ಲಾಕ್ ಡೌನ್ : ಎಂಟು-ಹತ್ತು ಮಂದಿ ದೇವಸ್ಥಾನಕ್ಕೆ ಹೋಗಿ ಮದುವೆಯಾಗಲು ಅಭ್ಯಂತರವಿಲ್ಲ – ಸಚಿವ ಕೋಟ

Spread the love

ಲಾಕ್ ಡೌನ್ : ಎಂಟು-ಹತ್ತು ಮಂದಿ ದೇವಸ್ಥಾನಕ್ಕೆ ಹೋಗಿ ಮದುವೆಯಾಗಲು ಅಭ್ಯಂತರವಿಲ್ಲ – ಸಚಿವ ಕೋಟ

ಕುಂದಾಪುರ: ಈಗಿರುವ ವ್ಯವಸ್ಥೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಎಂಟು-ಹತ್ತು ಮಂದಿ ದೇವಸ್ಥಾನಕ್ಕೆ ಹೋಗಿ ಮದುವೆಯಾದರೆ ಯಾವುದೇ ಅಭ್ಯಂತರವಿಲ್ಲ. ಈಗಾಗಲೇ ನಿಶ್ಚಯವಾಗಿರುವ ಅನೇಕ ಮದುವೆಗಳು ಕಡಿಮೆ ಜನರ ಉಪಸ್ಥಿತಿಯಲ್ಲಿ ನಡೆದಿವೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ. ಈ ರೀತಿಯ ಮದುವೆಗಳಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ತೊಂದರೆ ಕೊಟ್ಟಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಮದುವೆಯಾಗಿದ್ದಾರೆ. ಆದರೆ ಅವರ ಮದುವೆಯಲ್ಲಿ ಎಷ್ಟು ಜನ ಆಗಿದ್ದಾರೆಂದು ನನಗೆ ತಿಳಿದಿಲ್ಲ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶನಿವಾರ ತಾಲೂಕು ಪಂಚಾಯಿತಿಯಲ್ಲಿ ನಡೆದ ಅಧಿಕಾರಿಗಳ ಸಭೆಯ ಬಳಿಕ ನಿಖಿಲ್ ಕುಮಾರಸ್ವಾಮಿ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಾಣ್ಮೆಯ ಉತ್ತರ ನೀಡಿದರು.

ಯಕ್ಷಗಾನ ಕಲಾವಿದರ ಸಂಕಷ್ಟದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಧಾರ್ಮಿಕದತ್ತಿ ಇಲಾಖೆಗೊಳಪಟ್ಟ ಎಲ್ಲಾ ದೇವಸ್ಥಾನಗಳ ಅಧೀನದಲ್ಲಿರುವ ಮೇಳಗಳ ಯಕ್ಷಗಾನ ಕಲಾವಿದರಿಗೆ ಸಂಬಳವನ್ನು ಕಡಿತಗೊಳಿಸದೆ ಕೊಡಿ ಎನ್ನುವುದಾಗಿ ಆದೇಶ ಹೊರಡಿಸಿದ್ದೇನೆ. ಪೆರ್ಡೂರು ಹಾಗೂ ಸಾಲಿಗ್ರಾಮ ಮೇಳಗಳಲ್ಲಿ ದೇವಸ್ಥಾನ ಹಾಗೂ ಮೇಳಕ್ಕೆ ನೇರ ಸಂಬಂಧಗಳಿಲ್ಲ. ಈಗಾಗಲೇ ಕಲಾವಿದರು ಮನವಿಗಳನ್ನು ಕೊಟ್ಟಿದ್ದಾರೆ. ಅದಕ್ಕೇನು ಮಾಡಬೇಕು ಎನ್ನುವುದನ್ನು ಯೋಚನೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಚೆಕ್‍ಪೋಸ್ಟ್‍ಗಳಲ್ಲಿನ ಗೊಂದಲಗಳ ಬಗ್ಗೆ ಉತ್ತರಿಸಿ ಅವರು, ಮರಣಕ್ಕೆ ಸಂಬಂಧಪಟ್ಟಂತೆ ಹಾಗೂ ತುಂಬು ಗರ್ಭಿಯಣಿಯವರಿಗೆ ಚೆಕ್‍ಪೋಸ್ಟ್‍ಗಳಲ್ಲಿ ವಿನಾಯಿತಿ ನೀಡಲಾಗಿದೆ. ಸೂಕ್ತ ದಾಖಲೆಗಳನ್ನು ನೀಡಿದರೆ ಚೆಕ್‍ಪೋಸ್ಟ್‍ನಲ್ಲೇ ಅವರನ್ನು ಪ್ರಾಥಮಿಕ ವೈದ್ಯಕೀಯ ಪರೀಕ್ಷೆಗೊಳಪಡಿಸಿ ಬಿಡುವ ಕೆಲಸಗಳಾಗುತ್ತಿವೆ. ಕ್ಯಾನ್ಸರ್ ಸೇರಿದಂತೆ ಗಂಭೀರ ಚಿಕಿತ್ಸೆಗೆ ಹೋಗುವ ಯಾರಿಗೂ ತಡೆ ಹಾಕಿಲ್ಲ. ಒಂದೇ ದಿನದಲ್ಲಿ 34 ಪಾಸಿಟಿವ್ ಪ್ರಕರಣಗಳು ಕಾಸರಗೋಡಿನಲ್ಲಿ ವರದಿಯಾದ ಬಳಿಕ ಕೇರಳ ಗಡಿಯನ್ನು ಬಂದ್ ಮಾಡಿದ್ದೇವೆ. ಸುಖಾಸುಮ್ಮನೆ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಬರುವಂತಹ ಸ್ಥಿತಿ ಇಲ್ಲ. ಎಲ್ಲರಿಗೂ ಮನವರಿಕೆಯಾಗಿದೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದರು.

ಕೆಲವರು ತರಕಾರಿ ವಾಹನಗಳಲ್ಲಿ ಬರುತ್ತಿರುವುದು ಗಮನಕ್ಕೆ ಬಂದಿದೆ. ಸರಕು ವಾಹನಗಳಲ್ಲಿ ಬದಲಿ ಚಾಲಕರೆಂದು ಬರುವ ಪ್ರಸಂಗಳು ನಡೆದಿದೆ. ಅದಕ್ಕಾಗಿಯೇ ಇದೀಗ ಒಬ್ಬರೆ ಚಾಲಕರಿಗೆ ಅನುಮತಿ ಕೊಡಲು ಸೂಚನೆ ನೀಡಲಾಗಿದೆ. ಚೆಕ್‍ಪೋಸ್ಟ್‍ಗಳಲ್ಲಿ ಪೊಲೀಸರ ಕಣ್ತಪ್ಪಿಸಿ ಯಾರು ಬರುತ್ತಾರೊ ಅಂತವರನ್ನು ಕೂಡಲೇ ಕ್ವಾರಂಟೈನ್‍ಗೆ ಒಳಪಡಿಸುತ್ತೇವೆ ಎಂದು ಕೋಟ ಖಡಕ್ ಎಚ್ಚರಿಕೆ ನೀಡಿದರು.

ಮೀನುಗಾರರಿಗೆ ಆರ್ಥಿಕವಾಗಿ ಅನುಕೂಲವಾಗುವ ನಿಟ್ಟಿನಲ್ಲಿ ಕಳೆದ 3 ವರ್ಷಗಳಿಂದ ನೀಡಬೇಕಿರುವ `ಉಳಿತಾಯ ಪರಿಹಾರ ಯೋಜನೆ’ಯ ಕೇಂದ್ರದ 5.5 ಕೋರೂ. ಹಣವನ್ನು ಕಳೆದ ತಿಂಗಳು ಬಿಡುಗಡೆ ಮಾಡಿದ್ದು, ರಾಜ್ಯದ 5.5 ಕೋ.ರೂ. ಪಾಲನ್ನು ಕೂಡ ಶೀಘ್ರ ಬಿಡುಗಡೆ ಮಾಡಿ, ಆದಷ್ಟು ಬೇಗ ಮೀನುಗಾರರ ಖಾತೆಗೆ ಹಾಕಲಾಗುವುದು.


Spread the love