ಲಾಕ್ ಡೌನ್ ಸಮಯದಲ್ಲಿ ತವರೂರಲ್ಲಿ ಕೃಷಿಯಲ್ಲಿ ತೊಡಗಿದ ಮುಂಬಯಿಯ ಉದ್ಯಮಿ ಗಿರೀಶ್ ಶೆಟ್ಟಿ ತೆಳ್ಳಾರು ಪರಿವಾರ
ಮುಂಬಯಿ : ಕಳೆದ ಎರಡುವರೆ ತಿಂಗಳಿಗಿಂತಲೂ ಅಧಿಕ ಕಾಲ ಮುಂಬಯಿ ಮಹಾನಗರವು ಮೌನವಾಗಿದೆ. ಹೋಟೇಲು ಉದ್ಯಮವು ಸ್ಥಗಿತಗೊಂಡಿದ್ದು ಅನೇಕ ಹೋಟೇಲು ಉದ್ಯಮಿಗಳು ಕೂಡಾ ತಮ್ಮ ಈ ಸಮಯವನ್ನು ತವರೂರಲ್ಲಿ ಉತ್ತಮ ಕಾರ್ಯದಲ್ಲಿ ಕಳೆಯಲು ಊರಿಗೆ ತಲಪಿದ್ದರೆ ಅನೇಕರು ಲೋಕ್ ಡೌನ್ ಗೆ ಮೊದಲೇ ಊರಿಗೆ ಹೋಗಿದ್ದು ಮುಂಬಯಿಗೆ ಹಿಂತಿರುಗಲು ಅಸಾಧ್ಯವಾಗದೆ ಅಲ್ಲೇ ಉಳಿದಿರುವರು. ಕೊರೋನಾ ಕಾಲದಲ್ಲಿ ಮುಂಬಯಿಯಿಂದ ಊರು ಸೇರಿದ ಕರಾವಳಿಯ ತುಳು-ಕನ್ನಡಿಗರು ಯಾರೂ ಸುಮ್ಮನಿರದೆ ಯಾವುದಾದರೂ ಉತ್ತಮ ಕೆಲಸದಲ್ಲಿ ನಿರತರಾಗಿದ್ದಾರೆ. ಕರಾವಳಿಯ ನಮ್ಮವರು ಮಹಾನಗರದಲ್ಲಿ ಎಷ್ಟೇ ಉನ್ನತ ಮಟ್ಟದಲ್ಲಿದ್ದರೂ ತಮ್ಮ ಮೂಲ ಬೇರನ್ನು ಮರೆಯುದಿಲ್ಲ ಎಂಬುದಕ್ಕೆ ಮುಂಬಯಿಯ ಜನಪ್ರಿಯ ಯುವ ಹೋಟೇಲು ಉದ್ಯಮಿಗಳೂ, ಬಂಟರ ಸಂಘ ಮುಂಬಯಿ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಗಿರೀಶ್ ಶೆಟ್ಟಿ ತೆಳ್ಳಾರು ಪರಿವಾರ ಉದಾಹರಣೆಯಾಗಿದ್ದಾರೆ.
ಮಳೆ ಪ್ರಾರಂಭವಾದಂತೆ ಕಾರ್ಕಳ ಸಮೀಪದ ತೆಳ್ಳಾರು ಗ್ರಾಮದಲ್ಲಿರುವ ಇವರಿಗೆ ಸೇರಿದ ತೋಟದಲ್ಲಿ ಅವರ ಮಾತೃಶ್ರೀ ಅಂಬಾ ರಮೇಶ್ ಶೆಟ್ಟಿ ಮತ್ತು ಅವರ ಸಹೋದರರ ಮಾರ್ಗದರ್ಶನದಲ್ಲಿ ತೆಳ್ಳಾರು ಪರಿವಾರದವರು ಕೃಷಿ ಮಾಡಲು ಪ್ರಾರಂಬಿಸಿರುವರು. ಮಹಾನಗರದಲ್ಲಿ ಹೆಲ್ಮೆಟ್ ಹಾಕುವ ತಲೆಯಲ್ಲಿ ತವರೂರಲ್ಲಿ ಮುಟ್ಟಾಳೆಯನ್ನು ಧರಿಸಿ ಗೊಬ್ಬರ ಹೊರಲು ಯಾ ಕೊಟ್ಟು ಪಿಕ್ಕಾಸನ್ನು ಉಪಯೋಗಿಸಿ ಮಣ್ಣನ್ನು ಹಗೆದು ಹೊಂಡ ತೆಗೆಯಲು ಇಂದಿನ ಈ ಯುವ ಜನಾಂಗ ಹಿಂಜರಿಯದೆ ತಮ್ಮ ತೋಟದಲ್ಲಿ ಪಲವತ್ತಾದ ಕೃಷಿಯನ್ನು ಮಾಡುವುದರಲ್ಲಿ ತೊಡಗಿದ್ದು ನಿಜಕ್ಕೂ ಪ್ರಶಂಸನೀಯ. ಈ ಕಾರ್ಯದಲ್ಲಿ ಗಿರೀಶ್ ಶೆಟ್ಟಿ ತೆಳ್ಳಾರು, ರಾಜೇಶ್ ಶೆಟ್ಟಿ ತೆಳ್ಳಾರು, ಸುದೇಶ್ ಶೆಟ್ಟಿ ತೆಳ್ಳಾರು, ಯೋಗೇಶ್ ಶೆಟ್ಟಿ ತೆಳ್ಳಾರು, ಸಂದರ್ಶ್ ಶೆಟ್ಟಿ, ಶ್ರೇಯಾಶ್ ಶೆಟ್ಟಿ, ಕೀರ್ತಿ ಶೆಟ್ಟಿ, ಸುಕೇಶ್ ಶೆಟ್ಟಿ ಮೊದಲಾದವರು ಕೈಜೋಡಿಸಿರುವರು. ಈ ರೀತಿ ಯುವ ಜನರಲ್ಲಿ ನಶಿಸಿಹೋಗುತ್ತಿರುವ ತೋಟಗಾರಿಕೆ ಕೊರೋನಾದಿಂದಾಗಿ ಹೊಸ ಕ್ರಾಂತಿಯನ್ನು ಎಬ್ಬಿಸಿದೆ. ಹಿರಿಯರ ಕಾಲದಿಂದಲೇ ನಡೆಯುತ್ತಾ ಬಂದಂತಹ ಪದ್ದತಿ ಮುಂದಿನ ಪೀಳಿಗೆಗೂ ಮಾರ್ಗದರ್ಶನವಾಗಲಿ, ಆಧುನಿಕ ಜೀವನ ಪದ್ದತಿಯೊಂದಿಗೆ ಹಿರಿಯರು ಸಾಧನೆಯನ್ನು ನೆನಪಿಸುವಂತಾಗಲಿ.
ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್