ರೌಡಿಶೀಟರ್ ಮೆಲ್ರಿಕ್ ಡಿಸೋಜ ಹತ್ಯೆ ಪ್ರಕರಣ: ಆರು ಮಂದಿಗೆ ಜೀವಾವಧಿ ಶಿಕ್ಷೆ

Spread the love

ರೌಡಿಶೀಟರ್ ಮೆಲ್ರಿಕ್ ಡಿಸೋಜ ಹತ್ಯೆ ಪ್ರಕರಣ: ಆರು ಮಂದಿಗೆ ಜೀವಾವಧಿ ಶಿಕ್ಷೆ

ಮಂಗಳೂರು : ಗೋರಿಗುಡ್ಡೆ ಮೆಲ್ರಿಕ್ ಡಿಸೋಜ ಎಂಬಾತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರು ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ಪ್ರಕಟಿಸಿದೆ.

ಗೋರಿಗುಡ್ಡೆ ವೆಲೆನ್ಸಿಯಾ ನಿವಾಸಿ ನಿಶಾಕ್ ಪೂಜಾರಿ (30), ಗೋರಿಗುಡ್ಡೆ ಬೇಕಲ ಕಂಪೌಂಡ್ ನಿವಾಸಿ ವಿನೇಶ್ ಕುಮಾರ್ (32), ಮುಳಿಹಿತ್ಲು ಅರೆಕೆರೆಬೈಲ್ ಸುಬ್ಬಣ್ಣ ಶೆಟ್ಟಿ ಕಂಪೌಂಡ್ ನಿವಾಸಿ ಸಚಿನ್ ಶೆಟ್ಟಿ (23), ಜಪ್ಪಿನಮೊಗರು ತಂದೊಳಿಗೆ ಸಾಯಿ ನಿಲಯ ನಿವಾಸಿ ಗಣೇಶ್ ಕುಲಾಲ್ (27), ಗೋರಿಗುಡ್ಡೆ ಜನಾರ್ದನ ಕಂಪೌಂಡ್ ನಿವಾಸಿ ಪ್ರವೀಣ್ ಪೂಜಾರಿ (43), ಜೆಪ್ಪು ಕುಡುಪಾಡಿ ಮೋಹಿನಿ ಕಂಪೌಂಡ್ ನಿವಾಸಿ ಸಂದೀಪ್ ಶೆಟ್ಟಿ (34) ಶಿಕ್ಷೆಗೊಳಗಾದ ಅಪರಾಧಿಗಳು.

ಗೋರಿಗುಡ್ಡೆ ನಿವಾಸಿ ರೌಡಿಶೀಟರ್ ಮೆಲ್ರಿಕ್ ಡಿಸೋಜ(26) ಕೊಲೆಯಾದಾತ.

ಪ್ರಕರಣ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಮಲಿಂಗೇಗೌಡ 20 ಸಾಕ್ಷಿ ಹಾಗೂ 54 ದಾಖಲೆಗಳನ್ನು ಪರಿಗಣನೆಗೆ ತೆಗೆದುಕೊಂಡು ಅಪರಾಧಿಗಳಿಗೆ ಐಪಿಸಿ 302 (ಕೊಲೆ) ರಡಿ ಜೀವಾವಧಿ ಹಾಗೂ ತಲಾ ಮೂರು ಸಾವಿರ ರೂ. ದಂಡ, 109 (ಪ್ರೇರೇಪಣೆ)ರಡಿ ತಲಾ ಮೂರು ಸಾವಿರ ರೂ. ದಂಡ, 120 ಬಿ (ಸಂಚು)ರಡಿ ತಲಾ ಮೂರು ಸಾವಿರ ರೂ., 144 (ಅಕ್ರಮ ಕೂಟ)ರಡಿ ನಾಲ್ಕು ತಿಂಗಳು ಸಜೆ, 147ರಡಿ ಒಂದು ವರ್ಷ ಸಜೆ, 148ರಡಿ ಎರಡು ವರ್ಷ, 448 (ಅಕ್ರಮ ಪ್ರವೇಶ) ರಡಿ, 506 (ಬೆದರಿಕೆ)ರಡಿ ಒಂದು ವರ್ಷ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.

ದಂಡದ ಮೊತ್ತದಲ್ಲಿ 40 ಸಾವಿರ ರೂ. ಕೊಲೆಯಾದ ಮೆಲ್ರಿಕ್ ಅವರ ತಾಯಿಗೆ ಪರಿಹಾರ ರೂಪದಲ್ಲಿ ನೀಡಲು ನ್ಯಾಯಾಲಯ ಆದೇಶಿಸಿದೆ.

