ಲಂಚಕ್ಕೆ ಬೇಡಿಕೆ ಇರಿಸಿದ್ದ ಪಿಡಿಒ ಗೆ ಮೂರು ವರ್ಷ ಸಜೆ ಹಾಗೂ ರೂ 50000 ದಂಡ ವಿಧಿಸಿದ ನ್ಯಾಯಾಲಯ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಪ್ರೇಮ್ ಸಿಂಗ್ ನಾಯ್ಕ ರವರು ದಿನಾಂಕ 03-06-2019 ರಂದು 9/11 ದಾಖಲಾತಿಗೆ ಸಂಬಂಧಿಸಿದಂತೆ ರೂ.9.000/- ಲಂಚದ ಹಣಕ್ಕೆ ಬೇಡಿಕೆಯೊಡ್ಡಿದ್ದು, ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಮಂಗಳೂರು ಇಲ್ಲಿ ಮೊ.ಸಂ 05/2019 ಕಲಂ 7(ಎ) ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ-1988 (ತಿದ್ದುಪಡಿ ಕಾಯಿದೆ 2018) ರಂತೆ ಪ್ರಕರಣ ದಾಖಲಾಗಿ ಯಶಸ್ವಿ ಟ್ರ್ಯಾಪ್ ಮಾಡಲಾಗಿರುತ್ತದೆ.
ಈ ಪ್ರಕರಣವು ಮಾನ್ಯ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮಂಗಳೂರು ಇಲ್ಲಿ ಸ್ಪೇಶಲ್ ಕೇಸ್ ಸಂಖ್ಯೆ 170/2020 ರಂತೆ ವಿಚಾರಣೆ ನಡೆಸಿ ದಿ:13-12-2024 ರಂದು ಘನ ನ್ಯಾಯಾಲಯ ಅಂತಿಮ ತೀರ್ಪು ನೀಡಿದ್ದು, ತೀರ್ಪಿನಲ್ಲಿ ಆರೋಪಿ ಪ್ರೇಮ್ ಸಿಂಗ್ ನಾಯ್ಕ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇವರಿಗೆ 03 ವರ್ಷಗಳ ಸಾದಾ ಸಜೆ ಹಾಗೂ ರೂ 50,000/- (ಐವತ್ತು ಸಾವಿರ) ದಂಡ ವಿಧಿಸಿದ್ದು, ಆರೋಪಿಯು ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ 01 ತಿಂಗಳ ಕಾಲ ಸಾದಾ ಸಜೆಗೆ ಆದೇಶಿಸಿ ಅಂತಿಮ ತೀರ್ಪು ಹೊರಡಿಸಿರುತ್ತದೆ.
ಸದರಿ ಪ್ರಕರಣದಲ್ಲಿ ಪೊಲೀಸ್ ನಿರೀಕ್ಷಕರಾದ ಮೋಹನ್ ಕೊಟ್ಟಾರಿ ಮತ್ತು ಯೋಗೀಶ್ ಕುಮಾರ್ ಬಿ. ಸಿ ರವರು ತನಿಖೆ ಕೈಗೊಂಡಿದ್ದು, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್.ಎಂ ರವರು ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ. ಸದರಿ ಪ್ರಕರಣದಲ್ಲಿ ಶ್ರೀ ರವೀಂದ್ರ ಮುನ್ನಿಪಾಡಿ, ವಿಶೇಷ ಸಾರ್ವಜನಿಕ ಅಭಿಯೋಜಕರು, ಕರ್ನಾಟಕ ಲೋಕಾಯುಕ್ತ ಮಂಗಳೂರು ಇವರು ಸರ್ಕಾರದ ಪರವಾಗಿ ವಾದ ಮಂಡಿಸಿರುತ್ತಾರೆ.