Home Mangalorean News Kannada News ರೂ. 6000 ಪಿಂಚಣಿಗೆ ಆಗ್ರಹಿಸಿ ಎಐಟಿಯುಸಿಯಿಂದ `ಭವಿಷ್ಯ ನಿಧಿ ಚಲೋ’

ರೂ. 6000 ಪಿಂಚಣಿಗೆ ಆಗ್ರಹಿಸಿ ಎಐಟಿಯುಸಿಯಿಂದ `ಭವಿಷ್ಯ ನಿಧಿ ಚಲೋ’

Spread the love

ರೂ. 6000 ಪಿಂಚಣಿಗೆ ಆಗ್ರಹಿಸಿ ಎಐಟಿಯುಸಿಯಿಂದ `ಭವಿಷ್ಯ ನಿಧಿ ಚಲೋ’

ಮಂಗಳೂರು, ಮೇ.16:-ಇತ್ತೀಚಿಗಿನ ದಿನಗಳಲ್ಲಿ ಭವಿಷ್ಯನಿಧಿ ಸಂಘಟನೆಯು ಕಾರ್ಮಿಕರ ಭವಿಷ್ಯನಿಧಿ, ಪಿಂಚಣಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಪಡೆಯಲು ಅನಗತ್ಯ ನಿಯಮಗಳನ್ನು ಹೇರಿ ಸತಾಯಿಸುತ್ತಿದ್ದು ಈ ಅನೀತಿಯನ್ನು ವಿರೋಧಿಸಿ ಎಐಟಿಯುಸಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಭವಿಷ್ಯನಿಧಿ ಚಲೋ ಚಳವಳಿ ಹೈಲ್ಯಾಂಡ್ಸ್ ನಲ್ಲಿರುವ ಪ್ರಾದೇಶಿಕ ಭವಿಷ್ಯನಿಧಿ ಸಂಘಟನೆಯ ಕಛೇರಿ ಎದುರು ನಡೆಯಿತು.

ಪ್ರತಿಭಟನಾ ಕಾರರನ್ನುದ್ದೇಶಿಸಿ ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್ ಕಾರ್ಯದರ್ಶಿ ವಿ.ಎಸ್.ಬೇರಿಂಜ ಮಾತನಾಡುತ್ತಾ ಒಂದೆಡೆ ಕಾರ್ಮಿಕರು ಬದುಕಿಗಾಗಿ ಅನೇಕ ಕಷ್ಟಕಾರ್ಪಣ್ಯಗಳನ್ನು ಅನುಭವಿಸುತ್ತಿದ್ದು ಭವಿಷ್ಯನಿಧಿ ಹಣ ಪಡೆಯಲು ಕೂಡಾ ಕಾರ್ಮಿಕರೇ ನೇರವಾಗಿ ಭವಿಷ್ಯನಿಧಿ ಕಛೇರಿಗೆ ಬಂದು ಕಣ್ಣಿನ ಹಾಗೂ ಹೆಬ್ಬೆಟ್ಟಿನ ಬೆರಳಚ್ಚು ನೀಡಬೇಕೆಂದು ನಿಯಮಗಳನ್ನು ಮಾಡಿರುವುದು ಸರಿಯಲ್ಲ ಎಂದರು. ಕಾರ್ಮಿಕರು ದುಡಿದ ಫಲವಾಗಿ ಬಂದಿರುವ ಕಾನೂನು ಸೌಲಭ್ಯಗಳನ್ನು ಪಡೆಯಲು ಇಲ್ಲ ಸಲ್ಲದ ಷರತ್ತುಗಳನ್ನು ವಿಧಿಸುವುದು ಖಂಡನೀಯ ಎಂದು ಅಭಿಪ್ರಾಯಪಟ್ಟರು. ಪ್ರಸ್ತುತ ಪರಿಸ್ಥಿತಿಯಲ್ಲಿ ಕಾರ್ಮಿಕರ ಬದುಕೇ ದುಸ್ಥರಗೊಂಡಿದ್ದು ಭವಿಷ್ಯನಿಧಿ ಕೂಡಾ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದರಿಂದ ತಾವು ಸೇವೆ ಬಿಟ್ಟ ನಂತರವಾದರೂ ಪಿಂಚಣಿಗೆ ಅರ್ಜಿ ಸಲ್ಲಿಸುವಾಗ ದಿನವೊಂದಕ್ಕೆ ಸರಾಸರಿ ರೂ.200 ರ ಆಧಾರದಲ್ಲಿ ಮಾಸಿಕ ಕನಿಷ್ಠ ರೂ.6000 ಪಿಂಚಣಿ ಜ್ಯಾರಿಯಾದರೆ ಕಾರ್ಮಿಕರು ಸ್ವಲ್ಪ ಮಟ್ಟಿಗಾದರೂ ಗೌರವಯುತ ಜೀವನ ಸಾಗಿಸಲು ಅನುಕೂಲವಾಗಬಹುದು ಎಂದು ಆಗ್ರಹಿಸಿದರು.

