ರೈಲ್ವೆ ಪರೀಕ್ಷೆಯಲ್ಲಿ ಜನಿವಾರ ಮಾತ್ರವಲ್ಲ, ಮಂಗಳಸೂತ್ರವೂ ನಿಷಿದ್ಧ! ವ್ಯಾಪಕ ಆಕ್ರೋಶ
ಮಂಗಳೂರು: ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲಿಯೇ ಇದೀಗ ರೈಲ್ವೆ ನೇಮಕಾತಿ ಮಂಡಳಿ ಕೂಡ ಆಕ್ಷೇಪಾರ್ಹ ಕ್ರಮ ಕೈಗೊಂಡಿದೆ. ಈ 29ರಂದು ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ಹಾಲ್ಟಿಕೆಟ್ ನೀಡಲಾಗಿದೆ. ಅದರಲ್ಲಿ, ಮಂಗಳಸೂತ್ರ ಮತ್ತು ಧಾರ್ಮಿಕ ಸಂಕೇತಗಳನ್ನೆಲ್ಲ ತೆಗೆದಿರಿಸಿ ಪರೀಕ್ಷೆಗೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ. ರೈಲ್ವೆ ನೇಮಕಾತಿ ಮಂಡಳಿಯ ಈ ಕ್ರಮಕ್ಕೆ ಹಿಂದು ಪರ ಸಂಘಟನೆಗಳ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರೈಲ್ವೆ ನೇಮಕಾತಿ ಮಂಡಳಿಯು ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಯನ್ನು ಎ. 29ರಂದು ಹಮ್ಮಿಕೊಂಡಿದೆ. ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ತೆರಳುವಾಗ ಧಾರ್ಮಿಕ ಸಂಕೇತಗಳಾದ ಮಂಗಳಸೂತ್ರ, ಜನಿವಾರ ಮೊದಲಾವುಗಳನ್ನು ಧರಿಸುವಂತಿಲ್ಲ ಎಂದು ಪರೀಕ್ಷೆ ಪ್ರವೇಶಪತ್ರದಲ್ಲಿ ಉಲ್ಲೇಖಿಸಿರುವ ಮಾರ್ಗಸೂಚಿಯಲ್ಲಿ ಸೂಚನೆ ನೀಡಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್,” ರೈಲ್ವೇ ಇಲಾಖೆಯ ನರ್ಸಿಂಗ್ ಸುಪರಿಂಟೆಂಡೆಂಟ್ ಹುದ್ದೆಗೆ ಎ. 28, 29, 30 2025 ರಂದು ಬೆಸೆಂಟ್ ವಿದ್ಯಾಕೇಂದ್ರದಲ್ಲಿ ಪರೀಕ್ಷೆ ನಡೆಯಲಿದ್ದು, ಆ ಪರೀಕ್ಷೆ ಬರೆಯಬೇಕಾದರೆ ಹಿಂದೂಗಳು ಅವರ ಧಾರ್ಮಿಕ ಸಂಪ್ರದಾಯಗಳಾದ ಮಂಗಳಸೂತ್ರ, ಜನಿವಾರ ಗಳನ್ನೂ ತೆಗೆದು ಪರೀಕ್ಷೆ ಬರೆಯುವಂತೆ ಪ್ರವೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ರೀತಿಯ ಧಾರ್ಮಿಕ ವಿರೋಧಿ ಧೋರಣೆ ಸಹಿಸಲು ಅಸಾಧ್ಯ”, ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮಾನ್ಯ ಜಿಲ್ಲಾಧಿಕಾರಿಗಳೇ, ಸಂಸದರೇ ಇಂತಹ ಆದೇಶವನ್ನು ಕೈಬಿಟ್ಟು ನಡೆಯಲಿರುವ ಪರೀಕ್ಷೆಯಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ಬಾರದ ರೀತಿಯಲ್ಲಿ ಪರೀಕ್ಷಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ”, ಎಂದು ಶರಣ್ ಪಂಪ್ವೆಲ್ ಆಗ್ರಹಿಸಿದ್ದಾರೆ.
ಶರಣ್ ಪಂಪ್ ವೆಲ್ ಅವರು ತಮ್ಮ ಪೋಸ್ಟ್ ಅನ್ನು ಜಿಲ್ಲಾಧಿಕಾರಿಗಳಿಗೆ, ಸಂಸದರಿಗೆ ಟ್ಯಾಗ್ ಮಾಡಿದ್ದಾರೆ.
ರೈಲ್ವೆ ನೇಮಕಾತಿ ಪರೀಕ್ಷೆ ಬರೆಯಬೇಕಾದರೆ ಹಿಂದೂಗಳು ಅವರ ಧಾರ್ಮಿಕ ಚಿಹ್ನೆಗಳಾದ ಮಂಗಳಸೂತ್ರ, ಜನಿವಾರ ಗಳನ್ನೂ ತೆಗೆಯಬೇಕೆಂದು ಸೂಚನೆ ನೀಡಿರುವುದು ಸರಿಯಲ್ಲ. ರಾಜ್ಯದಲ್ಲಿ ಇತ್ತೀಚಿಗೆ ನಡೆದ ಸಿಇಟಿ ಪರೀಕ್ಷೆ ಬರೆಯುವ ಹಿಂದೂ ಅಭ್ಯರ್ಥಿಗಳ ಜನಿವಾರವನ್ನು ಕಿತ್ತು ಹಾಕಿದ ಪ್ರಕರಣದಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಇದು ಇಡೀ ದೇಶದ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಹೆಣ್ಣುಮಕ್ಕಳು ತಾಳಿ ಸರ ಕಳಚುವಂತೆ, ಸಿಂಧೂರ ಅಳಿಸುವಂತೆ ಮಾಡುವುದು, ಪವಿತ್ರ ಜನಿವಾರವನ್ನು ಕಿತ್ತುಹಾಕುವಂತೆ ಹೇಳುವುದರಿಂದ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟಾಗುತ್ತದೆ. ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗದ ರೀತಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕ್ರಮಕೈಗೊಳ್ಳಬೇಕು” ಎಂದು ವಿಶ್ವ ಹಿಂದೂ ಪರಿಷತ್ ನ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ ತಿಳಿಸಿದ್ದಾರೆ.