ಲಂಚ ಸ್ವೀಕರಿಸುತ್ತಿದ್ದಾಗ ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ

Spread the love

ಲಂಚ ಸ್ವೀಕರಿಸುತ್ತಿದ್ದಾಗ ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ

ಮಂಗಳೂರು: ಶೌಚಾಲಯ ನಿರ್ಮಾಣ ಕಾಮಗಾರಿಯ ಫೈನಾನ್ಸಿಯಲ್ ಬಿಡ್ ತೆರೆಯಲು ಟೆಂಡರ್ ಮೊತ್ತದಲ್ಲಿ 25 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಸೂಪರಿಂಟೆಂಡಿಂಗ್ ಇಂಜಿನಿಯರಿಂಗ್ ಕಚೇರಿಯಲ್ಲಿ ತಾಂತ್ರಿಕ ಸಹಾಯಕ ಸೂರ್ಯ ನಾರಾಯಣ್ ಭಟ್ ಮತ್ತು ಅಸಿಸ್ಟೆಂಟ್ ಇಂಜಿನಿಯರ್ ಸುಧೀನ್ ಬಂಧಿತ ಆರೋಪಿಗಳು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಎಂಬಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡದ ಎರಡು ಕೊಠಡಿ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿಯ ಟೆಂಡರ್‌ಗೆ (52.58 ಲಕ್ಷ ) ಮೂಡಿಗೆರೆ ತಾಲೂಕಿನ ಬಾಪುನಗರದ ಅಬೂಬಕರ್ ಎಂಬವರ ಪುತ್ರ ಆದಂ ಬಿಡ್ ಮಾಡಿದ್ದರು.

ತಂದೆ ಅಬೂಬಕರ್‌ಗೆ ವಯಸ್ಸಾದ ಕಾರಣ ತಂದೆಯ ಪರವಾಗಿ ಈ ಬಿಡ್‌ನ್ನು ಪುತ್ರ ಆದಂ ಆನ್‌ಲೈನ್‌ನಲ್ಲಿ ಟೆಂಡರ್ ಸಲ್ಲಿಸಿದ್ದರು. ಆದಂ ಸಹ ಬಿ.ಇ. ಸಿವಿಲ್ ವ್ಯಾಸಂಗ ಮಾಡಿದ್ದು, ತಂದೆಯೊಂದಿಗೆ 10 ವರ್ಷಗಳಿಂದ ಕಂಟ್ರಾಕ್ಟ್ ಕೆಲಸ ಮಾಡಿಕೊಂಡಿದ್ದರು. ತಾಂತ್ರಿಕ ಬಿಡ್‌ನ್ನು ತೆರೆದಾಗ ಕಾಮಗಾರಿಯು ಆದಂ ತಂದೆಗೆ ಮಂಜೂರಾಗಿದೆ.

ಸುಮಾರು 10 ದಿನಗಳ ಹಿಂದೆ ಆರ್‌ಡಿಪಿಆರ್(ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ) ಟೆಕ್ನಿಕಲ್ ಅಸಿಸ್ಟೆಂಟ್ ಸೂರ್ಯನಾರಾಯಣ ಭಟ್ ಮಂಗಳೂರಿನ ಕಚೇರಿಯಿಂದ ಅದೇ ಇಲಾಖೆಯ ಅಸಿಸ್ಟೆಂಟ್ ಇಂಜಿನಿಯರ್ ಸುಧೀನ್ ಎಂಬವರ ಮೊಬೈಲ್‌ನಿಂದ ಕರೆ ಮಾಡಿ, ‘ಈ ನಿಮ್ಮ ಕಾಮಗಾರಿಯ ಫೈನಾನ್ಸಿಯಲ್ ಬಿಡ್ ತೆರೆಯಲು ಟೆಂಡರ್ ಮೊತ್ತದ ಶೇ.1ರಷ್ಟು (50 ಸಾವಿರ ರೂ.) ಹಣವನ್ನು ಕಚೇರಿಯ ಸೂಪರಿಡೆಂಟ್ ಇಂಜಿನಿಯರ್ ರವೀಂದ್ರ ಕಿಣಿ ಕೇಳುತ್ತಿದ್ದಾರೆ’ ಎಂದು ಹೇಳಿದರು.