ನಂತರ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಹೆಚ್.ವಿ ರಾವ್ ಮಾತನಾಡುತ್ತಾ ಭವಿಷ್ಯನಿಧಿ ಸಂಘಟನೆಯ ಕೇಂದ್ರ ಕಛೇರಿಯ ನಿರ್ದೇಶನದಂತೆ ನಿಯಮಗಳಲ್ಲಿ ದಿನಕ್ಕೊಂದು ರೀತಿಯ ಬದಲಾವಣೆಗಳು ಆಗುತ್ತಿದ್ದು ಕಾರ್ಮಿಕರ ನೈಜ ಪರಿಸ್ಥಿತಿ ಇಲಾಖೆಯ ಗಮನಕ್ಕೆ ಬಂದಿರದಿರುವುದು ಖೇದಕರ. ಎಲ್ಲವನ್ನೂ ಡಿಜಿಟಲೀಕರಣ ಮಾಡಲು ಬರುವುದಿಲ್ಲ. ಬಹುತೇಕ ಕಾರ್ಮಿಕರು ಅನಕ್ಷರಸ್ಥರು ಎಂದ ಅವರು `ಕಾರ್ಮಿಕರ ಭವಿಷ್ಯನಿಧಿ ಸಂಘಟನೆ’ ಎಂದು ಹೆಸರು ಸೂಚಿಸುವಂತೆ ಕಾರ್ಮಿಕರಿಗೆ ಸವಲತ್ತು ಪಡೆಯಲು ನಿಯಮಗಳನ್ನು ಸರಳೀಕರಿಸುವ ಬದಲು ಅನಗತ್ಯ ನಿಯಮಗಳನ್ನು ಮಾಡುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಪ್ರದರ್ಶನದ ಸಂದರ್ಭ ಸಹಾಯಕ ಭವಿಷ್ಯನಿಧಿ ಆಯುಕ್ತರಾದ ಶ್ರೀ ರವಿಯವರು ಬಂದು ಮನವಿ ಸ್ವೀಕರಿಸಿದರು.

ಪ್ರತಿಭಟನಾ ಪ್ರದರ್ಶನಕ್ಕೆ ಮುನ್ನ ಕಂಕನಾಡಿ ಬಸ್ಸು ನಿಲ್ದಾಣದಿಂದ ಕಾರ್ಮಿಕರ ಮೆರಣಿಗೆ ನಡೆಯಿತು. ನೇತೃತ್ವವನ್ನು ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ವಿ.ಭಟ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಜಿಲ್ಲಾ ಮುಖಂಡರುಗಳಾದ ಕರುಣಾಕರ್, ತಿಮ್ಮಪ್ಪ ಕೆ, ಕೆ.ಈಶ್ವರ್, ಸುಲೋಚನಾ, ಚಿತ್ರಾಕ್ಷಿ, ಸರಸ್ವತಿ ಕಡೇಶಿವಾಲಯ, ಪ್ರೇಮ್‍ನಾಥ್ ಕೆ. ಬಾಬು ಭಂಡಾರಿ, ದಯಾವತಿ, ಲಲಿತ ಕಾಗೆಕಾನ ವಹಿಸಿದ್ದರು.
ಪ್ರಾರಂಭದಲ್ಲಿ ಎಐಟಿಯುಸಿ ಜಿಲ್ಲಾ ಮುಖಂಡರಾದ ಸುರೇಶ್ ಕುಮಾರ್ ಸ್ವಾಗತಿಸಿ ಕೊನೆಯಲ್ಲಿ ಬಿ.ಶೇಖರ್ ವಂದಿಸಿದರು.


Spread the love

Exit mobile version