರೆಯಾಗಿದೆ ಅಲ್ಲದೆ ಈ ವಾಹನಗಳ ಚಾಲಕರು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸದೆ ಇರುವುದರಿಂದ ವಾಹನಗಳಿಂದ ಅಪಘಾತ ಪ್ರಕರಣಗಳು ಸಹ ಸಂಭವಿಸುತ್ತಿದ್ದು, ಇವುಗಳಿಗೆ ಕಡಿವಾಣ ಹಾಕುವಂತೆ ಮತ್ತು ನಿಷೇಧಿಸುವಂತೆ ಮಣಿಪಾಲ ರಿಕ್ಷಾ ಚಾಲಕರ ಸಂಘದ ಸುಬ್ರಾಯ ಕೋರಿದ್ದು, ಕಾನೂನಾತ್ಮಕವಾಗಿ ಇದನ್ನು ತಡೆಯಲು ಸಾಧ್ಯವಿಲ್ಲ, ನಿಷೇಧ ಮಾಡುವ ಕುರಿತಂತೆ ಮನವಿ ಸಲ್ಲಿಸಿದರೆ ಸರಕಾರಕ್ಕೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಎರ್ಮಾಳ್ ದೇವಸ್ಥಾನದ ಬಳಿ ಎಕ್ಸ್‍ಪ್ರೆಸ್ ಬಸ್‍ಗಳಿಗೆ ನಿಲುಗಡೆ ನೀಡುವಂತೆ, ಶೆಟ್ಟಿಬೆಟ್ಟು ಶಾಲೆ ಹತ್ತಿರ ಬರಲು ಬಸ್ ವ್ಯವಸ್ಥೆ ಕಲ್ಪಿಸುವಂತೆ, ಹಿರಿಯ ನಾಗರೀಕರು ಮತ್ತು ಮಹಿಳೆಯರಿಗೆ ಬಸ್ ಹತ್ತಲು ಅನುಕೂಲವಾಗುವಂತೆ ಮೆಟ್ಟಿಲುಗಳನ್ನು ಎತ್ತರ ತಗ್ಗಿಸಲು ಕುರಿತಂತೆ, ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‍ನ್ನು ತುಂಡರಿಸಿ ವಾಹನಗಳು ಚಲಿಸುವ ಕುರಿತು ಹಾಗೂ ಭೂ ಸ್ವಾಧೀನ ಪರಿಹಾರ ಪಡೆದ ನಂತರವೂ ಕಟ್ಟಡಗಳನ್ನು ಸ್ಥಳಾಂತರ ಮಾಡದೇ ಇರುವ ಕುರಿತು ಸಾರ್ವಜನಿಕರು ಮನವಿ ಸಲ್ಲಿಸಿದರು.
ಸಭೆಯಲ್ಲಿ ಎಎಸ್ಪಿ ಕುಮಾರ ಚಂದ್ರ, ಪ್ರಾದೇಶಿಕ ಸಾರಿಗೆ ಅಧಿಕಾರಿ ವರ್ಣೇಕರ್ ಉಪಸ್ಥಿತರಿದ್ದರು.