ರೈತರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡುವೆ: ಯದುವೀರ್
ಮೈಸೂರು: ರೈತರು, ಗ್ರಾಮೀಣ ಪ್ರದೇಶದಲ್ಲಿ ಏನೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತಂದರೆ. ಅವುಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರೈತಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಹಾಗೂ ನೂತನ ಸಂಸದರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರಿಗಾಗಿ ಸದಾ ಸ್ಪಂದಿಸುವ ಕೆಲಸ ನನ್ನದಾಗಿದೆ. ಹೀಗಾಗಿ ನನ್ನ ಕಚೇರಿ ಸದಾ ತೆರೆದಿದ್ದು, ಬಳಸಿಕೊಳ್ಳಿ. ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಕಿಸಾನ್ ಸಮ್ಮಾನ್ ಹಣ ಬಿಡುಗಡೆ ಕಡತಕ್ಕೆ ಸಹಿ ಹಾಕುವ ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ. ಮಣ್ಣಿನ ಪೌಷ್ಠಿಕಾಂಶ ಹಾಳಾಗದಂತೆ ರಾಗಿ ಬೆಳೆಯಬಹುದಾಗಿದೆ. ಭಾರತೀಯ ದೇಸಿ ಆಹಾರ ಪದ್ಧತಿ ಬೆಳೆಸಿಕೊಂಡಾಗ ಮಾತ್ರ ಆ ಬೆಳೆಗಳನ್ನು ಬಳಸಿಕೊಳ್ಳಲು ಸಹಕಾರಿ ಆಗಲಿದೆ ಎಂದು ತಿಳಿಸಿದರು.
ಚುನಾವಣೆಯಲ್ಲಿ ಪರಿಸರ ರಕ್ಷಣೆ ಮಾಡುವುದಾಗಿ ಭರವಸೆ ನೀಡಿದ್ದೆವು. ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿಯೂ ಕೆಲಸ ಮಾಡಬೇಕಿದೆ. ಮಾಲಿನ್ಯ ತಡೆಗಟ್ಟಲು ರೈತರು ವಲಯ ಮಟ್ಟದಿಂದಲೇ ಕಾರ್ಯಪ್ರವೃತ್ತರಾಗಬೇಕು. ಪರಿಸರ ಕಾಳಜಿಯಿಂದ ಕೃಷಿ ಮಾಡಿದರೆ ಮುಂದಿನ ಪೀಳಿಗೆಗೆ ಒಳ್ಳೆಯ ಸಂದೇಶ ಕೊಡಬೇಕಿದೆ ಎಂದು ಹೇಳಿದರು.
ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಮಾತನಾಡಿ, ಕಳೆದ 50 ವರ್ಷಗಳಿಂದ ಕೃಷಿ ಕ್ಷೇತ್ರ ಸ್ವಾವಲಂಬಿಯಿಂದ ಪರವಾಲಂಬಿಯಾಗಿದೆ. ಶೇ.72ರಷ್ಟು ಕೃಷಿ ಪ್ರಧಾನ ದೇಶವಾಗಿದ್ದ ಭಾರತ ಇಂದು ಅತಂತ್ರ ಸ್ಥಿತಿಯಲ್ಲಿದೆ. ಮರಳಿ ಕೃಷಿಯೆಡೆಗೆ ಸರ್ಕಾರದ ಆಡಳಿತವನ್ನು ಕರೆದೊಯ್ಯುವ ಜವಾಬ್ದಾರಿ ಮೋರ್ಚಾದ್ದಾಗಿದೆ. ಬಿತ್ತನೆ ಬೀಜ, ಗೊಬ್ಬರಕ್ಕಾಗಿ ಪೇಟೆಯನ್ನು ಅವಲಂಬಿಸಿ ಸಂಪೂರ್ಣ ನಗರವನ್ನು ನಂಬಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಮೈಸೂರು ನಗರ ಸುತ್ತಮುತ್ತ ಉತ್ತಮವಾಗಿ ಬೆಳೆಯುತ್ತಿದ್ದ ಕೃಷಿ ಭೂಮಿ ಬಂಡವಾಳಶಾಹಿಗಳ ಪಾಲಾಗಿ ಬರಡು ಭೂಮಿಯಾಗಿ ಮಾರ್ಪಾಡಾಗಿದೆ. ಹೀಗೆ ಕೃಷಿ ಭೂಮಿಗೆ ರಕ್ಷಣೆ ಕೊಡದಿದ್ದರೆ ಕೃಷಿ ನಾಶವಾಗಿ ಆಹಾರ ಸಂರಕ್ಷಣಾ ಕಾಯಿದೆ ಉಲ್ಲಂಘನೆ ಆಗಿದೆ. ತೋಟಗಾರಿಕೆ ಭೂಮಿ ಶೇ.16ರಷ್ಟಿದೆ. ನೀರಾವರಿ ಭೂಮಿ ಶೇ.27ರಷ್ಟಿದೆ. ಫಲವತ್ತಾದ 12ರಷ್ಟಿರುವ ಭೂಮಿಯನ್ನು ಇತರೆ ಉದ್ದೇಶಗಳಿಗೆ ಬಳಸಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕೆಂಬ ನಿಯಮ ಜಾರಿಗೊಳಿಸಿದ್ದೆವು. ಬರಡು, ಬೆಂಗಾರು, ಒಳನಾಡು ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ಬಳಸುವ ಪ್ರಯತ್ನ ಆಗುವ ನೂತನ ಮಸೂದೆಯನ್ನು ಜಾರಿಗೊಳಿಸುವ ಕೆಲಸ ಮಾಡಬೇಕೆಂದು ಹೇಳಿದರು.
ಇದೇ ವೇಳೆ ರೈತಮೋರ್ಚಾ ಉಪಾಧ್ಯಕ್ಷರಾಗಿ ಕೆ.ಬಿ.ಗಂಗಾಧರ್, ಎಸ್‌ಪಿಟಿ ಸುರೇಶ್, ಮಹದೇವ್ ಹೆಗಡೆ, ಚಂದ್ರಶೇಖರ್, ಜಿಲ್ಲಾ ಕಾರ್ಯದರ್ಶಿಯಾಗಿ ನಾಗೇಶ್, ಸತೀಶ್, ಕಾರ್ಯದರ್ಶಿ ಮಹದೇವಸ್ವಾಮಿ, ರಾಹುಲ್, ರೈತಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿ ಸಣ್ಣೇಗೌಡ, ಪಾಲಾಕ್ಷ, ಮಹದೇವನಾಯಕ, ಮೋಹನ್, ಶಿವಕುಮಾರ್, ಪುನೀತ್, ಮಾಯಪ್ಪ, ಪುಟ್ಟರಾಜು, ರಾಜೇಂದ್ರ, ಸೋಮಶೇಖರ್ ಮೊದಲಾದವರಿಗೆ ನೇಮಕಾತಿ ಪತ್ರ ವಿತರಿಸಲಾಯಿತು.
ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮಿರ್ಲೆ ಶ್ರೀನಿವಾಸ್ ಗೌಡ ಇನ್ನಿತರರು ಉಪಸ್ಥಿತರಿದ್ದರು.