Home Mangalorean News Kannada News ಲಾಕ್ ಡೌನ್ ವೇಳೆ ಪೊಲೀಸ್ ಬಲಪ್ರಯೋಗ ಬಳಕೆಗೆ ಅವಕಾಶ ನೀಡಬೇಡಿ: ಬೊಮ್ಮಾಯಿ ಜನತೆಗೆ ಎಚ್ಚರಿಕೆ

ಲಾಕ್ ಡೌನ್ ವೇಳೆ ಪೊಲೀಸ್ ಬಲಪ್ರಯೋಗ ಬಳಕೆಗೆ ಅವಕಾಶ ನೀಡಬೇಡಿ: ಬೊಮ್ಮಾಯಿ ಜನತೆಗೆ ಎಚ್ಚರಿಕೆ

Spread the love

ಲಾಕ್ ಡೌನ್ ವೇಳೆ ಪೊಲೀಸ್ ಬಲಪ್ರಯೋಗ ಬಳಕೆಗೆ ಅವಕಾಶ ನೀಡಬೇಡಿ: ಬೊಮ್ಮಾಯಿ ಜನತೆಗೆ ಎಚ್ಚರಿಕೆ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜಾರಿಗೊಳಿಸಿರುವ ಒಂದು ವಾರದ ಲಾಕ್‌ಡೌನ್ ಮಂಗಳವಾರ ರಾತ್ರಿ 8 ಗಂಟೆಯಿಂದ ಅನುಷ್ಠಾನಕ್ಕೆ ಬಂದಿದ್ದು, ಜನಜೀವನ ಬಹುತೇಕ ಸ್ತಬ್ಧಗೊಂಡಿದೆ.

ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಅಗತ್ಯ ವಸ್ತುಗಳಾದ ತರಕಾರಿ, ಹಾಲು, ಮಾಂಸ ಮತ್ತಿತರ ವಸ್ತುಗಳ ಅಂಗಡಿ ತೆರೆದಿದ್ದು, ಮಧ್ಯಾಹ್ನದ ಬಳಿಕ ಸಂಪೂರ್ಣ ಲಾಕ್‌ಡೌನ್ ಆಗಲಿದೆ. ಅಗತ್ಯ ವಸ್ತುಗಳ ಖರೀದಿಯ ನೆಪದಲ್ಲಿ ಕೆಲವೆಡೆ ನಿವಾಸಿಗಳು ಮನೆಯಿಂದ ಬೆಳಗ್ಗೆ ಹೊರಗೆ ಬರುತ್ತಿರುವುದು ಕಂಡುಬಂತು.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲಾ ಸಾರಿಗೆ ವ್ಯವಸ್ಥೆ ಕಾರ್ಯಾಚರಿಸಿಲ್ಲ. ಟ್ಯಾಕ್ಸಿ, ಆಟೋ ಕೂಡ ರಸ್ತೆಗಿಳಿದಿಲ್ಲ. ಆದರೆ ಕೊರೊನಾ ವಾರಿಯರ್ಸ್‌ಗಳನ್ನು ಸಾಗಿಸಲು ಸೀಮಿತ ಸಂಖ್ಯೆಯಲ್ಲಿ ಬಿಎಂಟಿಸಿ ಬಸ್ ಸಂಚರಿಸುತ್ತಿದೆ.

ಬೆಳಗ್ಗೆ 5ರಿಂದ ಮಧ್ಯಾಹ್ನ‌ 12 ರವರೆಗೆ ದಿನಸಿ ಅಂಗಡಿ ತೆರೆಯಲು ಅವಕಾಶ ಕಲ್ಪಿಸಲಾಗಿದ್ದು, ಆಹಾರ ಪೂರೈಕೆದಾರರಿಗೆ ರಾತ್ರಿ 8ಕ್ಕೆ ತಮ್ಮ ಸೇವೆ ನೀಡಲು ಅನುಮತಿಸಲಾಗಿದೆ.ಮೆಡಿಕಲ್ ಶಾಪ್​ಗಳು ಮಾತ್ರ ರಾತ್ರಿವರೆಗೂ ಸೇವೆ ಸಲ್ಲಿಸಬಹುದು ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಅನಗತ್ಯವಾಗಿ ಹೊರಗೆ ಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದ ದೃಶ್ಯ ಕೆಲವೆಡೆ ಕಂಡುಬಂತು. ವಿಶೇಷವಾಗಿ ದ್ವಿಚಕ್ರ, ವಾಹನ ಮತ್ತು ಕಾರು ಅಲಲ್ಲಿ ಸಂಚರಿಸುತ್ತಿದ್ದುದು ಕಂಡುಬಂತು. ಕಂಪನಿ ಗುರುತಿನ ಚೀಟಿ, ಆಸ್ಪತ್ರೆಯ ಚೀಟಿಗಳನ್ನು ತೋರಿಸಿ ಮುಂದೆ ಸಾಗುತ್ತಿದ್ದುದು ಕಂಡುಬಂತು. ಹಿಂದಿನ ಲಾಕ್‌ಡೌನ್‌ನಷ್ಟು ಕಠಿಣ ನಿಯಮಗಳನ್ನು ಈ ಬಾರಿ ಪೊಲೀಸರು ಅನುಸರಿಸಿಲ್ಲ. ಪೊಲೀಸರು ಸ್ವಲ್ಪ ಮೃದುಧೋರಣೆ ತಾಳಿರುವುದು ಈ ಬಾರಿಯ ಲಾಕ್ ಡೌನ್ ವೇಳೆ ಕಂಡುಬಂತು.

