ಲಾಕ್ ಡೌನ್ ಉಲ್ಲಂಘನೆ ; ಉಡುಪಿ ನಗರ ಪೊಲೀಸರಿಂದ 13 ವಾಹನಗಳು ಜಪ್ತಿ

Spread the love

ಲಾಕ್ ಡೌನ್ ಉಲ್ಲಂಘನೆ ; ಉಡುಪಿ ನಗರ ಪೊಲೀಸರಿಂದ 13 ವಾಹನಗಳು ಜಪ್ತಿ

ಉಡುಪಿ: ಮಾರಕ ಕೊರೊನಾ ವೈರಸ್ ರಾಜ್ಯದ್ಯಂತ ಆತಂಕ ಸೃಷ್ಟಿಸಿದ್ದು, ಜನತೆ ಆತಂಕಗೊಂಡಿದ್ದಾರೆ. ಸೋಂಕು ಹರಡದಂತೆ ದೇಶಾದ್ಯಂತ ಏ.14ರವರೆಗೆ ಲಾಕ್ ಡೌನ್ ಘೋಷಿಸಲಾಗಿದೆ. ಆದರೆ, ಕೆಲವೊಂದು ವ್ಯಕ್ತಿಗಳು  ಮಾತ್ರ ಲಾಕ್ ಡೌನ್ ಆದೇಶಕ್ಕೆ ಕ್ಯಾರೆ ಅನ್ನದೇ ಉಲ್ಲಂಘಿಸುತ್ತಿದ್ದಾರೆ.

ಕೊರೋನಾ ವೈರಾಣು ಸೋಂಕು ಹರಡುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಜಾರಿಗೊಳಿಸಲಾಗಿರುವ ಲಾಕ್ ಡೌನ್ ಉಲ್ಲಂಘಿಸಿ ರಸ್ತೆಗಿಳಿದವರಿಂದ ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ  ಬುಧವಾರ ಒಂದು ಬೊಲೆರೋ ವಾಹನ, 13 ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಉಡುಪಿ ನಗರ ಠಾಣಾ ವ್ಯಾಪ್ತಿಯ ಆದಿ ಉಡುಪಿ, ಬೀಡಿನಗುಡ್ಡೆ, ಕಲ್ಸಂಕ, ಕರಾವಳಿ ಜಂಕ್ಷನ್ ಬಳಿ ಪೊಲೀಸರು ತಪಾಸಣೆ ವೇಳೆ ರಸ್ತಗಳಲ್ಲಿ ಅನಾವಶ್ಯಕವಾಗಿ ವಾಹನಗಳಲ್ಲಿ ಓಡಾಡಿದವರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಠಾಣಾ ಠಾಣಾಧಿಕಾರಿ ಸಕ್ತಿವೇಲು ಹೇಳಿದ್ದಾರೆ.

 ಕೊರೊನಾ ಸೋಂಕು ಹರಡದಂತೆ ತಡೆಯಲು ಲಾಕ್ ಡೌನ್ ಜಾರಿ ಮಾಡಲಾಗಿದ್ದು ಬೈಕ್ ಕಾರು ಸೇರಿದಂತೆ ಇತರೆ ವಾಹನಗಳ ಸವಾರರು ಅನಗತ್ಯವಾಗಿ ರಸ್ತೆ ಮೇಲೆ ಓಡಾಡುವುದನ್ನು ನಿರ್ಬಂಧಿಸಲಾಗಿದೆ. ಸುಖಾ ಸುಮ್ಮನೆ ಓಡಾಡುವವರ ವಾಹನ ಜಪ್ತಿ ಮಾಡಲಾಗುತ್ತಿದೆ. ಕೊರೊನಾ ಸೋಂಕು ಹರಡದಂತೆ ತಡೆಯಲು ಎಲ್ಲರೂ ಕೈ ಜೋಡಿಸಬೇಕು, ಅನಗತ್ಯವಾಗಿ ಓಡಾಡುವುದನ್ನು ಕೈಬಿಡಬೇಕು ಎಂದು ವಾಹನ ಸವಾರರಲ್ಲಿ ಅವರು ಮನವಿ ಮಾಡಿದ್ದಾರೆ.


Spread the love