ಲಾಕ್ ಡೌನ್ ಸಡಿಲಿಕೆ ವಾಪಾಸ್ ಪಡೆದ ಸರ್ಕಾರ: ದ್ವಿಚಕ್ರ ವಾಹನಗಳ ಓಡಾಟಕ್ಕೆ ಅವಕಾಶ ಇಲ್ಲ
ಬೆಂಗಳೂರು: ಲಾಕ್ ಡೌನ್ ಸಡಿಲಿಕೆ ನಿಯಮವನ್ನು ಸರ್ಕಾರ ವಾಪಾಸ್ ಪಡೆದುಕೊಂಡಿದೆ.ಕಂಟೇನ್ ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳ ಓಡಾಟಕ್ಕೆ ನೀಡಲಾಗಿದ್ದ ಅವಕಾಶವನ್ನು ಹಿಂಪಡೆದುಕೊಂಡಿದ್ದು, ಏ.20ರಿಂದ ಯಥಾಸ್ಥಿತಿ ಮುಂದುವರೆಯಲಿದೆ.
ಏಪ್ರಿಲ್ 20ರ ನಂತರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ(ಐಟಿ, ಬಿಟಿ) ಶೇ. 33ರಷ್ಟು ಸಿಬ್ಬಂದಿ ಕಚೇರಿಗೆ ಹೋಗಿ ಕಾರ್ಯ ನಿರ್ವಹಿಸಲು ನೀಡಲಾಗಿದ್ದ ಅವಕಾಶವನ್ನು ಕೂಡಾ ಸರ್ಕಾರ ಹಿಂಪಡೆದುಕೊಂಡಿದೆ. ಅಗತ್ಯ ವಸ್ತುಗಳಿಗೆ ಮಾತ್ರ ಸರ್ಕಾರ ಅವಕಾಶ ನೀಡಿದೆ
ಸರ್ಕಾರ ಮಧ್ಯಾಹ್ನ ತೆಗೆದುಕೊಂಡ ಮುಕ್ತ ಅವಕಾಶ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿರ್ಧಾರವನ್ನು ವಾಪಾಸ್ ಪಡೆದುಕೊಂಡಿದೆ.
ಪಾಸ್ ಪಡೆದ ದ್ವಿಚಕ್ರ ವಾಹನ ಸವಾರರು ಹಾಗೂ ಐಟಿ ಬಿಟಿ ಕ್ಷೇತ್ರದಲ್ಲಿ ಅಗತ್ಯ ಸೇವೆಯಲ್ಲಿರುವವರಿಗೆ ಮಾತ್ರ ಅವಕಾಶ ನೀಡಲು ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಕೆ. ಸುಧಾಕರ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.