ವಿಮಾನ ನಿಲ್ದಾಣದ ರಸ್ತೆಯ ಮೇಲ್ಸೇತುವೆ ಹೊರತುಪಡಿಸಿ ನಗರದ ಬಹುತೇಕ ಎಲ್ಲಾ ಮೇಲ್ಸೇತುವೆಗಳನ್ನು ನಿನ್ನೆ ರಾತ್ರಿಯೇ ಬಂದ್ ಮಾಡಲಾಗಿದೆ. ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ ಟ್ಯಾಕ್ಸಿ ಸೇವೆಗೆ ಅವಕಾಶ ನೀಡಲಾಗಿದೆ. ಬೆಂಗಳೂರಿನ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನ ಸಂಚಾರಕ್ಕೆ ತಡೆ ಒಡ್ಡಿದ್ದಾರೆ. ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಬೆಳಗ್ಗಿಯಿಂದಲೇ ನೂರಾರು ಮಂದಿ ಪ್ರಯಾಣಿಕರು ರೈಲುಗಾಗಿ ಕಾಯುತ್ತಿದ್ದ ದೃಶ್ಯ ಕಂಡುಬಂತು. 10.30ಕ್ಕೆ ಬಿಹಾರಕ್ಕೆ ಒಂದು ರೈಲು ತೆರಳುತ್ತಿದ್ದು, ಅದಕ್ಕಾಗಿ ಅವರು ಬಂದಿದ್ದಾರೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.

ಮಧ್ಯಾಹ್ನ 12 ಗಂಟೆಯ ಬಳಿಕ ಸಂಪೂರ್ಣ ಲಾಕ್‌ಡೌನ್ ಆಗಲಿದೆ. ಯಾರು ಕೂಡ ಹೊರಗೆ ಬರಬಾರದು. ಅನಿವಾರ್ಯವಾದರೆ ಪೊಲೀಸ್ ಬಲ ಪ್ರಯೋಗಿಸಲಾಗುವುದು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಲಾಕ್‌ ಡಾನ್ ಜಾರಿಗೆ ಎಲ್ಲಾ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ. ಹಲವೆಡೆ ಬ್ಯಾರಿಕೇಡ್‌ ಹಾಕಿ ವಾಹನ ಸಂಚಾರಕ್ಕೆ ತಡೆ
ನೀಡಲಾಗಿದೆ.

12 ಗಂಟೆಯವರೆಗೆ ದಿನಸಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ವಾಹನ ದಟ್ಟಣೆ ಕಡಿಮೆಯಾಗಿದೆ. ಲಾಕ್‌ಡೌನ್ ವಾತಾವರಣ ನಿರ್ಮಾಣವಾಗಿದೆ. 12 ಗಂಟೆಯ ನಂತರ ಕಟ್ಟುನಿಟ್ಟಾಗಿ ಲಾಕ್‌ಡೌನ್ ಜಾರಿಯಾಗಲಿದೆ. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಬಲ ಪ್ರಯೋಗಿಸಲಾಗುವುದು. ಪೊಲೀಸ್ ಬಲಪ್ರಯೋಗ ಬಳಕೆಗೆ ಅವಕಾಶ ನೀಡಬೇಡಿ ಎಂದು ಗೃಹ ಸಚಿವರು ಮನವಿ ಮಾಡಿದರು.


Spread the love

Exit mobile version