ಆಗ ಆದಂ ಹಣದ ವಿಚಾರವಾಗಿ ಚರ್ಚೆ ಮಾಡಿದ್ದಾರೆ. ಕೊನೆಗೆ ‘ಶೇ.0.5ರಷ್ಟು (25 ಸಾವಿರ ರೂ.)ತೆಗೆದುಕೊಂಡು ಬನ್ನಿ, ಬಿಡ್ಡಿಂಗ್ ಕಾಮಗಾರಿ ಆಗಿದ್ದರಿಂದ ಕಡಿಮೆ ಮಾಡಬಹುದು’ ಎಂದು ಸೂರ್ಯನಾರಾಯಣ ಭಟ್ ಹೇಳಿದರು.

ನಂತರ ಮಂಗಳೂರು ಎಸಿಬಿ ಕಚೇರಿಗೆ ಆದಂ ತೆರಳಿ, ಮೂವರು ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರು. ಎಸಿಬಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅ.26ರಂದು ಸಂಜೆ ಮಂಗಳೂರು ಮಹಾನಗರದ ಕಟ್ಟಡದಲ್ಲಿರುವ ಆರ್‌ಡಿಪಿಆರ್ ವೃತ್ತ ಮಂಗಳೂರು ಇದರ ಸೂಪರಿಂಟೆಂಡಿಂಗ್ ಇಂಜಿನಿಯರಿಂಗ್ ಕಚೇರಿಯಲ್ಲಿ ತಾಂತ್ರಿಕ ಸಹಾಯಕ ಸೂರ್ಯನಾರಾಯಣ ಭಟ್ ಮತ್ತು ಅಸಿಸ್ಟೆಂಟ್ ಇಂಜಿನಿಯರ್ ಸುಧೀನ್ ಇವರಿಬ್ಬರು ಇದ್ದ ವೇಳೆ ಆದಂ ಬಳಿಯಲ್ಲಿದ್ದ 25 ಸಾವಿರ ರೂ. ಲಂಚದ ಹಣವನ್ನು ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ಪಂಚರೊಂದಿಗೆ ದಾಳಿ ನಡೆಸಿ, ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತಾಂತ್ರಿಕ ಸಹಾಯಕ ಸೂರ್ಯನಾರಾಯಣ್ ಭಟ್ ಬ್ಯಾಗ್‌ನಲ್ಲಿ ಹೆಚ್ಚುವರಿ 26 ಸಾವಿರ ರೂ. ಪತ್ತೆಯಾಗಿದ್ದು, ಅದನ್ನು ಅಧಿಕಾರಿಗಳು ವಶಪಡಿಸಿಕೊಳ್ಳಲಾಗಿದೆ.

ಎಸಿಬಿ ಎಸ್ಪಿ ಶ್ರುತಿ ಎನ್.ಎಸ್, ಡಿವೈಎಸ್ಪಿ ಸುಧೀರ್ ಎಂ.ಹೆಗ್ಡೆ, ಉಡುಪಿ ಡಿವೈಎಸ್ಪಿ ದಿನಕರ್ ಶೆಟ್ಟಿ, ಇನ್‌ಸ್ಪೆಕ್ಟರ್ ಯೊಗೀಶ್‌ ಕುಮಾರ್ ಬಿ.ಸಿ., ಸಿಬ್ಬಂದಿ ರಾಧಾಕೃಷ್ಣ ಡಿ.ಎ, ಹರಿಪ್ರಸಾದ್, ಪ್ರಶಾಂತ್, ಉಮೇಶ್, ರಾಮಕೃಷ್ಣ ಕೆ., ವೈಶಾಲಿ, ರಾಕೇಶ್ ವಾಗ್ಮನ್, ಗಣೇಶ್, ರಾಜೇಶ್, ಸುರೇಶ್ ನಾಯಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


Spread the love