ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್‌ಗೆ ಜುಲೈ 4ರವರೆಗೆ ನ್ಯಾಯಾಂಗ ಬಂಧನ

Spread the love

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್‌ಗೆ ಜುಲೈ 4ರವರೆಗೆ ನ್ಯಾಯಾಂಗ ಬಂಧನ
 

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಸಹಿತ ಇತರೆ ಮೂವರು ಆರೋಪಿಗಳಿಗೆ ನಗರದ 42ನೆ ಎಸಿಎಂಎಂ ನ್ಯಾಯಾಲಯ ಜುಲೈ 4ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಶನಿವಾರ ಆದೇಶ ಹೊರಡಿಸಿದೆ.

ದರ್ಶನ್‌ ಹಾಗೂ ಇತರೆ ಮೂವರ ಕಸ್ಟಡಿ ಅವಧಿ ಶನಿವಾರ ಮುಗಿದಿರುವ ಹಿನ್ನೆಲೆ ಪೊಲೀಸರು ಆವರನ್ನು ನ್ಯಾಯಾಲಯಕ್ಕೆ ಕರೆದೊಯ್ದಿದ್ದಾರೆ. ದರ್ಶನ್‌, ವಿನಯ್‌, ಪ್ರದೂಶ್‌ ಹಾಗೂ ಧನ್‌ ರಾಜ್ ಗೆ ಜುಲೈ 4ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ರೇಣುಕಾ ಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 11 ರಂದು ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇನ್ನೂ ಹಲವು ಆರೋಪಿಗಳನ್ನು ಬಂಧಿಸಲಾಗಿತ್ತು. ಆ ದಿನದಿಂದಲೂ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಮೊದಲ ಬಾರಿ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೇಳಲಾಗಿತ್ತು, ಒಂದು ದಿನ ಮುಂಚಿತವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಐದು ದಿನಗಳ ಕಾಲ ಕಸ್ಟಡಿಗೆ ಪಡೆಯಲಾಯ್ತು, ಅದಾದ ಬಳಿಕ ಮತ್ತೆ ಎರಡು ದಿನಗಳ ಕಾಲ ಕಸ್ಟಡಿಗೆ ಕೇಳಿ ಪಡೆಯಲಾಗಿತ್ತು. ಅಲ್ಲಿಗೆ ಒಟ್ಟು 12 ದಿನಗಳ ಕಾಲ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿ ಕಳೆದಿದ್ದಾರೆ. ಈಗ 13 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಬೇಕಿದ್ದು, ಇಂದೇ (ಜೂನ್ 22) ದರ್ಶನ್ ಹಾಗೂ ಇತರೆ ಮೂವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗುತ್ತದೆ. ಜುಲೈ 4 ರ ವರೆಗೆ ದರ್ಶನ್ ಹಾಗೂ ಅವರ ಸಂಗಡಿಗರು ಜೈಲಿನಲ್ಲಿರಬೇಕಾಗಿದೆ.

ಇಂದು ಪೊಲೀಸರು, ಆರೋಪಿಗಳಿಗೆ ನ್ಯಾಯಾಂಗ ಬಂಧನ ಕೋರಿ ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದರು, ಅದನ್ನು ಪುರಸ್ಕರಿಸಿದ ನ್ಯಾಯಾಧೀಶ ಜಯಕುಮಾರ್ ಜಾಟ್ಲಾ ಅವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ವಿಚಾರಣೆಗೆ ಕರೆತರುವ ಮುನ್ನ ಪೊಲೀಸರು ಆರೋಪಿಗಳ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದರು. ನ್ಯಾಯಾಲಯಕ್ಕೆ ಬಂದ ಬಳಿಕವೂ ಸಹ ನ್ಯಾಯಾಧೀಶರು ಆರೋಪಿಗಳನ್ನು ಉದ್ದೇಶಿಸಿ, ಪೊಲೀಸರಿಂದ ಏನಾದರೂ ಸಮಸ್ಯೆ ಆಗಿದೆಯೇ ಎಂದು ಕೇಳಿ ಮಾಹಿತಿ ಪಡೆದುಕೊಂಡರು. ಅಂತಿಮವಾಗಿ ನಾಲ್ಕು ಮಂದಿ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದರು.

ಈ ವೇಳೆ ಪೊಲೀಸರ ಪರ, ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿ, ಈ ಪ್ರಕರಣದ ಆರೋಪಿಗಳನ್ನು ಬೇರೆ-ಬೇರೆ ಜೈಲುಗಳಿಗೆ ವರ್ಗಾವಣೆ ಮಾಡುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ಆರೋಪಿಗಳ ಪರ ವಕೀಲರಾದ ಪ್ರವೀಣ್ ತಿಮ್ಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಈ ವಿಚಾರದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಯ್ತು.


Spread the love
Subscribe
Notify of

0 Comments
Inline Feedbacks
View all comments