ಲಂಚ ಸ್ವೀಕಾರ ಆರೋಪ: ಮಂಗಳೂರು ಉತ್ತರ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ಸಹಿತ ಇಬ್ಬರ ಬಂಧನ

Spread the love

ಲಂಚ ಸ್ವೀಕಾರ ಆರೋಪ: ಮಂಗಳೂರು ಉತ್ತರ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ಸಹಿತ ಇಬ್ಬರ ಬಂಧನ

ಮಂಗಳೂರು: ವ್ಯಕ್ತಿಯೊಬ್ಬರ ಸ್ಕೂಟರ್‌ನ್ನು ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಿಂದ ಬಿಡುಗಡೆ ಗೊಳಿಸುವ ಸಲುವಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಠಾಣೆಯ ಇನ್‌ಸ್ಪೆಕ್ಟರ್ ಮುಹಮ್ಮದ್ ಶರೀಫ್ ಮತ್ತು ಕಾನ್‌ಸ್ಟೇಬಲ್ ಪ್ರವೀಣ್ ನಾಯ್ಕ ಅವರನ್ನು ಮಂಗಳೂರು ಲೋಕಾಯುಕ್ತ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ನ್ಯಾಯಾಲಯದ ಆದೇಶದಂತೆ ಸ್ಕೂಟರ್ ಬಿಡುಗಡೆಗೊಳಿಸಲು ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ಮುಹಮ್ಮದ್ ಶರೀಫ್‌ ರನ್ನು ಭೇಟಿಯಾದಾಗ 5,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಲಂಚದ ಹಣ ಕಡಿಮೆ ಮಾಡಿ ಎಂದಾಗ ಮುಹಮ್ಮದ್ ಶರೀಫ್ ಠಾಣೆಯ ರೈಟರ್ ಕೂಡ ಆಗಿರುವ ಹೆಡ್‌ಕಾನ್‌ಸ್ಟೇಬಲ್ ನಾಗರತ್ನರನ್ನು ಭೇಟಿ ಮಾಡಲು ಸೂಚಿಸಿದರು. ಅದರಂತೆ ನಾಗರತ್ನರನ್ನು ಭೇಟಿಯಾದಾಗ ಅವರು ಸ್ಕೂಟರ್ ಸವಾರನಿಗೆ ಅವಾಚ್ಯ ಶಬ್ದದಿಂದ ಬೈದು 3,000 ರೂ. ಲಂಚಕ್ಕೆ ಬೇಡಿಕೆ ಇಟ್ಟರು ಎನ್ನಲಾಗಿದೆ. ಆದರೆ ಹಣ ಕೊಡಲು ಒಲ್ಲದ ಸ್ಕೂಟರ್ ಸವಾರನು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣಿಗೆ ದೂರು ನೀಡಿದ್ದರು.

ಸೋಮವಾರ ಇನ್‌ಸ್ಪೆಕ್ಟರ್ ಮುಹಮ್ಮದ್ ಶರೀಫ್ ಮತ್ತು ಕಾನ್‌ಸ್ಟೇಬಲ್ ಪ್ರವೀಣ್ ನಾಯ್ಕ 3,000 ರೂ. ಲಂಚದ ಹಣವನ್ನು ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಲೋಕಾಯುಕ್ತ ಪೊಲೀಸ್ ಇಲಾಖೆಯ ಪ್ರಭಾರ ಅಧೀಕ್ಷಕ ಡಾ.ನಂದಿನಿ ಬಿ.ಎನ್. ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಡಾ. ಗಾನ ಪಿ ಕುಮಾರ್, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ ಎ, ಚಂದ್ರಶೇಖರ್ ಕೆ.ಎನ್. ಮತ್ತು ಉಡುಪಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ ಪಾಲ್ಗೊಂಡಿದ್ದರು.


Spread the love