ರೈತರಿಗೆ ನಂಬಿಕೆ ದ್ರೋಹ ಮಾಡಿದ ಬಿ.ಎಸ್.ಯಡಿಯೂರಪ್ಪ — ಶೌವಾದ್ ಗೂನಡ್ಕ ಖಂಡನೆ
ಉತ್ತರ ಕರ್ನಾಟಕ ಭಾಗದ ರೈತರಿಗೆ 15 ದಿನಗಳಲ್ಲಿ ಮಹದಾಯಿ ವಿಚಾರದಲ್ಲಿ ಸಿಹಿಸುದ್ದಿಯನ್ನು ತರುತ್ತೇನೆಂದು ಮಾತನ್ನು ಕೊಟ್ಟು ಇದೀಗ ನನ್ನ ಕೈಯಿಂದ ಇದೆಲ್ಲ ಸಾಧ್ಯವಿಲ್ಲ ಎಂದು ಹೇಳುತ್ತಿರುವ ಬಿ.ಜೆ.ಪಿ.ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಆ ಭಾಗದ ರೈತರಿಗೆ ನಂಬಿಕೆ ದ್ರೋಹವನ್ನು ಮಾಡಿದ್ದಾರೆಂದು ದಕ್ಷಿಣ ಕನ್ನಡ ಜಿಲ್ಲಾ ಎನ್.ಎಸ್.ಯು.ಐ.ಸಮಿತಿಯ ಉಪಾಧ್ಯಕ್ಷ ಶೌವಾದ್ ಗೂನಡ್ಕರವರು ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ..
ಅಂತರಾಜ್ಯ ನದಿ ನೀರಿನ ವಿವಾದವಾಗಿರುವುದರಿಂದ ದೇಶದ ಪ್ರಧಾನ ಮಂತ್ರಿಗಳು ಈ ವಿಚಾರದಲ್ಲಿ ವಿಶೇಷ ಆಸಕ್ತಿಯನ್ನು ವಹಿಸಬೇಕಿತ್ತು..ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಮಾತುಕತೆಯ ಮೂಲಕ ಈ ವಿವಾದವನ್ನು ಬಗೆಹರಿಸುವ ಕೆಲಸ ಮಾಡುವುದನ್ನು ಬಿಟ್ಟು ಕೇಂದ್ರದ ಬಿ.ಜೆ.ಪಿ.ಸರ್ಕಾರವು ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯವನ್ನು ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಲವು ಬಾರಿ ಪ್ರಧಾನ ಮಂತ್ರಿ ಹಾಗೂ ಗೋವಾ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದರೂ ಕೂಡ ಇದುವರೆಗೂ ಉತ್ತರ ನೀಡಲಿಲ್ಲ. ರಾಜಕೀಯ ಲಾಭಕ್ಕೋಸ್ಕರ ಇದೀಗ ಬಿ.ಜೆ.ಪಿ.ಪಕ್ಷವು ಮನೋಹರ್ ಪಾರಿಕ್ಕರ್ ಅವರಿಂದ ಯಡಿಯೂರಪ್ಪನವರಿಗೆ ಪತ್ರವನ್ನು ಬರೆಸಿ ರಾಜ್ಯದ ಜನತೆಯ ಮುಂದೆ ನಾಟಕವಾಡುತ್ತಿದ್ದಾರೆ. ಇಂತಹ ಸೂಕ್ಷ್ಮ ವಿಚಾರದಲ್ಲಿ ಯಾರೂ ರಾಜಕೀಯ ಮಾಡದೆ ರೈತರ ಹಿತಾಸಕ್ತಿಯನ್ನು ಕಾಪಾಡಬೇಕೆಂದು ಶೌವಾದ್ ಗೂನಡ್ಕರವರು ಮನವಿ ಮಾಡಿದ್ದಾರೆ.
ರಾಜ್ಯದ ರೈತರಿಗೆ ವಿದ್ಯಾರ್ಥಿ ಸಮುದಾಯದ ಬೆಂಬಲ ಸದಾ ಇದ್ದು..ಮುಂದಿನ ದಿನಗಳಲ್ಲಿ ಎನ್.ಎಸ್.ಯು.ಐ.ವತಿಯಿಂದ ರೈತರ ಸಮಸ್ಯೆಗಳ ಕಡೆ ಗಮನ ಹರಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳ ಮುಖಾಂತರ ಸಹಿ ಸಂಗ್ರಹಣಾ ಅಭಿಯಾನವನ್ನು ನಡೆಸಿ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.