ಲಂಚ ಸ್ವೀಕಾರ ಪ್ರಕರಣ ; ಗ್ರಾಮ ಕರಣಿಕ ಸಹಿತ ಇಬ್ಬರಿಗೆ ಶಿಕ್ಷೆ
ಮಂಗಳೂರು: ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಕರಣಿಕ ಸಹಿತ ಇಬ್ಬರು ಅಪರಾಧಿಗಳಿಗೆ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಶಿಕ್ಷೆಗೊಳಗಾದವರನ್ನು ಬಂಟ್ವಾಳ ತಾಲೂಕು ನಾವೂರು ಗ್ರಾಪಂನಲ್ಲಿ ಗ್ರಾಮ ಕರಣಿಕನಾಗಿದ್ದ ಎನ್ ಹೊನ್ನಪ್ಪ (33) ಹಾಗೂ ಖಾಸಗಿ ವ್ಯಕ್ತಿ ವಿಕ್ಟರ್ ಪಿಂಟೊ (76) ಎಂದು ಗುರುತಿಸಲಾಗಿದೆ.
ಹೋನ್ನಪ್ಪ ಜಮೀನಿನ ಖಾತಾ ಬದಲಾವಣೆ ಮಾಡಲು ಸುನೀತ ಡಿಸೋಜಾ ಎಂಬವರಿಂದ 2011 ಅ 31ರಂದು 3 ಸಾವಿರ ರೂ ಲಂಚ ಪಡೆದಿದ್ದು, ಇದಕ್ಕೆ ವಿಕ್ಟರ್ ಪಿಂಟೊ ಸಹಕಾರ ನೀಡಿದ್ದರು ಎನ್ನಲಾಗಿದೆ. ಅಂದಿನ ಲೋಕಾಯುಕ್ತ ಇನ್ಸ್ ಪೆಕ್ಟರ್ ಆಗಿದ್ದ ಉದಯ ನಾಯಕ್ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.
ನ್ಯಾಯಾಧೀಶ ಬಿ. ಮುರಳೀಧರ ಪೈ ಪ್ರಕರಣದ ವಿಚಾರಣೆ ನಡೆಸಿ ಗ್ರಾಮ ಕರಣಿಕ ಎನ್ ಹೊನ್ನಪ್ಪನಿಗೆ 1 ವರ್ಷ ಸಾದಾ ಸಜೆ ಮತ್ತು ರೂ 10000 ದಂಡ ಹಾಗೂ 76 ರ ಹರೆಯದ ವಿಕ್ಟರ್ ಪಿಂಟೊ ಆನಾರೋಗ್ಯದಿಂದ ಬಳಲುತ್ತಿರುವ ಕಾರಣ 9 ದಿನಗಳ ಸಾದಾ ಸಜೆ ಮತ್ತು ರೂ 5000 ದಂಡ ವಿಧಿಸಿದ್ದಾರೆ.
ಇಬ್ಬರೂ ಅಪರಾಧಿಗಳು ದಂಡ ತೆರಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಸಜೆ ಅನುಭವಿಸಬೇಕೆಂದು ನ್ಯಾಯಾಯ ಆದೇಶಿಸಿದೆ. ಮಂಗಳೂರು ಲೋಕಾಯುಕ್ತ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ, ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ವಾದಿಸಿದ್ದರು.