2016ರ ಮೇ ತಿಂಗಳಿನಲ್ಲಿ ಮಾರ್ನಮಿಕಟ್ಟೆ ಸಂದೀಪ್ ಶೆಟ್ಟಿಯನ್ನು ಮೆಲ್ರಿಕ್ ಡಿಸೋಜ ಹಾಗೂ ಆತನ ಸಹಚರರು ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದ್ದರು ಎಂದು ದೂರಲಾಗಿತ್ತು. ಇದಕ್ಕೆ ಪ್ರತೀಕಾರ ತೀರಿಸಲು ಸಂದೀಪ್ ಶೆಟ್ಟಿಯು 1ನೇ ಆರೋಪಿ ನಿಶಾಕ್ ಪೂಜಾರಿ ಬಳಿ ಹೇಳಿದ್ದು, ಆತ ಉಳಿದ ಆರೋಪಿಗಳನ್ನು ಒಟ್ಟು ಸೇರಿಸಿ ಮೆಲ್ರಿಕ್ ಕೊಲೆ ಕೃತ್ಯವೆಸಗಿದ್ದಾನೆ.

2016ರಲ್ಲಿ ಮಾರ್ನಮಿಕಟ್ಟೆಯಲ್ಲಿ ನಡೆದ ಕೊಲೆಯತ್ನ ಪ್ರಕರಣದಲ್ಲಿ ಮೆಲ್ರಿಕ್ ಜೈಲುಪಾಲಾಗಿ 2019ರ ಡಿಸೆಂಬರ್ 24ರಂದು ಬಿಡುಗಡೆಯಾಗಿದ್ದ. ಡಿ.25ರಂದು ಸಹಚರರ ಜತೆ ಮೆಲ್ರಿಕ್ ಹೊನಲು ಬೆಳಕಿನ ಕ್ರಿಕೆಟ್ ನೋಡಲು ಹೋಗಿದ್ದು, ಆತನನ್ನು ಸಹಪಾಠಿ ಸುಶೀಲ್ ಮನೆಗೆ ತಂದು ಬಿಟ್ಟಿದ್ದ.

ಇದೇ ಸಮಯಕ್ಕೆ ಹೊಂಚು ಹಾಕಿದ್ದ ಆರೋಪಿಗಳಾದ ನಿಶಾಕ್ ಪೂಜಾರಿ, ವಿನೇಶ್ ಕುಮಾರ್, ಸಚಿನ್ ಶೆಟ್ಟಿ, ಗಣೇಶ್ ಕುಲಾಲ್, ಪ್ರವೀಣ್ ಪೂಜಾರಿ ಮಧ್ಯರಾತ್ರಿ 1:15ರ ಸುಮಾರಿಗೆ ಮೆಲ್ರಿಕ್ನ ವೆಲೆನ್ಸಿಯಾ ಮನೆಗೆ ದಾಳಿ ಮಾಡಿ ಬಾಗಿಲನ್ನು ಕಾಲಿನಿಂದ ತುಳಿದು ಮನೆಯೊಳಗೆ ಪ್ರವೇಶಿಸಿದ್ದಾರೆ. ಈ ಸಂದರ್ಭ ಮೆಲ್ರಿಕ್ ಮತ್ತು ಆತನ ಅಜ್ಜಿ ಮಾತ್ರ ಮನೆಯಲ್ಲಿದ್ದರು. ಆರೋಪಿಗಳು ಏಕಾಏಕಿ ತಲವಾರಿನಿಂದ ದಾಳಿ ನಡೆಸಿ ಪರಾರಿಯಾಗಿದ್ದರು. ವಿಷಯ ತಿಳಿದ ಮೆಲ್ರಿಕ್ನ ಸಹಪಾಠಿ ಸುಶೀಲ್ ಕೂಡಲೇ ಮೆಲ್ರಿಕ್ನನ್ನು ಆಸ್ಪತ್ರೆಗೆ ಕೊಂಡೊಯ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಮೆಲ್ರಿಕ್ನನ್ನು ಆಸ್ಪತ್ರೆಗೆ ಸೇರಿಸಿದ ಸ್ನೇಹಿತ ಸುಶೀಲ್ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದು, ಕೊಲೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿ ಪಾಂಡೇಶ್ವರ ಠಾಣೆ ಇನ್ಸ್ಪೆಕ್ಟರ್ ಬೆಳ್ಳಿಯಪ್ಪ ಕೆ. ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಹರೀಶ್ಚಂದ್ರ ಉದ್ಯಾವರ ವಾದಿಸಿದ್ದರು.


Spread the love