ರೈತ ಸಂಘಟನೆಗಳಿಂದ ಶುಕ್ರವಾರ ಕರ್ನಾಟಕ ಬಂದ್: ನಾಳೆ ತೀರ್ಮಾನ
ಬೆಂಗಳೂರು: ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ವಿರೋಧಿಸಿ ವಿವಿಧ ರೈತಪರ, ದಲಿತ, ಕಾರ್ಮಿಕ ಮತ್ತು ಜನರ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್ ಗೆ ಕರೆ ನೀಡಲು ಉದ್ದೇಶಿಸಿವೆ.
ಬುಧವಾರ ನಗರದ ಪ್ರೀಡಂ ಪಾರ್ಕ್ ನ ಜನ ಚಳವಳಿಗಳ ಪರ್ಯಾಯ ಜನತಾ ಅಧಿವೇಶನ ನಡೆಯುತ್ತಿರುವ ಪ್ರೀಡಂ ಪಾರ್ಕ್ ನ ದೇವರಾಜ ಅರಸು ವೇದಿಕೆಯಲ್ಲಿ ನಡೆದ ಸಭೆಯಲ್ಲಿ ಶುಕ್ರವಾರ ಬಂದ್ ಗೆ ಕರೆ ನೀಡುವ ಜತೆಗೆ ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆ ವಿರುದ್ಧ ಎರಡನೇ ಹಂತದ ಹೋರಾಟ ನಡೆಸಲು ಸಹ ಚಿಂತನೆ ನಡೆಸಿವೆ.
“ ಬದುಕಲು ಬೇಕಾದಷ್ಟು ಭೂಮಿ, ಗೌರವದಿಂದ ಬಾಳುವಂತಹ ವಸತಿ ನಮ್ಮ ಜನ್ಮ ಸಿದ್ಧ ಹಕ್ಕು” ಎನ್ನುವ ಘೋಷಣೆಯಡಿ ಹೋರಾಟ ನಡೆಲು ತೀರ್ಮಾನಿಸಿವೆ.
ಇನ್ನು ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿದ ರೈತ ಸಂಘದ ಪದಾಧಿಕಾರಿಗಳು, ದೇಶಾದ್ಯಂತ ಕೇಂದ್ರ ಸರಕಾರದ ನಡೆಯ ಬಗ್ಗೆ ವಿರೋಧ ವ್ಯಕ್ತವಾಗಿದೆ. ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ಸೆ.25ರಂದು ಬಂದ್ ಆಚರಿಸಲಿದ್ದಾರೆ. ನಾವು ಕೂಡಾ ಇಂದು ಸಂಜೆ ರಾಷ್ಟ್ರದ ವಿವಿಧ ಸಂಘಟನೆಗಳ ಜೊತೆ ಚರ್ಚೆ ನಡೆಸುತ್ತೇವೆ. ಬಂದ್ ಬಗ್ಗೆ ನಾಳೆ ಬೆಳಿಗ್ಗೆ ಅಂತಿಮ ನಿರ್ಧಾರ ಪ್ರಕಟಿಸುತ್ತೇವೆ ಎಂದು ಹೇಳಿದ್ದಾರೆ.