ರೈತರಿಗೆ 10 ಲಕ್ಷದ ವರೆಗೆ ಬಡ್ಡಿರಹಿತ ಸಾಲ ನೀಡಲು ಪ್ರಯತ್ನ- ಸಚಿವೆ ಡಾ.ಜಯಮಾಲಾ
ಉಡುಪಿ: ರೈತರು ಮನೆ ನಿರ್ಮಾಣ, ತೋಟ ಅಭಿವೃದ್ಧಿ, ಬೇಲಿ ನಿರ್ಮಾಣ ಮುಂತಾದ ಅಭಿವೃದ್ದಿ ಕಾರ್ಯಕ್ರಮಗಳನ್ನು ಮಾಡಲು ರೂ.10 ಲಕ್ಷ ದ ವರೆಗೆ ಬಡ್ಡಿ ರಹಿತ ಸಾಲ ನೀಡುವ ಕುರಿತಂತೆ ಸರಕಾರದ ಮಟ್ಟದಲ್ಲಿ ಚರ್ಚಿಸಿ, ಜಾರಿಗೆ ಪ್ರಯತ್ನಿಸಲಾಗುವುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಭರವಸೆ ನೀಡಿದ್ದಾರೆ.
ಅವರು ಅವರು ಭಾನುವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಹಾಗೂ ಕೃಷಿ ಸಂಬಂದಿತ ಇಲಾಖೆಗಳು ಹಾಗೂ ಕೃಷಿಕ ಸಮಾಜದ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ರೈತರ ದಿನಾಚರಣೆ ಮತ್ತು ರೈತ ಜನ ಸಂಪರ್ಕ ಸಭೆಯಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.
ರೈತರಿಗೆ ಸಾಲ ನೀಡಿ, ಮನ್ನಾ ಮಾಡುವ ಬದಲು ಮನೆ ನಿರ್ಮಾಣ, ತೋಟ ಅಭಿವೃದ್ಧಿ, ಬೇಲಿ ನಿರ್ಮಾಣ ಮುಂತಾದ ಅಭಿವೃದ್ದಿ ಕಾರ್ಯಕ್ರಮಗಳನ್ನು ಮಾಡಲು ರೂ.10 ಲಕ್ಷ ದ ವರೆಗೆ ಬಡ್ಡಿ ರಹಿತವಾಗಿ ಸಾಲ ನೀಡಿ ಎಂದು ಸಭೆಯಲ್ಲಿ ರೈತರು ಸಚಿವರನ್ನು ಕೋರಿದರು, ಈ ಕುರಿತಂತೆ ಸರಕಾರದ ಮಟ್ಟದಲ್ಲಿ ಚರ್ಚಿಸಿ, ಜಾರಿಗೆ ಪ್ರಯತ್ನಿಸಲಾಗುವುದು ಎಂದ ಸಚಿವರು ಎಲ್ಲಾ ರೈತರು ತಮ್ಮ ಬೆಳೆಗಳಿಗೆ ಬೆಲೆ ವಿಮೆ ಮಾಡಿಸುವಂತೆ ತಿಳಿಸಿ, ರೈತರಿಗೆ ಈ ಕುರಿತು ಪ್ರತಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗಳು ಮಾಹಿತಿ ನೀಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಜಲಾನಯನ ಯೋಜನೆಯಡಿ ಹಲವು ಅಕ್ರಮ ನಡೆದಿರುವ ಬಗ್ಗೆ ರೈತರು ಸಚಿವರ ಗಮನಕ್ಕೆ ತಂದರು, ಈ ಕುರಿತಂತೆ ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿ ವರದಿ ಪಡೆಯಲಾಗುವುದು ಎಂದು ಸಚಿವರು ಹೇಳಿದರು.
ಜಿಲ್ಲೆಯಲ್ಲಿ ಅಡಿಕೆ ಕೊಳೆ ರೋಗ ಪರಿಹಾರ ವಿತರಣೆ ಸಮರ್ಪಕವಾಗಿ ನಡೆದಿಲ್ಲ ಎಂಬ ರೈತರ ದೂರಿಗೆ ಉತ್ತರಿಸಿದ ಜಿಲ್ಲಾ ತೋಟಗಾರಿಕಾ ಇಲಖೆಯ ಉಪ ನಿರ್ದೇಶಕು ಭುವನೇಶ್ವರಿ, ಜಿಲ್ಲೆಯಲ್ಲಿ 5770 ಹೆಕ್ಟೆರ್ ಅಡಿಕೆ ಕೊಳೆ ರೋಗ ಹಾನಿ ಬಗ್ಗೆ ಅರ್ಜಿ ಸಲ್ಲಿಕೆಯಾಗಿದ್ದು, ಆನ್ಲೈನ್ ಮೂಲಕ ಅರ್ಜಿಗಳನ್ನು ವಿಲೆವಾರಿ ಮಾಡುತ್ತಿದ್ದು, ಇನ್ನು 2600 ಅರ್ಜಿ ಗಳು ಆನ್ ಲೈನ್ ನಲ್ಲಿ ದಾಖಲಿಸಲು ಬಕಿ ಇದ್ದು, ತಾಂತ್ರಿಕ ಕಾರಣಗಳಿಂದ ದಾಖಲಾತಿ ವಿಳಂಬವಾಗಿದೆ, ಈಗಾಗಲೇ 512 ಮಂದಿಗೆ 47.38 ಲಕ್ಷ ಪರಿಹಾರ ಪಾವತಿಸಲಾಗಿದೆ ಎಂದರು, ಬಾಕಿ ಉಳಿದ ಅರ್ಜಿಗಳನ್ನು ಡಿಸೆಂಬರ್ 31 ರೊಳಗೆ ವಿಲೇವಾರಿ ಮಾಡುವಂತೆ ಸಚಿವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವ ಕುರಿತಂತೆ ನಡೆದ ಚರ್ಚೆಯಲ್ಲಿ, ಸಕ್ಕರೆ ಬೆಳೆಯಲು ತಾವು ಸಿದ್ದರಿದ್ದು ಕಾರ್ಖಾನೆಯ ಅವಶ್ಯಕತೆಯಿದೆ ಎಂದು ರೈತರು ತಿಳಿಸಿದರು, ಈಗಾಗಲೇ 2800 ರೈತರು ಕಬ್ಬು ಬೆಳೆಯಲು ಸಿದ್ದರಿರುವುದಾಗಿ ಒಪ್ಪಿಗೆ ಪತ್ರ ನೀಡಿರುವುದಾಗಿ ರೈತ ಸಂಘದ ನಾಯಕರು ತಿಳಿಸಿದರು, ಅದರೆ ವಾರಾಹಿ ಯೋಜನೆ ಇನ್ನೂ ಪೂರ್ಣಗೊಳ್ಳದೆ ಇರುವುದರಿಂದ ಶೀಘ್ರವಾಗಿ ಯೋಜನೆಯ ಪೂರ್ಣಗೊಂಡು ಸಂಪೂರ್ಣ ನೀರಾವರಿ ದೊರೆತಲ್ಲಿ ಸಕ್ಕರೆ ಕಾರ್ಖಾನೆಗೆ ಕಬ್ಬಿನ ಕೊರತೆಯಾಗುವುದಿಲ್ಲ, ಕಾರ್ಖಾನೆಯನ್ನು ಪುನಃಶ್ಚೇತನ ಮಾಡುವ ಬದಲು ಮರು ನಿರ್ಮಾಣ ಮಾಡಬೇಕು ಎಂದು ರೈತರು ಕೋರಿದರು.
ವಾರಾಹಿ ಯೋಜನೆಯ ಪ್ರಗತಿ ಕುರಿತು ಸಚಿವರ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು, ಎಡದಂಡೆ ಕಾಲುವೆ ಕಾಮಗಾರಿ ಪೂರ್ಣಗೊಂಡಿದ್ದು, ಬಲದಂಡೆ ಕಾಮಗಾರಿಯ ಯೋಜನೆಗೆ ಅಂತಿಮ ಅನುಮೋದನೆ ದೊರೆಯುವುದು ಬಾಕಿ ಇದ್ದು, 2019 ರಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದರು, ವಾರಾಹಿ ಯೋಜನೆಯ ಬಿಲ್ಲಾಡಿ ಬಳಿ ಕಾಲುವೆ ನಡುವೆ ಬಂಡೆ ಬಂದಿದ್ದು, ಈ ಬಂಡೆಯನ್ನು ಒಡಯದೆ ಅದರ ನಂತರದ ಭಾಗದ ಕಾಮಗಾರಿಯನ್ನು ಮುಂದುರೆಸಿರುವುದರಿಂದ ಕಾಲುವೆ ವ್ಯಾಪ್ತಿಯ 3 ಗ್ರಾಮಗಳಿಗೆ ನೀರು ದೊರೆಯುತ್ತಿಲ್ಲ ಈ ಕುರಿತಂತೆ ಅಧಿಕಾರಿಗಳ ನಿರ್ಲಕ್ಷತೆ ವಿರುದ್ದ ರೈತರು ಅಸಮಧಾನ ವ್ಯಕ್ತಪಡಿಸಿದರು. ಕಾಲುವೆ ನಡುವೆ ಇರುವ ಬಂಡೆ ಒಡೆಯುವ ಕುರಿತಂತೆ ಇರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಶೀಘ್ರದಲ್ಲಿ ಬಂಡೆ ಒಡೆದು ಗ್ರಾಮಗಳಿಗೆ ನೀರಿನ ಸೌಲಭ್ಯ ಒದಗಿಸುವಂತೆ ಸಚಿವರು ಸೂಚಿಸಿದರು. ವಾರಾಹಿ ಯೋಜನೆಯ ಕುರಿತಂತೆ ಪ್ರತ್ಯೇಕ ಸಭೆ ನಡೆಸುವಂತೆ ಸಚಿವರನ್ನು ರೈತರು ಕೋರಿದರು.
ಭತ್ತ ಮತ್ತು ತೆಂಗಿಗೆ ಬೆಂಬಲ ಬೆಲ ನೀಡುವ ಕುರಿತು, ಅಡಿಕೆ ಕೊಳೆ ರೋಗಕ್ಕೆ ಸೂಕ್ತ ಔಷಧಿ ಕಂಡು ಹಿಡಿಯುವ ಬಗ್ಗೆ, ಕಾಡುಪ್ರಾಣಿ ಹಾವಳಿಯಿಂದ ಬೆಳ ರಕ್ಷಿಸುವ ಬಗ್ಗೆ, ಕೃಷಿ ಅಧಿಕಾರಿಗಳು ಗ್ರಾಮಗಳಿಗೆ ಬಂದು ರೈತರಿಗೆ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಬಗ್ಗೆ , ಡ್ರೀಮ್ಡ್ ಫಾರೆಸ್ಟ್ ಸಮಸ್ಯೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ವಿವಿಧ ರೈತ ಸಂಘಟನೆಗಳ ಮುಖಂಡರು, ರೈತರು ಸಭೆಯಲ್ಲಿ ಉಪಸ್ಥಿತರಿದ್ದರು.