ಲಕ್ಷ ಯೂನಿಟ್ ರಕ್ತ ಸಂಗ್ರಹಿಸುವ ಮೂಲಕ ದೇಶದಲ್ಲೇ ಕ್ರಾಂತಿ ; ರಘುಪತಿ ಭಟ್
ಉಡುಪಿ : ರಕ್ತದಾನದ ಬಗ್ಗೆ ಜನತೆಯಲ್ಲಿ ಈಗಲೂ ಅಜ್ಞಾನ ಇರುವ ಸಂದರ್ಭದಲ್ಲಿ ಒಂದು ಲಕ್ಷಕ್ಕೂ ಅಧಿಕ ಯೂನಿಟ್ ರಕ್ತ ಸಂಗ್ರಹಿಸಿದ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಮತ್ತು ಮೊಗವೀರ ಯುವ ಸಂಘಟನೆ ಕಾರ್ಯ ದೇಶದಲ್ಲೇ ಅಪೂರ್ವವಾದುದು. ಲಕ್ಷ ಯೂನಿಟ್‍ಗಿಂತ ಅಧಿಕ ರಕ್ತ ಸಂಗ್ರಹಿಸುವ ಮೂಲಕ ದೇಶದಲ್ಲೇ ಕ್ರಾಂತಿ ಮಾಡಲಾಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಮತ್ತು ಮೊಗವೀರ ಯುವ ಸಂಘಟನೆ ಆಶ್ರಯದಲ್ಲಿ ಗುರುವಾರ ಬ್ರಹ್ಮಾವರದಲ್ಲಿ ಆಯೋಜಿಸಲಾದ ಒಂದು ಲಕ್ಷ ಯೂನಿಟ್ ರಕ್ತದಾನ ಮಹಾಕ್ರಾಂತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ರಕ್ತದ ಅಗತ್ಯತೆ ದಿನೇ ದಿನೇ ಹೆಚ್ಚಾಗುತ್ತಿದೆ. ಬೇಡಿಕೆಗೆ ಅನುಗುಣವಾಗಿ ರಕ್ತ ಪೂರೈಕೆ ಕಷ್ಟಸಾಧ್ಯ. ವಿಜ್ಞಾನ ಎಷ್ಟೇ ಮುಂದುವರಿದರೂ ರಕ್ತಕ್ಕೆ ಪರ್ಯಾಯ ಉತ್ಪಾದನೆ ಸಾಧ್ಯವಿಲ್ಲ. ಸ್ವಯಂಪ್ರೇರಿತ ರಕ್ತದಾನಿಗಳಿಂದಲೇ ರಕ್ತ ಪೂರೈಕೆ ಆಗಬೇಕಾಗಿದೆ. ಈ ಉಭಯ ಸಂಘಟನೆಗಳಿಂದ ಸಂಗ್ರಹವಾದ ರಕ್ತ ಸುಮಾರು 50 ಸಾವಿರ ಮಂದಿಯ ಜೀವ ಉಳಿಸಿದೆ ಎಂದರು.
ಖಾಸಗಿ ಸಂಘಸಂಸ್ಥೆಗಳ ಸಹಕಾರದಿಂದ ನಡೆಯುವ ರಕ್ತದಾನ ಶಿಬಿರಗಳಿಗೆ ಜಿಲ್ಲಾಡಳಿತ ಸಹಕರಿಸಬೇಕು ಎಂದೂ ಶಾಸಕ ಭಟ್ ಆಶಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ. ಶಂಕರ್, ಕಳೆದ 10 ವರ್ಷದ ಅವಧಿಯಲ್ಲಿ ತಮ್ಮ ಸಂಸ್ಥೆ ಹಾಗೂ ಮೊಗವೀರ ಯುವ ಸಂಘಟನೆ ಸಹಯೋಗದೊಂದಿಗೆ ಒಂದು ಲಕ್ಷಕ್ಕಿಂತಲೂ ಅಧಿಕ ಯೂನಿಟ್ ರಕ್ತ ಸಂಗ್ರಹಿಸಲಾಗಿದೆ. ಹೀಗೆ ಸಂಗ್ರಹಿಸಿದ ಶೇ. 25ರಷ್ಟು ರಕ್ತವನ್ನು ಜಿಲ್ಲಾಸ್ಪತ್ರೆಗೆ ನೀಡಲಾಗುತ್ತಿದೆ. ಆದರೂ ಜಿಲ್ಲಾಡಳಿತ ಸೂಕ್ತ ಸಹಕಾರ ನೀಡುತ್ತಿಲ್ಲ ಎಂದು ವಿಷಾದಿಸಿದರು.
ಮಣಿಪಾಲ `ಮಾಹೆ’ ಕುಲಸಚಿವ ಡಾ. ನಾರಾಯಣ ಸಭಾಹಿತ್ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಾವರ ತಹಶೀಲ್ದಾರ್ ಭಾರತಿ, ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ಉಡುಪಿ ರೆಡ್‍ಕ್ರಾಸ್ ಅಧ್ಯಕ್ಷ ಜಯಕರ ಶೆಟ್ಟಿ ಕುಂದಾಪುರ, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ವಿನಯ ಕರ್ಕೇರ, ಉದ್ಯಮಿ ಆನಂದ ಕುಂದರ್, ದ. ಕ. ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ ಸುವರ್ಣ, ಸಂಘಟಕ ಯತೀಶ ಬೈಕಂಪಾಡಿ ಅಭ್ಯಾಗತರಾಗಿದ್ದರು.
ಈ ಸಂದರ್ಭದಲ್ಲಿ ಅತ್ಯಧಿಕ ಬಾರಿ ರಕ್ತದಾನ ಮಾಡಿದ ದಾನಿಗಳು, ಕಳೆದ 10 ವರ್ಷದಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರನ್ನು ಗೌರವಿಸಲಾಯಿತು. ಟ್ರಸ್ಟ್ ಮತ್ತು ಸಂಘಟನೆ ವತಿಯಿಂದ ಈಚೆಗೆ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರಳವಾಗಿ ಮದುವೆಯಾದ 20 ಜೋಡಿಗಳಿಗೆ ಸರ್ಕಾರ ಪ್ರೋತ್ಸಾಹಧನ ನೀಡಲಾಯಿತು.
ಮೊಗವೀರ ಯುವ ಸಂಘಟನೆ ಮಾಜಿ ಅಧ್ಯಕ್ಷ ಗಣೇಶ ಕಾಂಚನ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸತೀಶ ಮರಕಾಲ ವಂದಿಸಿದರು. ಉಪಾಧ್ಯಕ್ಷ ಶಿವರಾಮ ಕೆ. ಎಂ. ನಿರೂಪಿಸಿದರು.
ಅದಕ್ಕೂ ಮುನ್ನ ನಡೆದ ರಕ್ತದಾನ ಶಿಬಿರದಲ್ಲಿ 500 ಯೂನಿಟ್ ರಕ್ತ ಸಂಗ್ರಹಿಸಲಾಯಿತು.